ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಸಂಸದೆ ಪ್ರಣೀತ್ ಕೌರ್!

ಪಟಿಯಾಲ ( ಪಂಜಾಬ್): ಕಾಂಗ್ರೆಸ್ ಸಂಸದೆ ಪ್ರಣೀತ್ ಕೌರ್ ಶನಿವಾರ ಇಲ್ಲಿ ನಡೆದ ಬಿಜೆಪಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪತಿ ಅಮರಿಂದರ್ ಸಿಂಗ್ ಪರ ಮತ ಯಾಚಿಸಿದರು.
ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರೊಂದಿಗಿನ ತೀವ್ರ ಭಿನ್ನಾಭಿಪ್ರಾಯದ ನಂತರ ಕಳೆದ ವರ್ಷ ಕಾಂಗ್ರೆಸ್ ಹೈಕಮಾಂಡ್, ಅಮರಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿತ್ತು. ನಂತರ ಅಮರಿಂದರ್ ಸಿಂಗ್ ಅವರು ತಮ್ಮದೇ ಆದ ಪಂಜಾಬ್ ಲೋಕ ಕಾಂಗ್ರೆಸ್ (ಪಿಎಸ್ ಸಿ) ಅನ್ನು ಸ್ಥಾಪಿಸಿದರು.
ಅಮರಿಂದರ್ ಸಿಂಗ್ ಅವರು ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ಜೊತೆಗೂಡಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಪಟಿಯಾಲ ಸಂಸದೆ ಕೌರ್ ಭಾಗವಹಿಸಿದ್ದರು.
ಅಮರಿಂದರ್ ಸಿಂಗ್ ನೇತೃತ್ವದ ಪಿಎಲ್‌ಸಿ, ಬಿಜೆಪಿ ಮತ್ತು ಎಸ್‌ಎಡಿ (ಸಂಯುಕ್ತ) ಮೈತ್ರಿ ಮಾಡಿಕೊಂಡು ರಾಜ್ಯ ಚುನಾವಣೆಯಲ್ಲಿ ಹೋರಾಡುತ್ತಿವೆ.
ಮಾಜಿ ಮುಖ್ಯಮಂತ್ರಿ ಅಮರಿಂದರ್ ಪಂಜಾಬ್ ಲೋಕ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮ ಸಾಂಪ್ರದಾಯಿಕ ಕ್ಷೇತ್ರವಾದ ಪಟಿಯಾಲ (ನಗರ) ದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.







