ಸಮವಸ್ತ್ರ ಇಲ್ಲದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ಗೆ ಹಿಂದಿನಂತೆ ಅವಕಾಶ: ಉಡುಪಿ ಶಾಸಕ ರಘುಪತಿ ಭಟ್
ಉಡುಪಿ ತಾಲೂಕು ಸಂಘಟನೆ, ಧಾರ್ಮಿಕ ಮುಖಂಡರ ಶಾಂತಿ ಸಭೆ

ಉಡುಪಿ, ಫೆ.13: ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಂತರ ಆದೇಶ ಹಾಗೂ ಸೋಮವಾರದಿಂದ ಪ್ರೌಢಶಾಲೆಗಳು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಹಾಗೂ ಧಾರ್ಮಿಕ ಮುಖಂಡರ ಶಾಂತಿ ಸಭೆಯು ರವಿವಾರ ಉಡುಪಿ ತಾಲೂಕು ಕಚೇರಿಯಲ್ಲಿ ಜರಗಿತು.
ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಉಡುಪಿ ಶಾಸಕ ಕೆ.ರಘುಪತಿ ಭಟ್, ಎಲ್ಲಿ ಸಮವಸ್ತ್ರ ಇರಲಿಲ್ಲವೋ ಅಲ್ಲಿ ಈ ಹಿಂದೆ ಇದ್ದ ಪದ್ದತಿಯನ್ನು ಮುಂದುವರೆಸಿಕೊಂಡು ಹೋಗಬಹುದು. ಸಮವಸ್ತ್ರ ಕಡ್ಡಾಯ ಇರುವಲ್ಲಿ ಹೈಕೋರ್ಟ್ ಆದೇಶವನ್ನು ಪಾಲಿಸಬೇಕು. ಸಮವಸ್ತ್ರ ಇಲ್ಲದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಹಾಕಿಕೊಂಡು ಹಿಂದಿನಂತೆ ಬರಬಹುದು. ಕೋರ್ಟ್ ಅದನ್ನು ಹೇಳಲಿಲ್ಲ. ಎಲ್ಲಿ ಸಮವಸ್ತ್ರ ಇದೆಯೋ ಅಲ್ಲಿ ಹಾಕಿಕೊಂಡು ಬರಲು ಹೇಳಿದೆ. ಯಾವುದೇ ಸಮಸ್ಯೆ ಇಲ್ಲದೆ ಸೌಹಾರ್ದತೆಯಿಂದ ನಡೆಸಿಕೊಂಡು ಹೋಗಬೇಕೆಂಬ ನಿರ್ಣಯ ಆಗಿದೆ ಎಂದರು.
ಉಡುಪಿ ತಹಶೀಲ್ದಾರ ಪ್ರದೀಪ್ ಕುರ್ಡೆಕರ್ ಮಾತನಾಡಿ, ಉಡುಪಿ ತಾಲೂಕಿನ ಸರ್ವಪಕ್ಷ ಹಾಗೂ ಸರ್ವಧರ್ಮದವರ ಸಭೆಯಲ್ಲಿ ಭಾಗವಹಿಸಿದ್ದು, ಶಾಂತಿ ಸಭೆ ಯಶಸ್ವಿಯಾಗಿದೆ. ಹೈಕೋರ್ಟ್ ಆದೇಶದಂತೆ ನಾಳೆ ಶಾಲೆಗಳು ಆರಂಭವಾಗುತ್ತವೆ. ಗುರುವಾರದಿಂದ ಪಿಯುಸಿ ಪದವಿ ಕಾಲೇಜುಗಳು ಪುರಾಂಭವಾಗುತ್ತವೆ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಲು ಒಪ್ಪಿದ್ದಾರೆ. ಉಡುಪಿ ಮಾದರಿ ರೀತಿಯಲ್ಲಿ ಸಮಸ್ಯೆ ನಿರ್ವಹಿಸುತ್ತೇವೆ. ಸಮವಸ್ತ್ರ ಕಡ್ಡಾಯ ಇರುವ ಶಾಲೆಗಳಲ್ಲಿ ಕಡ್ಡಾಯ ಧರಿಸಿ ಬರಬೇಕು ಎಂದರು.
ದಸಂಸ ಅಂಬೇಡ್ಕರ್ ವಾದ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ‘ಶಿಕ್ಷಣದಲ್ಲಿ ಉಡುಪಿ ಜಿಲ್ಲೆಗೆ ಒಳ್ಳೆಯ ಹೆಸರಿತ್ತು. ಆದರೆ ಈ ವಿವಾದದಿಂದಾಗಿ ಇಲ್ಲಿನ ಶೈಕ್ಷಣಿಕ ವ್ಯವಸ್ಥೆ ಹಾಳಾಗಿದೆ. ವಿದ್ಯಾರ್ಥಿಗಳ ಮಧ್ಯೆ ವಿಷ ಬೀಜ ಬಿತ್ತಿ ಗೊಂದಲ ಉಂಟು ಮಾಡಲಾಗಿದೆ. ಸರಕಾರ ಯಾರು ಕೂಡ ಪರ ವಿರೋಧ ಹೇಳಿಕೆ ನೀಡಬಾರದೆಂದು ತಿಳಿಸಿದರೂ ಇಲ್ಲಿನ ಕೆಲವು ರಾಜ ಕೀಯ ಮುಖಂಡರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗೆ ಮಾಡಿದರೆ ಶಾಂತಿ ಸಭೆಗೆ ಏನು ಅರ್ಥ ಇದೆ. ಮುಂದೆ ಬರುವ ಪರೀಕ್ಷೆ ನಡೆಸಲು ಹಿಂದಿನಂತೆ ಉತ್ತಮ ವಾತಾವರಣವನ್ನು ಕಲ್ಪಿಸಬೇಕು’ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಶಾಸಕ ಕೆ.ರಘುಪತಿ ಭಟ್, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಡುಪಿ ಡಿವೈಎಸ್ಪಿ ಸುಧಾಕರ್ ನಾಯ್ಕ್, ನಗರ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್, ವೃತ್ತ ನಿರೀಕ್ಷಕ ಶರಣ ಗೌಡ, ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ದಸಂಸ ಮುಖಂಡ ಶ್ಯಾಮ್‌ರಾಜ್ ಬಿರ್ತಿ, ಉಡುಪಿ ಶೋಕಾ ಮಾತಾ ಇಗರ್ಜಿಯ ರೆ.ಫಾ. ಚಾರ್ಲ್ಸ್ ಮಿನೇಜಸ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್, ಜಿಪಂ ಮಾಜಿ ಸದಸ್ಯ ವಿಲ್ಸನ್ ರೋಡಿಗ್ರಸ್, ಹಿಂದು ಜಾಗರಣಾ ವೇದಿಕೆಯ ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ವಿಷ್ಣು ಪಾಡಿಗಾರ್ ಮೊದಲಾದವರು ಉಪಸ್ಥಿತರಿದ್ದರು.
ಶಾಂತಿ ಸಭೆಗೆ ಹಾಜರಾಗುವಂತೆ ಸಿಎಫ್‌ಐ ನಾಯಕರಿಗೆ ಕರೆ ಮಾಡಿದ್ದೇವೆ. ಆದರೆ ಅವರು ಯಾರು ಕೂಡ ಸಭೆಗೆ ಬಂದಿಲ್ಲ ಎಂದು ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಫ್‌ಐ ಜಿಲ್ಲಾಧ್ಯಕ್ಷ ಆಸೀಲ್ ಅಕ್ರಂ, 'ಸಭೆಯ ಯಾವುದೇ ಮಾಹಿತಿಗಳು ಅಥವಾ ಆಮಂತ್ರಣ ಕ್ಯಾಂಪಸ್ ಫ್ರಂಟ್ ನಾಯಕರುಗಳಿಗೆ ಬಂದಿಲ್ಲ. ಬರುತ್ತಿದ್ದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೌಹಾರ್ದತೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಖಂಡಿತವಾಗಿಯೂ ಕ್ಯಾಂಪಸ್ ಫ್ರಂಟ್ ನಾಯಕರು ಭಾಗವಹಿಸುತ್ತಿದ್ದರು' ಎಂದರು.
ಪ್ರಜ್ಞಾವಂತರ, ಬುದ್ದಿವಂತರ ಉಡುಪಿ ಜಿಲ್ಲೆಯಲ್ಲಿ ಎಂದಿಗೂ ಈ ರೀತಿ ಗಲಭೆ ಆಗುವುದಿಲ್ಲ. ಕಾಲೇಜು ಒಳಗಿನ ಒಂದು ಸಣ್ಣ ವಿಚಾರ ಹೊರಗಡೆ ಹೋಗಿದೆ. ಈ ಪ್ರಕರಣವನ್ನು ಶಾಂತಿಯುತವಾಗಿ ಬಗೆಹರಿಸಬೇಕಾಗಿದೆ. ಹಿಜಾಬ್ ರಹಿತವಾಗಿ ಶಾಲೆಗೆ ಕಳುಹಿಸುವುದು ಪೋಷಕರಿಗೆ ಬಿಟ್ಟ ವಿಚಾರವಾಗಿದೆ. ಮಕ್ಕಳನ್ನು ಕಳುಹಿಸುವುದು ಪೋಷಕರ ತೀರ್ಮಾನ. ಎಲ್ಲ ಮಕ್ಕಳು ಶಾಲೆಗೆ ಬರಲಿ ಎಂಬುದು ನಮ್ಮ ಆಶಯ. ಆಡಳಿತ ಮಂಡಳಿ ಈ ನಿಟ್ಟಿನಲ್ಲಿ ಸಹಕರಿಸಲಿ. ಮಕ್ಕಳು ಸಾಂವಿಧಾನಿಕ ಹಕ್ಕು ಕೇಳುತ್ತಿದ್ದಾರೆ. ಆದರೆ ಪ್ರಕರಣ ನ್ಯಾಯಾಲಯದಲ್ಲಿದೆ. ಹೈಕೋರ್ಟ್ ತೀರ್ಮಾನ ಒಳ್ಳೆಯದು ಬರುತ್ತದೆ ಎಂಬ ವಿಶ್ವಾಸವಿದೆ.
-ನಝೀರ್ ಉಡುಪಿ, ಜಿಲ್ಲಾಧ್ಯಕ್ಷರು, ಎಸ್‌ಡಿಪಿಐ
ಕೋರ್ಟ್‌ಗೆ ಹೋಗಲು ನಾವೇ ಹೇಳಿರುವುದು: ಅಮೃತ್ ಶೆಣೈ
ಈ ವಿವಾದ ಆರಂಭವಾದ ಬಳಿಕ ನಾವು ಕಾಲೇಜಿಗೆ ಭೇಟಿ ನೀಡಿದೇವು. ಆಗ ಅಲ್ಲಿ ಹಿಜಾಬ್‌ಗೆ ಅವಕಾಶ ಇರಲಿಲ್ಲ ಎಂಬುದು ಗೊತ್ತಾಯಿತು. ಅದಕ್ಕೆ ಮಕ್ಕಳಿಗೆ ನಾವೇ ಕೋರ್ಟ್‌ಗೆ ಹೋಗಲು ಹೇಳಿರುವುದು. ನಾವೇ ಅವರಿಗೆ ವಕೀಲರ ವ್ಯವಸ್ಥೆ ಮಾಡಿರುವುದು. ಕೋರ್ಟ್ ಹೋಗುವುದು ಅವರ ಹಕ್ಕು ಎಂದು ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ತಿಳಿಸಿದ್ದಾರೆ.
ನಮಗೆ ಕುಂದಾಪುರ, ಎಂಜಿಎಂ ಕಾಲೇಜುಗಳಲ್ಲಿ ನಡೆದ ಘಟನೆಯ ಬಗ್ಗೆ ಅಸಮಾಧಾನ ಇದೆ. ಆ ಕಾಲೇಜುಗಳಲ್ಲಿ ಎಷ್ಟೋ ವರ್ಷಗಳಿಂದ ಹಿಜಾಬ್ ಹಾಕಿಕೊಂಡು ಬಂದು ಕಲಿತು ಡಾಕ್ಟರ್, ಇಂಜಿನಿಯರ್ ಆದವರು ಇದ್ದಾರೆ. ಅಲ್ಲಿ ಇಷ್ಟು ದಿನ ಸಮಸ್ಯೆ ಇರಲಿಲ್ಲ. ಈಗ ಏಕಾಏಕಿ ಕೆಲವು ಹುಡುಗರು ಕೇಸರಿ ಶಾಲು ಹಾಕಿಕೊಂಡು ಪುಂಡಾಟಿಕೆ ಮಾಡಿದ್ದಾರೆ. ಕೇಸರಿ ಎಂಬುದು ಧಾರ್ಮಿಕ ಪವಿತ್ರ ಬಣ್ಣ. ಈ ರೀತಿ ಕಾನೂನು ಉಲ್ಲಂಘನೆ ಚಟುವಟಿಕೆಗಳಿಗೆ ಬಳಸುವುದು ಸರಿಯಲ್ಲ. ಅಂತಹ ಘಟನೆ ಮುಂದೆ ಕಾಲೇಜು ಪುನಾರಂಭ ಆಗುವಾಗ ಆಗದಂತೆ ಎಚ್ಚರ ವಹಿಸಬೇಕೆಂದು ನಾವು ಸರಕಾರವನ್ನು ಒತ್ತಾಯಿಸಿದ್ದೇವೆ ಎಂದು ಅವರು ಹೇಳಿದರು.