ಮೈಸೂರು: ಪತಿಯ ಕುಡಿತದ ಚಟ ಬಿಡಿಸಲೆತ್ನಿಸಿದ ಪತ್ನಿಯ ಕತ್ತು ಹಿಸುಕಿ ಕೊಲೆ

ಮೈಸೂರು, ಫೆ.13: ಕುಡಿತದ ಚಟ ಬಿಡಿಸಲು ಯತ್ನಿಸಿದ ಪತ್ನಿಯನ್ನು ಆಕೆಯ ಪತಿಯೇ ಕೊಲೆಮಾಡಿರುವ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ವರದಿಯಾಗಿದೆ.
ಕೊಲೆಯಾದವರನ್ನು ಕ್ಯಾತಮಾರನಹಳ್ಳಿ ಎ.ಕೆ.ಕಾಲನಿ ನಿವಾಸಿ ಸಂಧ್ಯಾ(25) ಎಂದು ಗುರುತಿಸಲಾಗಿದೆ. ಅವರ ಪತಿ ಕಿರಣ್ ಕೊಲೆ ಆರೋಪಿಯಾಗಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಕಿರಣ್ ಮತ್ತು ಸಂಧ್ಯಾ ಕಳೆದ ನಾಲ್ಕು ವರ್ಷಗಳ ಹಿಂದೆ ವಿವಾಹಿತರಾಗಿದ್ದು, ದಂಪತಿಗೆ ಒಂದು ಮಗು ಇದೆ. ಕಿರಣ್ ಮದುವೆಯಾದಾಗಲಿಂದಲೂ ಮದ್ಯಪಾನದ ವ್ಯಸನಿಯಾಗಿದ್ದನೆನ್ನಲಾಗಿದೆ. ಇದರಿಂದ ಬೇಸತ್ತ ಸಂಧ್ಯಾ ಆತನನ್ನು ಕುಡಿತದ ಚಟದಿಂದ ಬಿಡಿಸಲು ವ್ಯಸನ ಮುಕ್ತಿ ಕೇಂದ್ರಕ್ಕೆ ದಾಖಲಿಸಿದ್ದರು.
ವ್ಯಸನ ಮುಕ್ತಿ ಕೇಂದ್ರದಿಂದ ಹೊರಬಂದ ಕಿರಣ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದನ್ನಲ್ಲದೆ, ಮತ್ತೆ ಕುಡಿತದ ಚಟಕ್ಕೆ ಬಿದ್ದಿದ್ದನೆನ್ನಲಾಗಿದೆ. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಶನಿವಾರ ರಾತ್ರಿ ಇಬ್ಬರ ನಡುವೆ ಗಲಾಟೆ ನಡೆದಿದ್ದು ಈ ವೇಳೆ ಆರೋಪಿ ಕಿರಣ್ ಕತ್ತು ಹಿಸುಕಿ ಸಂಧ್ಯಾರನ್ನು ಕೊಲೆ ಮಾಡಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ.
ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







