ರಾಹುಲ್ ಗಾಂಧಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಅಸ್ಸಾಂ ಸಿಎಂ ವಜಾಕ್ಕೆ ಚಂದ್ರಶೇಖರ ರಾವ್ ಆಗ್ರಹ
‘ನೀವು ರಾಜೀವ್ ಗಾಂಧಿ ಮಗನೋ, ಅಲ್ಲವೋ ಎಂದು ನಾವು ಪುರಾವೆ ಕೇಳಿದ್ದೇವೆಯೇ’ ಎಂದು ಪ್ರಶ್ನಿಸಿದ್ದ ಹಿಮಂತ ಶರ್ಮಾ

ನಲ್ಗೊಂಡ (ತೆಲಂಗಾಣ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರನ್ನು ವಜಾಗೊಳಿಸಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಒತ್ತಾಯಿಸಿದ್ದಾರೆ.
ನಿನ್ನೆ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾವ್, "ಪ್ರಧಾನಿ ಮೋದಿ ಜೀ, ರಾಹುಲ್ ಅವರ ತಂದೆಯ ಗುರುತಿನ ಬಗ್ಗೆ ಪ್ರಶ್ನಿಸುವುದು 'ಸಂಸ್ಕಾರ' (ಶಿಷ್ಟಾಚಾರ) ಅಥವಾ ನಮ್ಮ ಹಿಂದೂ ಸಂಪ್ರದಾಯವೇ. ಇದನ್ನು ನಿಮ್ಮ ಬಿಜೆಪಿ ಮುಖ್ಯಮಂತ್ರಿ ಮಾಡಿದ್ದಾರೆ. ಇದನ್ನು ಕೇಳಿದ ನಂತರ ನನ್ನ ಕಣ್ಣಲ್ಲಿ ನೀರು ಬಂತು. ಇದು ದೇಶಕ್ಕೆ ಒಳ್ಳೆಯದಲ್ಲ. ಅಸ್ಸಾಂ ಮುಖ್ಯಮಂತ್ರಿ ಈ ರೀತಿ ಮಾತನಾಡುವುದು ಹೇಗೆ? ತಾಳ್ಮೆಗೆ ಒಂದು ಮಿತಿ ಇದೆ" ಎಂದು ಕೆಸಿಆರ್ ಹೇಳಿದರು.
2016 ರಲ್ಲಿ ಪಾಕಿಸ್ತಾನದಲ್ಲಿ ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಹಾಗೂ 2019 ರಲ್ಲಿ ನಡೆದ ವೈಮಾನಿಕ ದಾಳಿಯ ಪುರಾವೆಗಳನ್ನು ಕೇಳಿದ್ದಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ ನಂತರ ರಾವ್ ಅವರ ಹೇಳಿಕೆಗಳು ಬಂದಿವೆ.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಹಿಮಂತ ಶರ್ಮಾ, "ಇವರ ಮನಸ್ಥಿತಿ ನೋಡಿ, ಜನರಲ್ ಬಿಪಿನ್ ರಾವತ್ ದೇಶದ ಹೆಮ್ಮೆ, ಭಾರತವು ಅವರ ನೇತೃತ್ವದಲ್ಲಿ ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ರಾಹುಲ್ ಗಾಂಧಿ ದಾಳಿಯ ಪುರಾವೆ ಕೇಳಿದ್ದರು. ನಾವು ಎಂದಾದರೂ ನೀವು ರಾಜೀವ್ ಗಾಂಧಿಯವರ ಮಗನೋ, ಅಲ್ಲವೋ ಎಂಬುದಕ್ಕೆ ಪುರಾವೆ ಕೇಳಿದ್ದೇವೆಯೇ? ನನ್ನ ಸೇನೆಯಿಂದ ಪುರಾವೆ ಕೇಳಲು ನಿಮಗೆ ಯಾವ ಹಕ್ಕಿದೆ?" ಎಂದು ಪ್ರಶ್ನಿಸಿದ್ದರು.







