ಮಂಗಳೂರು ಸಹಾಯಕ ಆಯುಕ್ತರ ವಿರುದ್ಧ ಸಚಿವರಿಗೆ ದೂರು

ಮಂಗಳೂರು, ಫೆ.13: ರಾಜ್ಯ ಸರಕಾರಿ ನೌಕರರ ಸಂಘದ ದ.ಕ.ಜಿಲ್ಲಾ ಸಮಿತಿಗೆ ಸೇರಿದ ಜಮೀನಿಗೆ ಸಂಬಂಧಿಸಿದಂತೆ ಮಂಗಳೂರು ಸಹಾಯಕ ಆಯುಕ್ತರು ನೀಡಿದ ಆದೇಶದಿಂದ ಅನ್ಯಾಯವಾಗಿದ್ದು, ನ್ಯಾಯ ಒದಗಿಸಿಕೊಡುವಂತೆ ಸಮಿತಿಯ ಪದಾಧಿಕಾರಿಗಳು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್‌ಗೆ ಮನವಿ ಸಲ್ಲಿಸಿದ್ದಾರೆ.
ಸಮಿತಿಯ 33 ಸೆಂಟ್ಸ್ ಜಮೀನು ಹಾಗೂ ಕಟ್ಟಡವು 1938 ರಿಂದ ಲೈಸನ್ಸ್ ಫೀಸ್ ಪಾವತಿಸಿ ಸಂಘದ ಸ್ವಾದೀನತೆಯನ್ನು ಹೊಂದಿದೆ. ಈ ಸ್ಥಳವು ನಗರದ ಮಧ್ಯ ಭಾಗವಾದ ಮಿನಿವಿಧಾನ ಸೌಧದ ಬಳಿ ಇರುತ್ತದೆ. 2009ರಲ್ಲಿ ಮಾಹಾನಗರ ಪಾಲಿಕೆಯ ಪರವಾನಿಗೆ ಪಡೆದು ಸಂಸದರ, ಶಾಸಕರ ಪ್ರಾದೇಶಿಕಾಭಿವೃದ್ಧಿ ಯೋಜನೆಯಡಿ ದೇಣಿಗೆ ಪಡೆದು ನೂತನ ಸಮುದಾಯ ವನವನ್ನು ನಿರ್ಮಿಸಲಾಗಿರುತ್ತದೆ. 1956ರಲ್ಲಿ ಆಗಿನ ಮೈಸೂರು ವಿಭಾಗಾಧಿಕಾರಿಯು ನೌಕರರ ಸಂಘಕ್ಕೆ ಮಂಜೂರಾತಿ ನೀಡಿದ್ದು ಪಹಣಿಯು ಸಂಘದ ಹೆಸರಿನಲ್ಲಿತ್ತು. ಆದರೆ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ನೌಕರರ ಸಂಘದ ವಿರುದ್ಧ ಆದೇಶ ಹೊರಡಿಸಿ ಪಹಣಿಯಲ್ಲಿ ಸರಕಾರಿ ಭೂಮಿ ಎಂದು ದಾಖಲಿಸಿರುತ್ತಾರೆ. ಇದರಿಂದ ಸುಮಾರು 15,000ಕ್ಕೂ ಅಧಿಕ ಅಧಿಕಾರಿಗಳು ನೌಕರರು ಸದಸ್ಯತ್ವ ಹೊಂದಿರುವ ಸರಕಾರಿ ನೌಕರರ ಸಂಘಕ್ಕೆ ಅನ್ಯಾಯವಾಗಿದೆ. ಹಾಗಾಗಿ ಈ ಅನ್ಯಾಯದ ವಿರುದ್ಧ ಧ್ವನಿಎತ್ತಿ ನ್ಯಾಯ ಒದಗಿಸಿಕೊಡಬೇಕು ಎಂದು ಸಂಘವು ಸಚಿವರು, ಸಂಸದರು, ಶಾಸಕರಿಗೆ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಿದೆ.
ಸಮಿತಿಯ ಜಿಲ್ಲಾಧ್ಯಕ್ಷ ಪಿ.ಕೆ. ಕೃಷ್ಣ, ಕಾರ್ಯದರ್ಶಿ ಎಚ್. ಗಣೇಶ್ ರಾವ್, ಕೋಶಾಧಿಕಾರಿ ಅಕ್ಷಯ್ ಭಂಡಾರಕಾರ್, ಉಪಾಧ್ಯಕ್ಷರಾದ ಲಿಲ್ಲಿ ಪಾಯಸ್, ದೇವದಾಸ, ಹರೀಶ್ ಕುಮಾರ್ ಮತ್ತಿತರರು ನಿಯೋಗದಲ್ಲಿದ್ದರು.