ಸಂಪನ್ಮೂಲ ಕ್ರೋಡೀಕರಣ ಪ್ರಮಾಣ ಹೆಚ್ಚಳಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಳಗಾವಿ, ಫೆ. 12: ‘ಆಯವ್ಯಯದಲ್ಲಿ ಉತ್ತರ ಕರ್ನಾಟಕಕ್ಕೆ ಏನೇನು ನೀಡಲಾಗುವುದು ಎಂಬುದನ್ನು ಈಗಲೇ ಹೇಳಲಾಗದು. ನಮ್ಮ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಬಜೆಟ್ ಸಿದ್ಧಪಡಿಸಬೇಕಾಗುತ್ತದೆ. ಇದಕ್ಕಾಗಿ ಸಂಪನ್ಮೂಲ ಕ್ರೋಡೀಕರಣ ಪ್ರಮಾಣ ಹೆಚ್ಚಿಸುವಂತೆ ಆದೇಶಿಸಿದ್ದೇನೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಜೆಟ್ ತಯಾರಿ ಪ್ರಕ್ರಿಯೆ ಆರಂಭಿಸಿದ್ದು, ಈಗಾಗಲೇ ವಿವಿಧ ಇಲಾಖೆಗಳ ಸಭೆ ನಡೆಸಿದ್ದೇನೆ. ಫೆ. 14 ಹಾಗೂ 15ರಂದು ಹಲವು ವಿವಿಧ ಸಭೆಗಳನ್ನು ನಡೆಸಲಿದ್ದೇನೆ. ಫೆ.25ರ ನಂತರ ಎಲ್ಲ ಇಲಾಖೆಗಳ ಬೇಡಿಕೆಗಳು ಹಾಗೂ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಗಳನ್ನು ಗಮನಿಸಿ ಮುಂದಿನ ಆಯವ್ಯಯ ರೂಪಿಸಲಾಗುವುದು’ ಎಂದು ತಿಳಿಸಿದರು.
ಹೈಕೋರ್ಟ್ ಆದೇಶಕ್ಕೆ ಬದ್ಧ: ‘ಹಿಜಾಬ್(ಸ್ಕಾರ್ಫ್) ವಿಚಾರಕ್ಕೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್ನಲ್ಲಿದ್ದು, ಈಗಾಗಲೇ ಮಧ್ಯಂತರ ಆದೇಶವನ್ನು ನೀಡಿದೆ. ರಾಜ್ಯದಲ್ಲಿ ಶಾಂತಿ ನೆಲೆಸಬೇಕು ಮತ್ತು ವಿದ್ಯಾರ್ಥಿಗಳ ನಡುವೆ ಯಾವುದೇ ಭೇದ-ಭಾವ ಮೂಡದಂತೆ ಸೂಕ್ತ ಮುನ್ನಚ್ಚರಿಕೆ ವಹಿಸಿ ಶಾಲೆಗಳನ್ನು ಪುನರ್ ಆರಂಭಿಸಬೇಕೆಂಬುದು ನಮ್ಮ ಆದ್ಯತೆ' ಎಂದು ಅವರು ಸ್ಪಷ್ಟಪಡಿಸಿದರು.





