ಹಿಜಾಬ್ ವಿವಾದ: ಸಮಾನತೆಗಾಗಿ ʼಏಕರೂಪ ಉಡುಗೆ ಸಂಹಿತೆʼಯ ಜಾರಿ ಕೋರಿ ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ

ಹೊಸದಿಲ್ಲಿ, ಫೆ.12: ಕರ್ನಾಟಕದಲ್ಲಿಯ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯೊಂದು ಶನಿವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದೆ. ಸಮಾನತೆಯನ್ನು ಕಾಯ್ದುಕೊಳ್ಳಲು ಹಾಗೂ ಭ್ರಾತೃತ್ವ ಮತ್ತು ರಾಷ್ಟ್ರೀಯ ಸಮಗ್ರತೆಯನ್ನು ಉತ್ತೇಜಿಸಲು ನೋಂದಾಯಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಿಗೆ ಏಕರೂಪ ಉಡುಪು ಸಂಹಿತೆಯನ್ನು ಜಾರಿಗೊಳಿಸುವಂತೆ ಕೇಂದ್ರ,ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ, ಸಮಾಜವಾದ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವ ವೌಲ್ಯಗಳನ್ನು ಮೈಗೂಡಿಸಲು ಹಾಗೂ ಭ್ರಾತೃತ್ವ,ಘನತೆ,ಏಕತೆ ಮತ್ತು ರಾಷ್ಟ್ರೀಯ ಸಮಗ್ರತೆಗಳನ್ನು ಉತ್ತೇಜಿಸಲು ಕ್ರಮಗಳನ್ನು ಸೂಚಿಸಲು ನ್ಯಾಯಾಂಗ ಆಯೋಗ ಅಥವಾ ತಜ್ಞರ ಸಮಿತಿಯನ್ನು ಸ್ಥಾಪಿಸುವಂತೆ ಕೇಂದ್ರಕ್ಕೆ ನಿರ್ದೇಶ ನೀಡುವಂತೆಯೂ ನಿಖಿಲ್ ಉಪಾಧ್ಯಾಯ ಸಲ್ಲಿಸಿರುವ ಅರ್ಜಿಯು ಕೋರಿಕೊಂಡಿದೆ.
ಪರ್ಯಾಯವಾಗಿ ಸಂವಿಧಾನದ ಪಾಲಕ ಮತ್ತು ಮೂಲಭೂತ ಹಕ್ಕುಗಳ ರಕ್ಷಕನಾಗಿರುವ ಸರ್ವೋಚ್ಚ ನ್ಯಾಯಾಲಯವು ಸಾಮಾಜಿಕ ಸಮಾನತೆಯನ್ನು ಕಾಯ್ದುಕೊಳ್ಳಲು ಹಾಗೂ ಭ್ರಾತೃತ್ವ,ಘನತೆ,ಏಕತೆ ಮತ್ತು ರಾಷ್ಟ್ರೀಯ ಸಮಗ್ರತೆಯನ್ನು ಉತ್ತೇಜಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಿ ವರದಿಯೊಂದನ್ನು ಮೂರು ತಿಂಗಳುಗಳಲ್ಲಿ ಸಿದ್ಧ ಪಡಿಸುವಂತೆ ಭಾರತದ ಕಾನೂನು ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಕರ್ನಾಟಕದಲ್ಲಿ ಹಿಜಾಬ್ ನಿರ್ಬಂಧದ ವಿರುದ್ಧ ಫೆ.10ರಂದು ದಿಲ್ಲಿಯಲ್ಲಿ ನಡೆದಿದ್ದ ಪ್ರತಿಭಟನೆಗಳನ್ನು ಪ್ರಸ್ತಾಪಿಸಿರುವ ಅರ್ಜಿಯು, ಶಿಕ್ಷಣ ಸಂಸ್ಥೆಗಳು ಜಾತ್ಯತೀತ ಸಾರ್ವಜನಿಕ ಸ್ಥಳಗಳಾಗಿದ್ದು ಜ್ಞಾನ ಮತ್ತು ಬುದ್ಧಿವಂತಿಕೆ,ಉದ್ಯೋಗ,ಉತ್ತಮ ಆರೋಗ್ಯಗಳನ್ನು ನೀಡುವ ಜೊತೆಗೆ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆಯನ್ನು ಸಲ್ಲಿಸಲು ಉದ್ದೇಶಿತವಾಗಿವೆ ಹೊರತು ಅನಗತ್ಯ ಮತ್ತು ಅಗತ್ಯ ಧಾರ್ಮಿಕ ಆಚರಣೆಗಳನ್ನು ಅನುಸರಿಸಲಲ್ಲ ಎಂದು ಹೇಳಿದೆ.
ಶಿಕ್ಷಣ ಸಂಸ್ಥೆಗಳ ಜಾತ್ಯತೀತ ಗುಣಲಕ್ಷಣಗಳನ್ನು ಸಂರಕ್ಷಿಸಲು ಎಲ್ಲ ಶಾಲಾಕಾಲೇಜುಗಳಲ್ಲಿ ಏಕರೂಪದ ಉಡುಪು ಸಂಹಿತೆಯನ್ನು ಜಾರಿಗೊಳಿಸುವುದು ಅತ್ಯಂತ ಅಗತ್ಯವಾಗಿದೆ,ಇಲ್ಲದಿದ್ದರೆ ನಾಳೆ ನಾಗಾ ಸಾಧುಗಳು ಕಾಲೇಜುಗಳಲ್ಲಿ ಪ್ರವೇಶ ಪಡೆದುಕೊಳ್ಳಬಹುದು ಮತ್ತು ಅಗತ್ಯ ಧಾರ್ಮಿಕ ಪದ್ಧತಿಯನ್ನು ಉಲ್ಲೇಖಿಸಿ ವಿವಸ್ತ್ರರಾಗಿ ತರಗತಿಗಳಿಗೆ ಹಾಜರಾಗಬಹುದು ಎಂದಿರುವ ಅರ್ಜಿಯು,ಸಮಾನ ಉಡುಗೆ ಸಂಹಿತೆಯು ಏಕರೂಪತೆಯನ್ನು ಕಾಯ್ದುಕೊಳ್ಳಲು ಮಾತ್ರವಲ್ಲ,ವಿವಿಧ ಜಾತಿ, ಜನಾಂಗ, ನಂಬಿಕೆ, ಧರ್ಮ, ಸಂಸ್ಕೃತಿ ಮತ್ತು ಸ್ಥಳಗಳ ವಿದ್ಯಾರ್ಥಿಗಳ ನಡುವೆ ಸೌಹಾರ್ದ ಭಾವನೆಯನ್ನು ಮೂಡಿಸಲೂ ಅಗತ್ಯವಾಗಿದೆ ಎಂದಿದೆ.







