ವಾಸ್ತವ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆಗೆ ಚೀನಾ ಹೊಣೆ: ಎಸ್.ಜೈಶಂಕರ್
ಹೊಸದಿಲ್ಲಿ, ಫೆ.12: ಚೀನಾ ಭಾರತದೊಂದಿಗಿನ ತನ್ನ ಗಡಿಯಲ್ಲಿ ಸೈನಿಕರನ್ನು ಜಮಾವಣೆಗೊಳಿಸುವ ಮೂಲಕ ತನ್ನ ಲಿಖಿತ ಬದ್ಧತೆಗಳನ್ನು ಉಲ್ಲಂಘಿಸಿತ್ತು ಮತ್ತು ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿನ ಪ್ರಕ್ಷುಬ್ಧ ಸ್ಥಿತಿಗೆ ಹೊಣೆಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಶನಿವಾರ ಹೇಳಿದರು.
ಮೆಲ್ಬರ್ನ್ನಲ್ಲಿ ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಮರಿಸ್ ಪೇಯ್ನ ಅವರೊಂದಿಗೆ ಭೇಟಿಯ ಬಳಿಕ ಮಾತನಾಡಿದ ಜೈಶಂಕರ್, ಭಾರತ-ಚೀನಾ ಸ್ಥಿತಿಯ ಬಗ್ಗೆ ತಾವು ಚರ್ಚಿಸಿದ್ದಾಗಿ ತಿಳಿಸಿದರು. ದೊಡ್ಡ ದೇಶವೊಂದು ಲಿಖಿತ ಬದ್ಧತೆಗಳನ್ನು ಗೌರವಿಸದಿದ್ದಾಗ ಅದು ಇಡೀ ಅಂತರರಾಷ್ಟ್ರೀಯ ಸಮುದಾಯಕ್ಕೆ ಕಾನೂನುಬದ್ಧ ಕಳವಳದ ವಿಷಯವಾಗುತ್ತದೆ ಎಂದು ತಾನು ಭಾವಿಸಿದ್ದೇನೆ ಎಂದರು. ಭಾರತ,ಆಸ್ಟ್ರೇಲಿಯಾ,ಜಪಾನ್ ಮತ್ತು ಅಮೆರಿಕಗಳನ್ನು ಒಳಗೊಂಡಿರುವ ಕ್ವಾಡ್ ಗುಂಪಿನ ವಿದೇಶಾಂಗ ಸಚಿವರು ಮೆಲ್ಬರ್ನ್ನಲ್ಲಿ ಮಾತುಕತೆಗಳನ್ನು ನಡೆಸುತ್ತಿದ್ದಾರೆ.
ಜೈಶಂಕರ್ ಚೀನಾವನ್ನು ಕಟುವಾದ ಶಬ್ದಗಳಲ್ಲಿ ಟೀಕಿಸಿದರು ಎಂದು ವರದಿಗಳು ತಿಳಿಸಿವೆ. ಸಚಿವರ ಕಟು ಹೇಳಿಕೆಗಳು ಚೀನಾದ ನಡವಳಿಕೆಯ ಬಗ್ಗೆ ಭಾರತ ಸರಕಾರದ ಹತಾಶೆಯನ್ನು ಸೂಚಿಸುತ್ತಿವೆ ಎಂದೂ ಅವು ಹೇಳಿವೆ. ಕ್ವಾಡ್ ತನ್ನ ಉತ್ಕರ್ಷವನ್ನು ತಡೆಯಲು ಸಾಧನವಾಗಿದೆ ಎಂಬ ಚೀನಾದ ಶುಕ್ರವಾರದ ಹೇಳಿಕೆಗೆ ಪ್ರತಿಕ್ರಿಯಿಸಿದ ಜೈಶಂಕರ್,ಪ್ರದೇಶದ ಶಾಂತಿ,ಸಮೃದ್ಧಿ,ಸ್ಥಿರತೆ ಕ್ವಾಡ್ನ ಗುರಿಯಾಗಿವೆ ಎಂದರು.
ಕ್ವಾಡ್ನ ನಿಲುವು ಮತ್ತು ಅದರ ಕ್ರಮಗಳು ಸ್ಪಷ್ಟವಾಗಿವೆ ಹಾಗೂ ಪುನರಪಿ ಟೀಕೆಗಳು ಅದರ ವಿಶ್ವಾಸಾರ್ಹತೆಯನ್ನು ಕುಗ್ಗಿಸುವುದಿಲ್ಲ ಎಂದೂ ಅವರು ಹೇಳಿದರು.







