ಶಾಸಕ ಹಾಲಪ್ಪ-ಮಾಜಿ ಶಾಸಕ ಬೇಳೂರುರಿಂದ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ
ಮರಳು ದಂಧೆಯವರಿಂದ ಲಂಚ ಸ್ವೀಕಾರ ಆರೋಪ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶನಿವಾರ ಆಣೆ ಪ್ರಮಾಣ ಮಾಡಲು ಆಗಮಿಸಿದ ಸಾಗರದ ಶಾಸಕ ಹರತಾಳು ಹಾಲಪ್ಪ (ಎಡ) ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶನಿವಾರ ಸಾಗರದ ಶಾಸಕ ಹರತಾಳು ಹಾಲಪ್ಪಮತ್ತು ಬೆಂಬಲಿಗರು ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಬೆಂಬಲಿಗರು ಬೇರೆ ಬೇರೆ ಸಮಯದಲ್ಲಿ ಆಗಮಿಸಿ ಮರಳು ದಂಧೆಯವರಿಂದ ಲಂಚ ಪಡೆದ ವಿಚಾರದಲ್ಲಿ ದೇವರ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಿದರು. ನಂತರ ಕ್ಷೇತ್ರದ ಧರ್ಮಾಧಿಕಾರಿಯವರನ್ನು ಭೇಟಿ ಮಾಡಿ ವಾಪಸ್ ತೆರಳಿದ್ದಾರೆ.
ಶಾಸಕ ಹಾಲಪ್ಪ ಮರಳು ಸಾಗಾಟಗಾರರಿಂದ ಲಂಚ ಪಡೆಯುತ್ತಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಇತ್ತೀಚೆಗೆ ಆರೋಪ ಮಾಡಿದ್ದರು. ಈ ವಿಚಾರವಾಗಿ ಅವರಿಬ್ಬರ ನಡುವೆ ವಾದ ವಿವಾದ ನಡೆದು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡುವ ಸವಾಲು ಪ್ರತಿ ಸವಾಲು ಹಾಕಿದ್ದರು. ಅದರಂತೆ ಇಬ್ಬರು ನಾಯಕರುಗಳೂ ಇಂದು ಧರ್ಮಸ್ಥಳಕ್ಕೆ ಆಗಮಿಸಿದ್ದರು.
ಆಣೆ ಪ್ರಮಾಣ ಮಧ್ಯಾಹ್ನ ನಡೆಯಲಿದೆ ಎಂದು ಹೇಳಲಾಗಿದ್ದರೂ ಶಾಸಕ ಹಾಲಪ್ಪಇಂದು ಬೆಳಗ್ಗೆಯೇ ಧರ್ಮಸ್ಥಳಕ್ಕೆ ಆಗಮಿಸಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಶ್ರೀ ಮಂಜುನಾಥಸ್ವಾಮಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಾನಾಗಲಿ, ನಮ್ಮ ಮನೆಯವರಾಗಲಿ ಸಂಬಂಧಿಕರಾಗಲಿ ಮರಳು ಗಣಿಗಾರಿಕೆ ಮಾಡುವವರಿಂದ, ಮರಳು ಲಾರಿಯವರಿಂದ ಹಣ ಪಡೆದಿಲ್ಲ. ಈ ಬಗ್ಗೆ ನಾನು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದು ಹೇಳಿದ್ದೆ. ಮಾಜಿ ಶಾಸಕರು ಕೂಡಾ ಪ್ರಮಾಣ ಮಾಡುವಂತೆ ಸವಾಲು ಹಾಕಿದ್ದರು. ಅದರಂತೆ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದೇನೆ. ಶ್ರೀ ಮಂಜುನಾಥ ಸ್ವಾಮಿಯ ಮುಂದೆ ಪ್ರಮಾಣ ಮಾಡಿದ್ದೇನೆ. ಮಾಜಿ ಶಾಸಕರು ಪ್ರಮಾಣ ಮಾಡುವಂತೆ ಸವಾಲು ಹಾಕಿದ್ದರು. ಅವರಿಗೂ ತಿಳಿಸಿಯೇ ಇಲ್ಲಿಗೆ ಬಂದಿದ್ದೇನೆ ಪ್ರಮಾಣ ಮಾಡಲು ಬರುವಂತೆ ತಿಳಿಸಿದ್ದೆ ಆದರೆ ಅವರು ಬರಲಿಲ್ಲ. ಅವರಿಗೆ ಪ್ರಮಾಣ ಮಾಡಲು ಧೈರ್ಯವಿಲ್ಲ ಎಂದು ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ. ಅವರ ಬಳಿ ದಾಖಲೆಗಳಿವೆ ಎಂದು ಹೇಳುತ್ತಿದ್ದಾರೆ ದಾಖಲೆಗಳಿದ್ದರೆ ಪೊಲೀಸರಿಗೆ ದೂರು ನೀಡಲಿ ಅದನ್ನು ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಮುಖಾಮುಖಿ ಪ್ರಮಾಣ ಮಾಡಲಿ: ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ
ಶನಿವಾರ ಮಧ್ಯಾಹ್ನ ಧರ್ಮಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ, ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಮಾಣಕ್ಕೆ ಶನಿವಾರ 10ರಿಂದ 12 ಗಂಟೆಯ ಒಳಗೆಂದು ಸಮಯ ನಿಗದಿಪಡಿಸಲಾಗಿತ್ತು. ಆದರಂತೆ ಸಮಯಕ್ಕೆ ಸರಿಯಾಗಿ ಧರ್ಮಸ್ಥಳಕ್ಕೆ ಬಂದಿದ್ದೇನೆ. ಆದರೆ ಶಾಸಕರು ಬೆಳಗ್ಗೆ ಬೇಗನೆ ಬಂದು ಹೋಗಿದ್ದಾರೆ. ಈ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಅವರು ಸವಾಲು ಸ್ವೀಕರಿಸಿ ಪ್ರಮಾಣಕ್ಕೆ ಸಿದ್ಧರಾಗಿದ್ದರೆ ಮುಖಾಮುಖಿಯಾಗಿ ಪ್ರಮಾಣ ಮಾಡಲು ಸಿದ್ದರಾಗಬೇಕಾಗಿತ್ತು ಎಂದರು.
ಅವರು ಪ್ರಮಾಣಕ್ಕೆ ಸಿದ್ಧರಾಗದೆ ಪಲಾಯನ ಮಾಡಿದ್ದಾರೆ. ಅವರೇ ನೋಟಿಸ್ ನೀಡಿ ಅವರೇ ಬೇಗ ಬಂದು ಹೋಗಿರುವುದು ಸರಿಯಲ್ಲ. ಅವರು ತಪ್ಪು ಮಾಡಿದ್ದಾರೆ ಎಂದು ನಾನು ಪ್ರಮಾಣ ಮಾಡಿದ್ದೇನೆ ಎಂದ ಮಾಜಿ ಶಾಸಕರು ಅವರು ಏನೂ ಮಾಡಿಲ್ಲ ಎಂದು ಹೇಳಿ ಹೋಗಿದ್ದಾರಂತೆ ಅದಕ್ಕೆ ಮಂಜುನಾಥನೇ ಸಾಕ್ಷಿ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಆದರೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣವು ಎರಡೂ ಕಡೆಯವರು ಇದ್ದು ನಡೆಯುವುದಾಗಿದೆ ಪದ್ಧತಿ. ಆದರೆ ಇಬ್ಬರೂ ಬೇರೆ ಬೇರೆಯಾಗಿ ಬಂದು ಹೋಗಿರುವುದರಿಂದ ಆಣೆ ಪ್ರಮಾಣ ನಡೆದಿಲ್ಲ. ಇಬ್ಬರೂ ದೇವರಲ್ಲಿ ಪ್ರಾರ್ಥಿಸಿ ಹೋಗಿದ್ದರೆನ್ನಲಾಗಿದೆ.






.jpeg)
.jpeg)


