ಅಮೆರಿಕ ಪಾಕಿಸ್ತಾನವನ್ನು ಬೇಕಿದ್ದಾಗ ಬಳಸಿಕೊಂಡು ಕೈಬಿಟ್ಟಿದೆ, ಚೀನಾ ಮಾತ್ರ ಆಪ್ತಮಿತ್ರ: ಇಮ್ರಾನ್ ಖಾನ್

ಇಸ್ಲಾಮಾಬಾದ್, ಫೆ.12: ತನ್ನ ಆಯಕಟ್ಟಿನ ಗುರಿಗಳನ್ನು ಈಡೇರಿಸಲು ಅಮೆರಿಕವು ಯಾವತ್ತೂ ಪಾಕಿಸ್ತಾನವನ್ನು ಬಳಸಿಕೊಳ್ಳುತ್ತಲೇ ಬಂದಿದೆ. ಆದರ ಉದ್ದೇಶ ಈಡೇರಿದ ಬಳಿಕ ಅದು ಪಾಕಿಸ್ತಾನವನ್ನು ಕೈಬಿಟ್ಟಿದೆ ಹಾಗೂ ಅದರ ಮೇಲೆ ನಿರ್ಬಂಧಗಳನ್ನು ಹೇರಿದೆ.
ಆದರೆ ಮಿತ್ರ ರಾಷ್ಟ್ರವಾದ ಚೀನಾವು ಅಗ್ನಿಪರೀಕ್ಷೆಯ ಸಂದರ್ಭಗಳಲ್ಲಿ ಸದಾ ಜೊತೆಯಾಗಿ ನಿಂತುಕೊಳ್ಳುತ್ತಲೇ ಬಂದಿದೆಯೆಂದು ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ. ಚೀನಾ ಇನ್ಸ್ಟಿಟ್ಯೂಟ್ ಆಫ್ ಫ್ಯೂಡಾನ್ ಯೂನಿವರ್ಸಿಟಿಯ ಸಲಹಾ ಸಮಿತಿಯ ನಿರ್ದೇಶಕ ಎರಿಕ್ ಲೀ ಜೊತೆಗೆ ಇತ್ತೀಚೆಗೆ ನಡೆಸಿದ ಸಂದರ್ಶನದ ಸಂದರ್ಭ ಇಮ್ರಾನ್ ಖಾನ್ ಈ ಹೇಳಿಕೆ ನೀಡಿದ್ದಾರೆ. ಒಂದು ಕಾಲದಲ್ಲಿ ತನ್ನ ದೇಶವು ಅಮೆರಿಕದ ಜೊತೆ ಸ್ನೇಹಯುತವಾದ ಬಾಂಧವ್ಯಗಳನ್ನು ಹೊಂದಿತ್ತೆಂದು ಇಮ್ರಾನ್ ಖಾನಂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು. ಆದಾಗ್ಯೂ ತನಗೆ ಇನ್ನು ಪಾಕಿಸ್ತಾನದ ಅಗತ್ಯವಿಲ್ಲವೆಂಬ ಭಾವನೆ ಅಮೆರಿಕಕ್ಕೆ ಉಂಟಾದಾಗ ಅದು ತಾನಾಗಿಯೇ ದೂರ ಸರಿಯಿತೆಂದು ಇಮ್ರಾನ್ ಹೇಳಿದರು.
‘‘ಅಮೆರಿಕಕ್ಕೆ ನಾವು ಬೇಕಾದಾಗಲೆಲ್ಲಾ ಅವರು ನಮ್ಮೆಂದಿಗೆ ಸಂಬಂಧಗಳನ್ನು ಸ್ತಾಪಿಸಿದರು ಹಾಗೂ ಸೋವಿಯತ್ ವಿರುದ್ಧ ಪಾಕಿಸ್ತಾನವು ಮುಂಚೂಣಿ ರಾಷ್ಟ್ರವಾಗಿತ್ತು. ಆನಂತರ ಅಮೆರಿಕ ಪಾಕಿಸ್ತಾನವನ್ನು ಪರಿತ್ಯಜಿಸಿತು ಹಾಗೂ ಅದರ ಉದ್ದೇಶಗಳು ಈಡೇರಿದ ಬಳಿಕನಮ್ಮ ಮೇಲೆ ನಿರ್ಬಂಧಗಳನ್ನು ಹೇರಿತು ಎಂದವರು ತಿಳಿಸಿದರು. 80ರ ದಶಕದಲ್ಲಿ ಯುದ್ಧಗ್ರಸ್ತ ಅಫ್ಘಾನಿಸ್ತಾನದಲ್ಲಿ ಹಿಂದಿನ ಸೋವಿಯತ್ ಯೂನಿಯನ್ ತನ್ನ ಪಡೆಗಳನ್ನು ನಿಯೋಜಿಸಿದ ಸಂದರ್ಭ ಅಮೆರಿಕವು ಪಾಕಿಸ್ತಾನದ ಜೊತೆಗೆ ಗಾಢವಾದ ಬಾಂಧವ್ಯವನ್ನು ಹೊಂದಿದ್ದನ್ನು ಇಮ್ರಾನ್ ಸಂದರ್ಶನದಲ್ಲಿ ಉಲ್ಲೇಖಿಸಿದರು.







