ಉ.ಪ್ರ: ಚುನಾವಣಾ ಅಧಿಕಾರಿಯ ಕಪಾಳಕ್ಕೆ ಹೊಡೆದ ಬಿಜೆಪಿ ಶಾಸಕ ಸಂಗೀತ್ ಸೋಮ್ ವಿರುದ್ಧ ಪ್ರಕರಣ ದಾಖಲು

ಹೊಸದಿಲ್ಲಿ: ವಿಧಾನಸಭೆಯ ಪ್ರಥಮ ಹಂತದ ಮತದಾನದ ವೇಳೆ ಮತಗಟ್ಟೆಯಲ್ಲಿ ಅಧ್ಯಕ್ಷರಿಗೆ ಥಳಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಬಿಜೆಪಿ ಶಾಸಕ ಸಂಗೀತ್ ಸೋಮ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಘಟನೆಯು ಮತದಾನ ಪ್ರಾರಂಭ ದಿನವಾದ ಫೆಬ್ರವರಿ 10ರಂದು ನಡೆದಿತ್ತು.
ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಫೆಬ್ರವರಿ 10 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೀರತ್ ಜಿಲ್ಲೆಯ ಸಲಾವಾ ಗ್ರಾಮದ ಬೂತ್ ಸಂಖ್ಯೆ 131 ಕ್ಕೆ ಸೋಮ್ ಮತ್ತು ಅವರ ಬೆಂಬಲಿಗರು ಆಗಮಿಸಿದ್ದು, ಬೂತ್ ನ ಹೊರಗಡೆ ಇದ್ದ ಮತದಾರರ ಉದ್ದನೆಯ ಸರತಿ ಸಾಲನ್ನು ಕಂಡ ಶಾಸಕ ಆಕ್ರೋಶಗೊಂಡಿದ್ದರು. ನಿಧಾನಗತಿಯ ಮತದಾನದ ಬಗ್ಗೆ ಸಂಗೀತ್ ಸೋಮ್ ಚುನಾವಣಾ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದ್ದು, ಬಳಿಕ ಅವರಿಗೆ ಕಪಾಳಮೋಕ್ಷ ನಡೆಸಿದ್ದಾರೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾಗಿ ವರದಿ ಉಲ್ಲೇಖಿಸಿದೆ.
ಸಂಗೀತ್ ಸೋಮ್ ಬೆಂಬಲಿಗರು ಮತಗಟ್ಟೆಯ ಬಳಿಯಿದ್ದ ಸಿಸಿಟಿವಿ ಕ್ಯಾಮರಾಗಳನ್ನೂ ಕಿತ್ತುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲು ಪೊಲೀಸರು ಸಭಾಧ್ಯಕ್ಷರಾದ ಅಶ್ವಿನಿ ಶರ್ಮಾರಿಗೆ ಕಾಯುತ್ತಿದ್ದರು. ಅವರು ಬಾರದೇ ಇದ್ದಾಗ ಸರ್ಧಾನ ಪೊಲೀಸ್ ಠಾಣೆಯ ಉಸ್ತುವಾರಿ ಬಳಿ ಎಫ್‌ಐಆರ್ ದಾಖಲಿಸಿದ್ದಾರೆ. "ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಮತ್ತು ನಮ್ಮ ವಿಚಾರಣೆ ಪೂರ್ಣಗೊಂಡ ನಂತರ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಎಸ್‌ಎಸ್‌ಪಿ ಹೇಳಿದ್ದಾರೆ. ಎಫ್‌ಐಆರ್ ಪ್ರತಿಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.







