ಬಗರ್ ಹುಕುಂ ಸಾಗುವಳಿದಾರರ ಹೋರಾಟಕ್ಕೆ ಸಜ್ಜುಗೊಂಡ ಮಲೆನಾಡು: ಫೆ.15ರಂದು ಪ್ರತಿಭಟನಾ ಮೆರವಣಿಗೆ

ಶಿವಮೊಗ್ಗ, ಫೆ.13: ಅರಣ್ಯ ಹಕ್ಕು ಕಾಯ್ದೆ, ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳನ್ನು ವಿಲೇವಾರಿ ಮಾಡದೆ, ತಿರಸ್ಕೃತಗೊಳಿಸುತ್ತಿರುವ ಸರಕಾರದ ವಿರುದ್ದ ಬಗರ್ ಹುಕುಂ ಸಾಗುವಳಿದಾರರ ಮತ್ತೊಂದು ಹೋರಾಟಕ್ಕೆ ಮಲೆನಾಡು ಸಜ್ಜುಗೊಂಡಿದೆ.
ಹಲವು ದಶಕಗಳಿಂದ ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರು ಭೂ ಮಂಜೂರಾತಿಗಾಗಿ ಸಲ್ಲಿಸಿದ ಅರ್ಜಿಗಳನ್ನು ಸರಕಾರ ತಿರಸ್ಕರಿಸುತ್ತಿದೆ. ಈ ಹಿನ್ನಲೆಯಲ್ಲಿ ಆಕ್ರೋಶಗೊಂಡಿರುವ ಬಗರ್ ಹುಕುಂ, ಅರಣ್ಯ ಭೂಮಿ ಸಾಗುವಳಿದಾರರು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ನೇತೃತ್ವದಲ್ಲಿ ಫೆ.15ರಂದು ಬೆಳಗ್ಗೆ 10:30ಕ್ಕೆ ಸೊರಬದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಿಂದ ಸೊರಬ ತಾಲೂಕು ಕಚೇರಿಯವರೆಗೆ ರೈತ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದಾರೆ.
ತಾನು ಶಾಸಕನಾಗಿದ್ದ ಅವಧಿಯಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ನೀಡಿದ ಹಕ್ಕುಪತ್ರಗಳನ್ನು ಹಾಲಿ ಶಾಸಕರು ವಜಾಗೊಳಿಸಿದ್ದಾರೆ ಎಂದು ಆರೋಪಿಸಿರುವ ಮಧು ಬಂಗಾರಪ್ಪ, ಬೃಹತ್ ಪ್ರತಿಭಟನಾ ಮೆರವಣಿಗೆಗೆ ಅರಣ್ಯ ಹಕ್ಕು ಹಾಗೂ ಬಗರ್ ಹುಕುಂ ನಡಿ ಅರ್ಜಿ ಸಲ್ಲಿಸಿರುವ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಜಿಲ್ಲೆಯ ಮಾಜಿ ಶಾಸಕರು, ಮಾಜಿ ಸಚಿವರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







