2011ರ ಕೆಎಎಸ್ ಬ್ಯಾಚ್ ಆಯ್ಕೆ ಪಟ್ಟಿಗೆ ಮರುಜೀವ ಪ್ರಯತ್ನಕ್ಕೆ ಆಕ್ಷೇಪ

ಬೆಂಗಳೂರು, ಫೆ. 12: ‘ಭ್ರಷ್ಟಾಚಾರ ಕಾರಣದಿಂದ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ 2011ರ ಕೆಪಿಎಸ್ಸಿ ಆಯ್ಕೆ ಮಾಡಿದ್ದ 362 ಮಂದಿ ಕೆಎಎಸ್ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ರದ್ದು ಮಾಡಿದ್ದರೂ ಸರಕಾರ, ಆಯ್ಕೆ ಪಟ್ಟಿಗೆ ಮರುಜೀವ ನೀಡಲು ಹೊರಟಿರುವುದು ಸರಿಯಲ್ಲ' ಎಂದು ಆಕ್ಷೇಪಿಸಿ 2011ರ ಬ್ಯಾಚ್‍ನ ಕೆಎಎಸ್ 362 ಹುದ್ದೆಗಳ ಹೋರಾಟ ಸಮಿತಿ, ರಾಜ್ಯ ದಲಿತ ಪದವೀಧರರ ಅಸೋಸಿಯೇಷನ್ ಪ್ರತಿಭಟನೆ ನಡೆಸಿದ್ದಾರೆ.
ಶನಿವಾರ ಇಲ್ಲಿನ ಮೌರ್ಯವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಮಾತನಾಡಿ, ‘ನ್ಯಾಯಾಲಯದಲ್ಲಿ ಭ್ರಷ್ಟಾಚಾರವೆಸಗಿರುವ 362 ಹುದ್ದೆಗಳ ಆಯ್ಕೆ ಪಟ್ಟಿ ಅಸಿಂಧುಗೊಳಿಸಿದ್ದರೂ ಸರಕಾರ ಆಯ್ಕೆ ಪಟ್ಟಿಗೆ ಮರು ಜೀವ ನೀಡಲು ಮುಂದಾಗಿದೆ. ಕೋರ್ಟ್ ಆದೇಶಕ್ಕೆ ಬೆಲೆ ಇಲ್ಲದಂತೆ ಆಗಿದೆ ಎಂದು ಟೀಕಿಸಿದರು.
‘362 ಹುದ್ದೆಗಳ ಕೆಪಿಎಸ್ಸಿ ನಡೆಸಿದ ವ್ಯಾಪಕ ಭ್ರಷ್ಟಾಚಾರ ಹಿನ್ನೆಲೆಯಲ್ಲಿ ಸಿಐಡಿ ವರದಿಗಳ ಅನ್ವಯ ಸರಕಾರವು ನೇಮಕಾತಿ ಅಧಿಸೂಚನೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು. ಪ್ರತಿಭಾನ್ವಿತ ನಿರುದ್ಯೋಗ ಪದವೀಧರರು 2011ರಲ್ಲಿ ಕರೆಯಲಾಗಿದ್ದ ಪರೀಕ್ಷೆಯು ಸುಪ್ರೀಂ ಕೋರ್ಟ್‍ನ ಮೂರು ತೀರ್ಪುಗಳು ಹಾಗೂ ಹೈಕೋರ್ಟ್‍ನ 2 ತೀರ್ಪುನಲ್ಲಿ ನೀಡಿದ್ದ ಆದೇಶಗಳಲ್ಲಿ ಸಂಪೂರ್ಣ ರದ್ದಾಗಿರುತ್ತದೆ' ಎಂದು ತಿಳಿಸಿದರು.
‘ರಾಜ್ಯ ಸರಕಾರ ಒಂದು ವೇಳೆ 362 ಕೆಎಎಸ್ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿದ್ದಲ್ಲಿ ಸಿಎಂ ಮನೆ ಮುಂದೆ ಧರಣಿ ನಡೆಸಲಾಗುವುದು. ಹೀಗಾಗಿ ಸರಕಾರ ತನ್ನ ನಿರ್ಧಾರವನ್ನು ಕೂಡಲೇ ಮರುಪರಿಶೀಲಿಸಿ 2011ರ 362 ಮಂದಿ ಕೆಎಎಸ್ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಿ ಪಾರದರ್ಶಕವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಾರ್ವಜನಿಕ ಸೇವೆಗೆ ನೇಮಕಾತಿ ಮಾಡಬೇಕು ಎಂದು ದಲಿತ ಪದವೀಧರರ ಸಂಘದ ಅಧ್ಯಕ್ಷ ಲೋಕೇಶ್ ವಿ. ಆಗ್ರಹಿಸಿದರು.








