ಚೀನಾದಿಂದ ಮಹತ್ವದ ಸವಾಲುಗಳನ್ನು ಎದುರಿಸುತ್ತಿರುವ ಭಾರತ: ಅಮೆರಿಕ ಆತಂಕ
ವಾಶಿಂಗ್ಟನ್, ಫೆ.12: ಭಾರತವು ವಿಶೇಷವಾಗಿ ಚೀನಾದದಿಂದ ಅತ್ಯಂತ ಗಣನೀಯವಾದ ಸವಾಲುಗಳನ್ನು ಎದುರಿಸುತ್ತಿದೆ ಎಂದು ಅಮೆರಿಕದ ಅಧ್ಯಕ್ಷರ ಕಾರ್ಯಾಲಯ ಶ್ವೇತಭವನ ಶನಿವಾರ ಪ್ರಕಟಿಸಿದ ವ್ಯೂಹಾತ್ಮಕ ಇಂಡೊ-ಪೆಸಿಫಿಕ್ ಪ್ರದೇಶದ ಕುರಿತ ವರದಿಯಲ್ಲಿ ತಿಳಿಸಿದೆ. ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ಚೀನಾದ ನಡವಳಿಕೆಯು ಭಾರತದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿದೆಯೆಂದು ವರದಿ ತಿಳಿಸಿದೆ.
ಇಂಡೊ-ಪೆಸಿಫಿಕ್ ವಲಯದಲ್ಲಿ ಭಾರತವು ಅತ್ಯಂತ ನಿರ್ಣಾಯಕವಾದ ವ್ಯೆಹಾತ್ಮಕ ಪಾಲುದಾರನಾಗಿದೆ ಎಂದು ಅದು ಹೇಳಿದೆ.
ಚೀನಾವು ತನ್ನ ಆರ್ಥಿಕ, ರಾಜತಾಂತ್ರಿಕ, ಸೇನಾ ಹಾಗೂ ತಂತ್ರಜ್ಞಾನದ ದೈತ್ಯಶಕ್ತಿಯನ್ನು ಸಂಯೋಜಿಸಿಕೊಡು ಇಂಡೊ-ಫೆಸಿಫಿಕ್ ಪ್ರದೇಶದಲ್ಲಿ ಪ್ರಭಾವವನ್ನು ಬೀರುತ್ತಿದೆ ಹಾಗೂ ಜಗತ್ತಿನ ಅತ್ಯಂತ ಶಕ್ತಿಶಾಲಿ ಪಾಲುದಾರನಾಗಲು ಬಯಸುತ್ತಿದೆಯೆಂದು ವರದಿ ಹೇಳಿದೆ.
ಚೀನಾದ ಬೆದರಿಕೆ ಹಾಗೂ ಅತಿಕ್ರಮಣಕಾರಿತ್ವವು ಜಗತ್ತಿನಾದ್ಯಂತ ಹರಡಿದೆಯಾದರೂ, ಅದು ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ಅತ್ಯಂತ ತೀವ್ರವಾಗಿದೆಯೆಂದು ಹೇಳಿದೆ.
ಆಸ್ಟ್ರೇಲಿಯಕ್ಕೆ ಆರ್ಥಿಕ ಬೆದರಿಕೆ ಹಾಕುವುದರಿಂದ ಹಿಡಿದು, ವಾಸ್ತವ ಗಡಿನಿಯಂತ್ರಣ ರೇಖೆಯಲ್ಲಿ ಭಾರತದೊಂದಿಗೆ ಸಂಘರ್ಷ ಹಾಗೂ ತೈವಾನ್ ಮೇಲೆ ಹೆಚ್ಚುತ್ತಿರುವ ಒತ್ತಡ, ಪೂರ್ವ ಹಾಗೂ ದಕ್ಷಿಣ ಸಾಗರ ಪ್ರದೇಶಗಳ ತನ್ನ ನೆರೆಹೊರೆಯ ರಾಷ್ಟ್ರಗಳನ್ನು ಹೆದರಿಸುವುದು ಸೇರಿದಂತೆ ನಮ್ಮ ಮಿತ್ರರು ಹಾಗೂ ಪಾಲುದಾರರು ಚೀನಾದ ಅಪಾಯಕಾರಿ ವರ್ತನೆಗೆ ಬೆಲೆಯನ್ನು ತೆರಬೇಕಾಗಿ ಬಂದಿದೆಯೆಂದು ವರದಿ ಹೇಳಿದೆ.
ಇದರ ಜೊತೆಗೆ ಚೀನಾವು ಮಾನವಹಕ್ಕುಗಳು ಹಾಗೂ ನೌಕಾಯಾನ ಸ್ವಾತಂತ್ರ ಸೇರಿದಂತೆ ಅಂತಾರಾಷ್ಟ್ರೀಯ ಕಾನೂನುಗಳನ್ನುಮತ್ತು ಇಂಡೊ -ಪೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆ, ಸಮೃದ್ಧಿಯನ್ನು ತರುವಂತಹ ಇತರ ತತ್ವಗಳನ್ನು ಕಡೆಗಣಿಸುತ್ತಿದೆಯೆಂದು ವ್ಯೆಹಾತ್ಮಕ ವರದಿ ಹೇಳಿದೆ.
ಭಾರತದ ಜೊತೆಗಿನ ಬಾಂಧವ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಅಮೆರಿಕದ ಈ ಹಿಂದಿನ ನಾಲ್ಕು ಆಡಳಿತಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ್ದವು. ಇದರಿಂದಾಗಿ ಭಾರತದ ಜೊತೆಗಿನ ಬಾಂಧವ್ಯದಲ್ಲಿ ಸುಧಾರಣೆಯಾಗಿದೆ ಮತ್ತು ಅದರ ಜೊತೆಗೆ ನಿಕಟವಾದ ಪಾಲುದಾರಿಕೆಯೇರ್ಪಟ್ಟಿದೆ ಎಂದು ವರದಿ ಹೇಳಿದೆ.







