ಫೆ.18: ಭಾಗವತ ಬಲಿಪ ಪ್ರಸಾದಗೆ ಬೊಂಡಾಲ ಪ್ರಶಸ್ತಿ ಪ್ರದಾನ

ಮಂಗಳೂರು, ಫೆ.13: ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿದ ಕಲಾವಿದರಿಗಾಗಿ ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ನೀಡುತ್ತಿರುವ ವಾರ್ಷಿಕ ಪ್ರಶಸ್ತಿಗೆ ಹಿರಿಯ ಅರ್ಥಧಾರಿ, ಶಂಭೂರು ಗ್ರಾಮದ ಪಟೇಲ ದಿ.ಬೊಂಡಾಲ ಜನಾರ್ದನ ಶೆಟ್ಟಿ ಮತ್ತವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿ.ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ನೀಡಲಾಗುವ ಬೊಂಡಾಲ ಪ್ರಶಸ್ತಿಗೆ ಕಟೀಲು ಮೇಳದ ಪ್ರಧಾನ ಭಾಗವತ, ಬಲಿಪ ಪರಂಪರೆಯ ಸಾಂಪ್ರದಾಯಿಕ ಕೊಂಡಿ ಪ್ರಸಾದ ಬಲಿಪ ಆಯ್ಕೆಯಾಗಿದ್ದಾರೆ.
ಮೂಡಬಿದಿರೆ ಸಮೀಪದ ಮಾರೂರಿನ ನೂಯಿ ಮನೆಯಲ್ಲಿ ಯಕ್ಷರಂಗದ ಹಿರಿಯ ಸಾಧಕ ಬಲಿಪ ನಾರಾಯಣ ಭಾಗವತ ಮತ್ತು ವಿಜಯಲಕ್ಷ್ಮಿ ದಂಪತಿಗೆ 1976ರ ಎ.14 ರಂದು ಜನಿಸಿದ ಬಲಿಪ ಪ್ರಸಾದ ಭಟ್ ತನ್ನ 17ನೇ ವರ್ಷ ಪ್ರಾಯದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯನ್ನು ಸೇರಿದ್ದರು. ಕಳೆದ ಮೂರು ದಶಕಗಳಿಂದ ಭಾಗವತರಾಗಿ ಪ್ರತಿಷ್ಠಿತ ಬಲಿಪ ಪರಂಪರೆಯ ಸಾಂಪ್ರದಾಯಿಕ ಶೈಲಿಗೆ ಸಾಕ್ಷಿಯಾಗಿದ್ದಾರೆ.
ಫೆ.18 ರಂದು ರಾತ್ರಿ ರಂಗಸ್ಥಳದಲ್ಲಿ ಜರಗುವ ದಿ.ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ದಿ.ಬೊಂಡಾಲ ರಾಮಣ್ಣ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಯ್ಕೆ ಸಮಿತಿಯ ಸಂಚಾಲಕ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.







