ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹದ ಅಗತ್ಯ: ಶಾಸಕ ಲಾಲಾಜಿ ಆರ್.ಮೆಂಡನ್

ಪಡುಬಿದ್ರಿ: ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹದ ಅಗತ್ಯವಿದ್ದು, ಈ ಮೂಲಕ ಹಲವು ಪ್ರತಿಭೆಗಳ ಅನಾವರಣವಾಗುತ್ತದೆ ಎಂದು ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.
ಹೆಜಮಾಡಿಯ ಅಮವಾಸ್ಯೆಕರಿಯ ಕಡಲ ತೀರದಲ್ಲಿ ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಉಡುಪಿ ನೆಹರೂ ಯುವ ಕೇಂದ್ರ ಮತ್ತು ಹೆಜಮಾಡಿ ಕರಾವಳಿ ಯುವಕ-ಯುವತಿ ವೃಂದದ ಆಶ್ರಯದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಅಂತರ್ ಯುವ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಬೀಚ್ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡಿದ ಸಮಾಜ ಸೇವಕರಾದ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕ್ರೀಡಾಳುಗಳು ಕ್ರಿಯಾಶೀಲರಾಗಿದ್ದಲ್ಲಿ ಅವಕಾಶಗಳು ಅರಸಿ ಬರುತ್ತಿದೆ ಎಂದರು.
ಬೀಚ್ ತ್ರೋಬಾಲ್ ಪಂದ್ಯಾಟ ಉದ್ಘಾಟಿಸಿದ ಮಹಾಲಕ್ಷ್ಮೀ ಕೋಪರೇಟಿವ್ ಬ್ಯಾಂಕ್ ಹಾಗೂ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಮಾತನಾಡಿ, ಇತ್ತೀಚೆಗೆ ಕೇಂದ್ರ ಸರಕಾರವು ಕ್ರೀಡಾ ವಿಭಾಗಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದು, ಪೂರಕವಾಗಿ ಕ್ರೀಡಾ ವಿಶ್ವವಿದ್ಯಾನಿಲಯ ಆರಂಭಿಸಿದೆ ಎಂದರು.
ಹೆಜಮಾಡಿ ಕರಾವಳಿ ಯುವಕ-ಯುವತಿ ವೃಂದದ ಅಧ್ಯಕ್ಷ ಅಶೋಕ್ ವಿಕೆ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಹೆಜಮಾಡಿ ಗ್ರಾಪಂ ಅಧ್ಯಕ್ಷ ಪ್ರಾಣೇಶ್ ಹೆಜ್ಮಾಡಿ, ಉದ್ಯಮಿಗಳಾದ ಜಗದೀಶ್ ಜೆ.ಕಾಂಚನ್, ಹೇಮಾನಂದ ಕೆ.ಪುತ್ರನ್, ಸಂದೇಶ್ ಶೆಟ್ಟಿ ಮತ್ತು ಲಾಲಾಜಿ ಎಸ್.ಸುವರ್ಣ, ಹಿರಿಯ ಮೀನುಗಾರ ಮುಖಂಡ ನಾರಾಯಣ ಕೆ.ಮೆಂಡನ್, ಕರಾವಳಿ ಯುವತಿ ವೃಂದದ ಅಧ್ಯಕ್ಷೆ ಪವಿತ್ರಾ ಗಿರೀಶ್ ಮುಖ್ಯ ಅತಿಥಿಗಳಾಗಿದ್ದರು.
ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ವಿಲ್ಫ್ರೆಡ್ ಡಿಸೋಜಾ ಪ್ರಸ್ತಾವಿಸಿದರು. ಶ್ರೇಯಸ್ ಸಾಲ್ಯಾನ್ ಸ್ವಾಗತಿಸಿದರು. ಅದಿತ್ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ಶರಣ್‍ಕುಮಾರ್ ಮಟ್ಟು ವಂದಿಸಿದರು.