Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪ್ರೊಫೆಸರ್ ಎಂಡಿಎನ್ ಕಲಿಸಿದ ಪಾಠಗಳು

ಪ್ರೊಫೆಸರ್ ಎಂಡಿಎನ್ ಕಲಿಸಿದ ಪಾಠಗಳು

ಇಂದು ಕರ್ನಾಟಕದ ಹಲವು ಚಳವಳಿಗಳನ್ನು ರೂಪಿಸಿದ ಧೀಮಂತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರು ಹುಟ್ಟಿದ ದಿನ

ಕಿ.ರಂ.ನಾಗರಾಜಕಿ.ರಂ.ನಾಗರಾಜ13 Feb 2022 12:05 AM IST
share
ಪ್ರೊಫೆಸರ್ ಎಂಡಿಎನ್ ಕಲಿಸಿದ ಪಾಠಗಳು

ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರು (13 ಫೆಬ್ರವರಿ 1936- 3 ಫೆಬ್ರವರಿ 2004) ನಮಗೆಲ್ಲ ಚಳವಳಿಯ ನಿಜವಾದ ಅರ್ಥವನ್ನೂ, ಅದರ ಕ್ರಿಯೆಯನ್ನೂ ನಮ್ಮ ತಾರುಣ್ಯದಲ್ಲಿ ಹೇಳಿಕೊಟ್ಟರು. ಚಳವಳಿ ಎನ್ನುವುದು ಕೇವಲ ಬೇಡಿಕೆಗಾಗಿ ನಡೆಯುವಂತಹದ್ದಲ್ಲ; ಬೇಡಿಕೆಯ ಚಳವಳಿಗೂ, ನಾವು ನಿರಂತರವಾಗಿ ಚಳವಳಿಗಳಲ್ಲಿ ತೊಡಗುತ್ತಾ ಬರುವುದಕ್ಕೂ ಎಂಥ ವ್ಯತ್ಯಾಸವಿದೆ ಎನ್ನುವುದನ್ನು ನಮಗೆ ಕಲಿಸಿಕೊಟ್ಟರು. ಕೇವಲ ಬೆರಳೆಣಿಕೆಯಷ್ಟು ಜನ ಅವರ ಜತೆ ಮಾತಾಡುತ್ತಾ ಮಾತಾಡುತ್ತಾ ನಿಜವಾದ ರಾಜಕೀಯ ಪ್ರಜ್ಞೆಯನ್ನು ಹಾಗೂ ಸಾಂಸ್ಕೃತಿಕ ಪ್ರಜ್ಞೆಯನ್ನು ಕಲಿತರು. ಒಬ್ಬ ವ್ಯಕ್ತಿ ಹೇಗೆ ಇತರರಿಗೆ ಈ ಬಗೆಯ ಪ್ರಜ್ಞೆಗಳನ್ನು ಕಲಿಸಬಹುದೆನ್ನುವುದನ್ನು ನಂಜುಂಡಸ್ವಾಮಿಯವರ ನಾಯಕತ್ವ ತೋರಿಸುತ್ತದೆ. ನಾವೆಲ್ಲ ಅವರ ವಿಶ್ಲೇಷಣೆಯಿಂದ ಪ್ರಭಾವಿತರಾದೆವು. ಆ ಕಾಲಕ್ಕೆ ಬಹಳ ಸಾಮಾನ್ಯವಾದ ದಿನನಿತ್ಯದ ಮಾತುಗಳ ಮುಖಾಂತರವಾಗಿಯೇ ಒಂದು ಒಳ್ಳೆಯ ರಾಜಕೀಯ ಶಿಕ್ಷಣ ಕೊಡುವುದು ಹೇಗೆ ಎಂಬು ದನ್ನು ನಂಜುಂಡಸ್ವಾಮಿಯವರ ಕ್ರಿಯೆಗಳು ತಿಳಿಸಿ ಕೊಟ್ಟವು.

ಸಾಮಾನ್ಯವಾಗಿ ಈಗಿನ ಅನೇಕ ರಾಜಕೀಯ ಚಳವಳಿಗಳು ನಾಯಕಕೇಂದ್ರಿತ ಚಳವಳಿಗಳಾಗಿರುವುದರಿಂದ ಅವು ವಿಫಲವಾಗುತ್ತವೆ. ಅವು ನಿಜವಾದ ಶಿಕ್ಷಣಕೇಂದ್ರಿತ ಚಳವಳಿಗಳಲ್ಲ. ಆದರೆ ಎಂ.ಡಿ.ಎನ್. ಗಾಂಧೀಜಿ ಹಾಗೂ ಲೋಹಿಯಾ ಅವರಿಂದ ಅನೇಕ ಅಂಶಗಳನ್ನು ಕಲಿತಿದ್ದರು. ನಂಜುಂಡಸ್ವಾಮಿಯವರಷ್ಟು ಸರಳವಾಗಿ, ಸಹಜವಾಗಿ, ಖಚಿತವಾಗಿ, ಖಂಡಿತವಾಗಿ ಸಂವಾದ ಮಾಡುವಂತ, ಜನರಿಗೆ ತಲುಪಿಸುವಂಥ ಸಾಮರ್ಥ್ಯ ತುಂಬ ಕಡಿಮೆ ಜನಕ್ಕಿದೆ ಎಂಬುದನ್ನು ಕಂಡುಕೊಂಡಿದ್ದೇನೆ. ಎಂ.ಡಿ.ಎನ್. ಕೇವಲ ರೈತ ನಾಯಕರಷ್ಟೇ ಅಲ್ಲ, ಅವರು ಇಡೀ ರೈತ ಸಮುದಾಯಕ್ಕೆ ಹೇಗೋ ಹಾಗೆಯೇ ವಿದ್ಯಾರ್ಥಿ ಸಮುದಾಯಕ್ಕೂ ಹೊಸ ಶಿಕ್ಷಣ ಕ್ರಮವನ್ನು ಹಾಗೂ ಹೊಸ ನೈತಿಕತೆಯ ಕ್ರಮವನ್ನು ತೋರಿಸಿಕೊಟ್ಟವರಾಗಿದ್ದರು. ಬುದ್ಧಿಜೀವಿಯ ಕೆಲಸವೇ ಸಂಘಟನೆ ಹಾಗೂ ಅರ್ಥವತ್ತಾದ 'ಅಧಿಕಾರ'ದ ಕಡೆ ಚಲಿಸುವುದು ಎಂಬುದನ್ನು ಅವರು ಕರ್ನಾಟಕದ ಸಂದರ್ಭದಲ್ಲಿ ರೂಪಿಸಿದರು. ಬುದ್ಧಿಜೀವಿ ಎಂಬ ನೆಲೆಯನ್ನೇ ಹೋರಾಟಕೇಂದ್ರಿತವಾಗಿಸಿಕೊಂಡದ್ದು ಅವರ ವಿಶಿಷ್ಟತೆ. ನಮ್ಮ ಸುತ್ತಣ ನಿತ್ಯ ವಿದ್ಯಮಾನಗಳ ಬಗೆಗೆ ತಮ್ಮ ಮನಸ್ಸಿನ ಎಚ್ಚರವನ್ನು ತೋರುವುದಷ್ಟೇ ಆಲ್ಲದೆ ನೇರ ಕ್ರಿಯೆಗಳಲ್ಲಿ ತೊಡಗಿದ್ದು ಹಾಗೂ ರೈತ ಸಮುದಾಯವನ್ನು ತೊಡಗಿಸಿದ್ದು ಅವರ ಬಹುದೊಡ್ಡ ಸಾಧನೆ. ಎಂ.ಡಿ.ಎನ್. ನನಗೆ ಇಂತಹ ಪುಸ್ತಕ ಓದು, ಅಂತಹ ಪುಸ್ತಕ ಓದು ಎಂದು ಹೇಳುತ್ತಿರಲಿಲ್ಲ. ಆದರೆ ಅವರು ಓದಿದ್ದನ್ನೆಲ್ಲ ಬಹಳ ನೇರವಾಗಿ ಖಚಿತವಾಗಿ ಬಹಳ ಸೂಕ್ಷ್ಮವಾಗಿ ತಿಳಿಸಿಕೊಟ್ಟುಬಿಡುತ್ತಿದ್ದರು. ನಮಗೆ ಅವರ ಜತೆ ಕೂತಾಗ ನಾವು ಇನ್ನೂ ಓದದೇ ಇರುವ ಪುಸ್ತಕವನ್ನು ಓದಿದ ಅನುಭವವೇ ಬಂದುಬಿಡುತ್ತಿತ್ತು. ಅವರು ಬರೀ ರೈತರ ಪ್ರಶ್ನೆಯನ್ನು ಮಾತ್ರ ಎತ್ತಿ ಮಾತನಾಡುತ್ತಿರಲಿಲ್ಲ. ಅವರು ಯುವಕರ ಸಮಸ್ಯೆಯ ಬಗ್ಗೆ ಮಾತನಾಡುತ್ತಿದ್ದರು. ಭಾಷಾ ಸಮಸ್ಯೆಯ ಬಗ್ಗೆ ಅವರ ಬಳಿ ಉತ್ತರಗಳಿದ್ದವು. ಅವರು ಸಾಹಿತ್ಯದ ಪ್ರಶ್ನೆಗಳ ಬಗೆಗೂ ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡುವವರಾಗಿದ್ದರು. ಚೆನ್ನಾಗಿ ಪರಿಶೀಲಿಸಿ ಹೇಳಬಲ್ಲವರಾಗಿದ್ದರು. ನಾನು ಆ ಕಾಲದಲ್ಲಿ ಸಮಾಜವಾದ, ಮಾರ್ಕ್ಸ್‌ವಾದ ಇವನ್ನೆಲ್ಲ ನಮ್ಮ ನಮ್ಮ ತರಗತಿ ಪಾಠಗಳ ನಡುವೆ ಸೇರಿಸಿ ಹೇಗೆ ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂಬ ಬಗ್ಗೆ ಅವರ ಸಲಹೆ ಕೇಳುತ್ತಿದ್ದೆ. ಅದನ್ನು ಹೇಗೆ ಹೇಳಬೇಕೆಂಬುದನ್ನು ಕುರಿತು ಎಂ.ಡಿ.ಎನ್. ಚರ್ಚಿಸಿದರು. 'ಆದರೆ ಮೇಲಿಂದ ಮೇಲೆ ಅದನ್ನೇ ಹೇಳೋಕೆ ಹೋಗಬೇಡಿ. ಸಾಹಿತ್ಯವನ್ನು ಹೇಳುತ್ತಲೇ ಅವೆಲ್ಲವನ್ನೂ ಸೇರ್ಪಡೆ ಮಾಡಬೇಕು' ಎಂದರು.

ಯಾವುದೇ ಚಳವಳಿ ಅಂದಂದೇ ಹುಟ್ಟಿ ಕೊನೆಗೊಳ್ಳುವುದಿಲ್ಲ, ಅದು ನಿರಂತರವಾದದ್ದು, ಜಾಗೃತವಾದದ್ದು. ಅದರಿಂದ ಉಂಟಾಗುವ ಕಾವನ್ನು ಹೇಗೆ ಜೀವಂತವಾಗಿಸಿಕೊಳ್ಳಬೇಕೆಂದು ತಿಳಿಸಿದ್ದು ಮಾತ್ರವಲ್ಲ, ಅದನ್ನು ಎಂ.ಡಿ.ಎನ್. ಆಚರಿಸಿ ತೋರಿಸಿಕೊಟ್ಟರು. ಅವರು ಯಾವುದೇ ಒಂದು ಸಮಸ್ಯೆಗೆ ಬಹಳ ಜೋರಾದಂತಹ ಬಿಗಿ ಧೋರಣೆ ತೋರುತ್ತಿರಲಿಲ್ಲ. ಆ ಸಮಸ್ಯೆಗೆ ತಕ್ಷಣದಲ್ಲಿಯೇ ಬಹಳ ಕ್ರಿಯಾತ್ಮಕವಾದಂತಹ ಪರಿಹಾರ ಕೊಡುತ್ತಿದ್ದರು. ಹೀಗಾಗಿ ಅವರು ಸೀಮಿತ ವಿದ್ಯಾರ್ಥಿಗಳ ಚೌಕಟ್ಟಿಗೆ ಒಳಗಾದ ಪ್ರೊಫೆಸರ್ ಅಲ್ಲ; ದಮನಕ್ಕೆ ಗುರಿಯಾಗುತ್ತಿರುವ ಸಮುದಾಯ ವನ್ನು ಗುರಿಯಾಗಿಟ್ಟುಕೊಂಡು ಚಿಂತನೆ, ಚರ್ಚೆ ಆರಂಭಿಸಿದ ಪ್ರೊಫೆಸರ್. ಅವರು ಮುಂದೆ ರೈತ ಚಳವಳಿ ಕಟ್ಟಿ, ಆನಂತರ ಕರ್ನಾಟಕದ ರಾಜಕೀಯ ಪ್ರವೇಶಿಸಿ ಶಾಸಕರಾಗಿ ರಾಜ್ಯಕ್ಕೆ ಒಂದು ಮುನ್ನೋಟ ಕೊಟ್ಟಾಗ ಅವರ ಈ ಎಲ್ಲಾ ಚಟುವಟಿಕೆಗಳೂ ಅದರ ಹಿನ್ನೆಲೆಯಲ್ಲಿದ್ದವು. ಅಂದರೆ ನಂಜುಂಡಸ್ವಾಮಿಯವರಿಗೆ ಸದ್ಯತನ ಎಷ್ಟು ಮುಖ್ಯವಾಗಿತ್ತೋ ದೂರದರ್ಶಿತ್ವವೂ ಅಷ್ಟೇ ಮುಖ್ಯವಾಗಿರುತ್ತಿತ್ತು. ನಂಜುಂಡಸ್ವಾಮಿಯವರನ್ನು ಅಂತರ್‌ರಾಷ್ಟ್ರೀಯ ಅಥವಾ ಭಾರತೀಯ ಮಟ್ಟದ ಯಾವುದೇ ದೊಡ್ಡ ಚಿಂತಕರ ಜೊತೆಯಲ್ಲಿಡಬಹುದು. ಆದರೆ ದೇಶೀಜ್ಞಾನದ ನಿಜವಾದ ರೂಪ ಏನು ಅನ್ನುವುದನ್ನು ಬಹಳ ಸಮರ್ಥವಾದ ಪ್ರಯೋಗಶೀಲತೆಯಿಂದ ತೋರಿಸಿದವರು ಎಂ.ಡಿ.ಎನ್. ಅಂದರೆ, ದೇಶೀಜ್ಞಾನಕ್ಕೆ ತನ್ನದೇ ಆದಂಥ ಒಂದು ನೆಲೆ ಇದೆ, ಕರ್ನಾಟಕಕ್ಕೆ ತನ್ನದೇ ಆದ ಒಂದು ಜ್ಞಾನದ ನೆಲೆ ಇದೆ ಹಾಗೂ ಇರುತ್ತದೆ; ಕರ್ನಾಟಕದ ಜನತೆಯ ಜೀವನದೃಷ್ಟಿಯೊಂದಿಗೆ ಈ ದೇಶೀ ಜ್ಞಾನವೆಂಬುದು ಬೆರೆತಿರುತ್ತದೆ. ಆ ದೇಶೀ ಜ್ಞಾನ ಕೇವಲ ಅಕಡಮಿಕ್ ಆದದ್ದಲ್ಲ; ಅದು ಇಲ್ಲಿನ ಮನುಷ್ಯರ ದಿನನಿತ್ಯದ ಸಮಸ್ಯೆಗಳೊಂದಿಗೆ ಸೇರಿರುವಂತಹದ್ದು ಎನ್ನುವುದನ್ನು ಅವರು ತಿಳಿದಿದ್ದರು. ಅದಕ್ಕೆ ತನ್ನದೇ ಆದಂಥ ಮಾದರಿಯನ್ನು ರೂಪಿಸುವ ಪ್ರಯತ್ನವನ್ನು ಅವರು ಮಾಡಿದ್ದರು.

ನುಸಿ ರೋಗದ ಸಂದರ್ಭದಲ್ಲಿ ಎಂ.ಡಿ.ಎನ್. ನಡೆಸಿದಂತಹ ಪ್ರಯೋಗ ಬಹಳ ವಿಶಿಷ್ಟವಾದದ್ದು. ಪ್ರೊಫೆಸರ್ ನೀರಾ ಪರವಾಗಿದ್ದಾರೆ ಎಂದು ತಿಳಿದು ನನಗೆ ಬಹಳ ಸಂತೋಷವಾಯಿತು. ನೀರಾದ ಉಪ ಉತ್ಪನ್ನಗಳು ಯಾವುವು ಎನ್ನುವುದನ್ನು ಅವರು ಪ್ರಯೋಗ ಮಾಡಿ ತೋರಿಸಿದರು. ಬರೀ ನೀರಾ ಮಾತ್ರವಲ್ಲ, ಆ ನೀರಾದಿಂದ ಇನ್ನೇನು ಬೇರೆ ಬೇರೆ ಉಪ ಉತ್ಪನ್ನಗಳು ಆಗಬಲ್ಲವು ಎಂಬುದನ್ನು ವಿಜ್ಞಾನಿಯ ರೀತಿಯಲ್ಲಿ ಅನ್ವೇಷಣೆ ಮಾಡಿ ತೋರಿಸಿದರು. ಇದು ಸಾಮಾನ್ಯವಾದದ್ದಲ್ಲ. ಏಕೆಂದರೆ ಇದು ಸರಕಾರದ ವಿರುದ್ಧ ಬಹಳ ದೊಡ್ಡ ಪ್ರತಿಭಟನೆಯೂ ಆಗಿತ್ತು. ಆ ಕಾರ್ಯಕ್ರಮ ನೀರಾದ ವಿಶೇಷ ಗುಣ ಏನು ಅನ್ನುವುದನ್ನು ಹೇಳುವುದಾಗಿತ್ತು; ರೈತರ ಸದ್ಯದ ಸಮಸ್ಯೆಗೆ ಪರಿಹಾರವನ್ನು ಸೂಚಿಸುವ ಆಶಯವೂ ಅದರಲ್ಲಿತ್ತು. ಒಬ್ಬ ಬುದ್ಧಿಜೀವಿಗಿರುವ ನಿಜವಾದ ಸಾಮಾಜಿಕ ಹೊಣೆಗಾರಿಕೆ ಎಂತಹದ್ದು ಎನ್ನುವುದನ್ನು ಪ್ರೊಫೆಸರ್ ನಮಗೆ ತೋರಿಸಿಕೊಟ್ಟಿದ್ದಾರೆ. ಬುದ್ಧಿಜೀವಿ ಎನ್ನುವವನು ಒಂದು ಲೈಬ್ರರಿಯ ಒಳಗಡೆ ಅಥವಾ ಕ್ಲಾಸ್ ರೂಂ ಒಳಗಡೆ ಅಥವಾ ತನ್ನ ಅಧ್ಯಯನದ ಕೊಠಡಿಯೊಳಗಡೆ ಸೀಮಿತವಾಗಿರುವವನಲ್ಲ. ಅವನು ಜನರ ನಿಜವಾದ ಸಮಸ್ಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಹವನು. ಆ ಹೊಣೆಗಾರಿಕೆ ಇಲ್ಲದ ಬುದ್ಧಿಜೀವಿ ನಮ್ಮ ಸಂದರ್ಭದಲ್ಲಿ, ಭಾರತ ಸಮಾಜದಲ್ಲಿ ಸ್ವಲ್ಪ ದುಬಾರಿಯಾಗಿರುತ್ತಾನೆ. ನಮ್ಮ ಸಂದರ್ಭದಲ್ಲೇ ರೂಪುಗೊಳ್ಳುವ ವೈಚಾರಿಕತೆಯ ನೆಲೆಗಳನ್ನು ತುಂಬ ಸೂಕ್ಷ್ಮ ಪರಿಶೀಲನೆಯಿಂದ ಎಂ.ಡಿ.ಎನ್. ಕಟ್ಟುತ್ತಲೇ ಬಂದರು. ರಾಷ್ಟ್ರೀಯ ಪ್ರಶ್ನೆಗಳು, ಜಾಗತಿಕ ಪ್ರಶ್ನೆಗಳು ಅವರಲ್ಲಿ ಯಾವಾಗಲೂ ಕರ್ನಾಟಕದ ಕೇಂದ್ರದಿಂದ ಚಿಂತಿತವಾಗುತ್ತಿದ್ದವು. ಜಾಗತೀಕರಣ ಅವರಿಗೆ ಆತಂಕದ ವಿಷಯ ಮಾತ್ರವಾಗಿರಲಿಲ್ಲ. ಅದಕ್ಕೆ ಎದುರಾಗುವ ಮಾರ್ಗಗಳು ಹೇಗಿರಬೇಕು ಎಂಬ ಬಗ್ಗೆ ಅವರು ಕ್ರಿಯಾಶೀಲವಾಗಿ ಯೋಚಿಸುತ್ತಿದ್ದರು.

ಉದಾರೀಕರಣ, ಬಹುರಾಷ್ಟ್ರೀಯ ಕಂಪೆನಿಗಳು- ಇವೆಲ್ಲ ನಮ್ಮ ಜಾತಿಬದ್ಧ ಸಾಮಾಜಿಕ ರಚನೆಯ ಮಧ್ಯೆ ಉಂಟುಮಾಡುವ ಗೊಂದಲಗಳ ಬಗೆಗೆ ಸ್ಪಷ್ಟ ಅರಿವು ಅವರ ಆಲೋಚನೆ ಹಾಗೂ ಕ್ರಿಯೆಗಳಲ್ಲಿ ಮುಖ್ಯವಾಗಿರುತ್ತಿತ್ತು. ಎಂ.ಡಿ.ಎನ್. ಎಲ್ಲವನ್ನೂ ಖಚಿತವಾಗಿ, ವೈಜ್ಞಾನಿಕವಾಗಿ ವಿವರಿಸ ಬಲ್ಲವರಾಗಿದ್ದರು. ಗ್ರಾಮೀಣ ಕೃಪಾಂಕದ ಬಗ್ಗೆ ಮಾತನಾಡುವಾಗ ಅಂಕಿ ಅಂಶಗಳೊಂದಿಗೆ ಮಾತಾಡ ಬಲ್ಲವರಾಗಿದ್ದರು. ಗ್ರಾಮಗಳ ಆರ್ಥಿಕ ರಚನೆಯ ಬಗ್ಗೆ ಮಾತನಾಡುವವರಾಗಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸೇತರ ಸರಕಾರವನ್ನು ರೂಪಿಸುವುದಕ್ಕೆ ನಿಜವಾದ ಚಿಂತನೆ ಹಾಗೂ ಪರಿಶ್ರಮ ನಂಜುಂಡಸ್ವಾಮಿಯವರ ಮೂಲಕ ನಡೆಯಿತು. ಆ ನಂತರ ಚುನಾವಣಾ ಪ್ರಕ್ರಿಯೆಯ ಮೂಲಕ ಕಾಂಗ್ರೆಸೇತರ ಸರಕಾರವೊಂದು ಬಂತು. ನಾವು ಚರಿತ್ರೆಯನ್ನು ಚರ್ಚಿಸುವಾಗ ಸಾಮಾನ್ಯವಾಗಿ ಮುಖ್ಯ ಘಟನೆಯನ್ನೇ ಗಮನದಲ್ಲಿಟ್ಟುಕೊಂಡು ಮಾತನಾಡುತ್ತಿರುತ್ತೇವೆ. ಆದರೆ ಅಂತಹ ಚರಿತ್ರೆಗೆ ಬೇರೆ ಬೇರೆ ರೀತಿಯ ಹೋರಾಟಗಳು ಹೇಗೆ ನಡೆಯುತ್ತಿರುತ್ತವೆ ಎನ್ನುವುದನ್ನು ನಾವು ತಿಳಿಯಬೇಕಾಗುತ್ತದೆ. ಭಿನ್ನಾಭಿಪ್ರಾಯಗಳ ಬಗ್ಗೆ ಎಂ.ಡಿ.ಎನ್. ಅಸಹನೆ ತೋರುತ್ತಿರಲಿಲ್ಲ. 'ಅವಿವೇಕಿ' ಎನ್ನುವುದು ಅವರಿಗೆ ಬಹಳ ಪ್ರಿಯವಾದ ಪದವಾಗಿತ್ತು. ಯಾರನ್ನಾದರೂ ಒಪ್ಪದೆ ಇದ್ದರೆ ಅವರನ್ನು ಮೊದಲು 'ಅವಿವೇಕಿ' ಎಂದು ಕರೆದು ಆಮೇಲೆ ಅವರನ್ನು ಪದೇ ಪದೇ ಹಾಗೇ ಉದ್ದೇಶಿಸಿ ಹೇಳುತ್ತಿದ್ದರು. ಅಥವಾ ತುಂಬಾ ಸಿಟ್ಟು ಬಂದರೆ 'ಸೊಂಟ ಮುರಿಯಬೇಕಾಗುತ್ತೆ' ಅನ್ನುತ್ತಿದ್ದರು. ಇದು ಅವರ ರೀತಿ. ಕರ್ನಾಟಕದ ಸಂದರ್ಭದಲ್ಲಿ ನಿಜವಾದ ಅರ್ಥಪೂರ್ಣ ಅರಾಜಕತೆಯ ಕಲ್ಪನೆಯನ್ನು ಈ ಕಾಲದಲ್ಲಿ ನಮಗೆ ರೂಪಿಸಿಕೊಟ್ಟವರು ಎಂ.ಡಿ.ಎನ್. ಚಳವಳಿ ಎನ್ನುವ ಚೈತನ್ಯ ನಿರ್ಭೀತಿಯಿಂದ ಹುಟ್ಟುತ್ತದೆ ಹಾಗೂ ನಿರ್ಭೀತಿಯಿಂದ ಮಾತ್ರ ಚಳವಳಿ ಸಾಧ್ಯ ಎನ್ನುವುದನ್ನು ಅವರು ಮನವರಿಕೆ ಮಾಡಿಕೊಟ್ಟರು.

ಚಳವಳಿ ನಿರಂತರವಾದಾಗ ಮಾತ್ರ ನಮ್ಮ ದೇಶದಲ್ಲಿ ಶಕ್ತಿ ರಾಜಕಾರಣದ ನಿಜವಾದ ಕ್ರೌರ್ಯವನ್ನು ನಾವೆಲ್ಲ ಎದುರಿಸಲು ಸಾಧ್ಯವಿದೆ ಎಂಬ ಸಾಧ್ಯತೆಯನ್ನು, ಆತ್ಮವಿಶ್ವಾಸವನ್ನು ತೋರಿಸಿಕೊಡುವಂಥ ಎಂ.ಡಿ.ಎನ್. ಅವರಂತಹ ನಾಯಕರು ನಮ್ಮಲ್ಲಿ ತೀರಾ ಕಡಿಮೆ. ಎಂ.ಡಿ.ನಂಜುಂಡಸ್ವಾಮಿಯವರು ರೂಪಿಸಿದ ಹೋರಾಟದ ನೆಲೆಯನ್ನು ಯಾವಾಗಲೂ ಜೀವಂತವಾಗಿ ಉಳಿಸಿಕೊಳ್ಳುವುದೇ ನಾವು ನಂಜುಂಡಸ್ವಾಮಿಯವರಿಗೆ ಸಲ್ಲಿಸಬಹುದಾದ ಕೃತಜ್ಞತೆ.

(ನಟರಾಜ್ ಹುಳಿಯಾರ್ ಸಂಪಾದಿಸಿರುವ 'ಹಸಿರು ಸೇನಾನಿ: ಪ್ರೊ. ಎಂಡಿಎನ್ ಚಿಂತನೆ- ಹೋರಾಟ' ಪುಸ್ತಕದಿಂದ)

share
ಕಿ.ರಂ.ನಾಗರಾಜ
ಕಿ.ರಂ.ನಾಗರಾಜ
Next Story
X