ಸುರತ್ಕಲ್ ಟೋಲ್‌ಗೇಟ್ ವಿರೋಧಿಸಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದ ಆಸೀಫ್ ಆಪತ್ಭಾಂಧವ

ಮಂಗಳೂರು, ಫೆ.13:ರಾಷ್ಟ್ರೀಯ ಹೆದ್ದಾರಿ 66ರ ಎನ್‌ಐಟಿಕೆ ಬಳಿಯಿರುವ ಟೋಲ್ಗೇಟ್ ತೆರವಿಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪತ್ಬಾಂಧವ ಅವರ ನೇತೃತ್ವದಲ್ಲಿ ಫೆ.7ರ ಸೋಮವಾರದಿಂದ ಆರಂಭಗೊಂಡ ಆಹೋರಾತ್ರಿ ಧರಣಿಯು ರವಿವಾರವೂ ನಡೆದಿದೆ. ಸೋಮವಾರವೂ ಧರಣಿ ಮುಂದುವರಿಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಮಧ್ಯೆ ಆಸಿಫ್ ಆಪತ್ಭಾಂಧವ ಸ್ವತಃ ತಾನು ಸಂಕೋಲೆಯಲ್ಲಿ ಬಂಧಿಯಾಗಿ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿದರು.
ಚಾಲಕರ ಒಕ್ಕೂಟದ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಆಚಾರ್ಯ, ಗೌರವಧ್ಯಕ್ಷ ಸತೀಶ್ ದೇವಾಡಿಗ, ಕಾರ್ಯದರ್ಶಿ ರೋನಿ, ಕಿನ್ನಿಗೋಳಿ ವಲಯ ಬಸ್ ಚಾಲಕ-ನಿರ್ವಾಹಕರ ಸಂಘದ ಗೌರವಾಧ್ಯಕ್ಷ ಭಾಸ್ಕರ್ ಪೂಜಾರಿ, ಅಧ್ಯಕ್ಷ ರಾಮ್ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಹರೀಶ್ ಮತ್ತಿತರರು ಪಾಲ್ಗೊಂಡು ಧರಣಿಗೆ ಬೆಂಬಲ ಸೂಚಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ದ.ಕ.ಜಿಲ್ಲಾಧ್ಯಕ್ಷ ಮೌಶೀರ್ ಸಾಮಾಣಿಗೆ, ಮಾದಿಗ ದಂಡೋರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಮಂಜುನಾಥ್ ಆರ್.ಕೆ, ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಉಡುಪಿ, ಸಾಮಾಜಿಕ ಹೋರಾಟಗಾರ ಶಶಿಧರ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತರಾದ ರವಿ ಶ್ರೀಯಾನ್ ಹೊಸಬೆಟ್ಟು, ರಹ್ಮಾನ್ ಇಡ್ಯ, ಫಯಾಝ್ ಕಂಚಿನಡ್ಕ, ಬಶೀರ್ ಬಂಟ್ವಾಳ ಧರಣಿಗೆ ಸಾಥ್ ನೀಡಿದರು.








