ಪುತ್ತೂರು: ಇ- ಶ್ರಮ್ ನೋಂದಣಿ, ಆಧಾರ್-ಪಾನ್ ಜೋಡಣೆ, ಕಿಸಾನ್ ಸಮ್ಮಾನ್ ಕೆವೈಸಿ ಶಿಬಿರ

ಪುತ್ತೂರು: ಸಂಘಟಿತರಾಗಿ ಯೋಜನೆ ರೂಪಿಸಿ ಅನುಷ್ಟಾನಿಸಿದಾಗ ಅದರಿಂದ ಉತ್ತಮ ಫಲಿತಾಂಶ ದೊರೆಯಲು ಸಾಧ್ಯವಿದೆ. ಪೆರುವಾಜೆ ನೇಸರ ಯುವಕ ಮಂಡಲದ ನಿರಂತರ ಕಾರ್ಯಚಟುವಟಿಕೆಗಳು ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಪುತ್ತೂರಿನ ವೈದ್ಯ ಡಾ. ನರಸಿಂಹ ಶರ್ಮಾ ಹೇಳಿದರು.
ಅವರು ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ, ಸವಣೂರು ತನುಷ್ ಎಂಟಪ್ರ್ರೈಸ್ ಸಹಯೋಗದಲ್ಲಿ ಭಾನುವಾರ ನಡೆದ ಇ- ಶ್ರಮ್ ನೋಂದಣಿ, ಆಧಾರ್-ಪಾನ್ ಜೋಡಣೆ, ಕಿಸಾನ್ ಸಮ್ಮಾನ್ ಕೆವೈಸಿ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಕಾಲಘಟ್ಟದಲ್ಲಿ ಲಸಿಕೆ ಅಭಿಯಾನದಂತಹ ಆರೋಗ್ಯ ಪೂರಕ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಸಾಮಾಜಿಕ ಬದ್ಧತೆಯನ್ನು ಸದಾ ಕಾಲ ತೋರ್ಪಡಿಸುತ್ತಿರುವುದು ಪ್ರಶಂಸನೀಯ ಎಂದರು.
ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಸಭಾಧ್ಯಕ್ಷತೆ ವಹಿಸಿ ಮಾತನಾಡಿನೇಸರ ಯುವಕ ಮಂಡಲವು ಈಗಾಗಲೇ ಆಧಾರ್, ಆಯುಷ್ಮಾನ್ ನೋಂದಣಿ ಸೇರಿದಂತೆ ಹತ್ತಾರು ಚಟುವಟಿಕೆಗಳನ್ನು ಹಮ್ಮಿಕೊಂಡು ಜನಪರ ಕಾರ್ಯಕ್ಕೆ ಆದ್ಯತೆ ನೀಡಿದೆ. ಸರಕಾರದ ವಿವಿಧ ಸವಲತ್ತು ಪಡೆಯಲು ಇ ಶ್ರಮ್ ನಂತಹ ಗುರುತಿನ ಚೀಟಿಯ ಅಗತ್ಯವಿದ್ದು ಯುವಕ ಮಂಡಲ ವಾರ್ಡ್ ಮಟ್ಟದಲ್ಲಿ ಶಿಬಿರ ಆಯೋಜಿಸುವ ಮೂಲಕ ಜನರಿಗೆ ನೆರವಾಗಿದೆ ಎಂದರು.
ಪ್ರಗತಿಪರ ಕೃಷಿಕ ಗಣಪತಿ ಭಟ್ ನೀರ್ಕಜೆ ಮಾತನಾಡಿ ಸರಕಾರದ ನೂರಾರು ಯೋಜನೆಗಳನ್ನು ಜನರಿಗೆ ತಲುಪಿಸಲು ಗ್ರಾಮ ಮಟ್ಟದಲ್ಲಿ ಇಂತಹ ಶಿಬಿರಗಳು ಪ್ರಯೋಜನಕಾರಿ. ಹತ್ತಾರು ಚಟುವಟಿಕೆಗಳನ್ನು ಆಯೋಜಿಸಿ ಸಾಮಾಜಿಕ ಕಾರ್ಯಚಟುವಟಿಕೆಗೆ ಒತ್ತು ನೀಡುವ ಕಾರ್ಯ ಸಂಘಟನೆಯ ಮೂಲಕ ನಡೆದಿದ್ದು ಇದು ಎಲ್ಲರಿಗೂ ಮಾದರಿ ಎಂದರು.
ಸವಣೂರು ತನುಷ್ ಎಂಟಪ್ರ್ರೈಸ್ ಮಾಲಕ ಡಿ.ಜಿ.ರವಿರಾಜ್. ಮೌಂಟ್ ಕಾರ್ಮೆಲ್ ಮೊಡಂಕಾಪು ಕಾಲೇಜ್‍ನ ಹಿಂದಿ ಉಪನ್ಯಾಸಕಿ ಮಮತಾ ಕೆ.ಆರ್, ಸಂಜೀವಿನಿ ಒಕ್ಕೂಟದ ದೇವಕಿ, ಪೆರುವಾಜೆ ಗ್ರಾ.ಪಂ.ಉಪಾಧ್ಯಕ್ಷೆ ಚಂದ್ರಾವತಿ ಇಟ್ರಾಡಿ ಮತ್ತಿತರರು ಉಪಸ್ಥಿತರಿದ್ದರು.
ನೇಸರ ಯುವಕ ಮಂಡಲದ ಸದಸ್ಯ ಜೀವನ್ ಅಡೀಲು ಸ್ವಾಗತಿಸಿದರು. ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್. ವಂದಿಸಿದರು. ದೀಕ್ಷಾ ನೀರ್ಕಜೆ ನಿರೂಪಿಸಿದರು.