ಫೆ.19ರವರೆಗೆ ದ.ಕ.ಜಿಲ್ಲೆಯ ಶಾಲಾ-ಕಾಲೇಜಿನ ಸುತ್ತಮುತ್ತ ಸೆಕ್ಷನ್ 144 ಜಾರಿ

ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.
ಮಂಗಳೂರು, ಫೆ.13: ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಫೆ.14ರ ಮುಂಜಾನೆ 6ರಿಂದ ಫೆ.19ರ ಸಂಜೆ 6 ಗಂಟೆಯವರೆಗೆ ದ.ಕ.ಜಿಲ್ಲಾದ್ಯಂತದ ಎಲ್ಲಾ ಶಾಲಾ ಕಾಲೇಜುಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯೊಳಗೆ ಸೆ.144ನ್ನು ಜಾರಿಗೊಳಿಸಿ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರತ್ಯೇಕವಾಗಿ ಆದೇಶ ಹೊರಡಿಸಿದ್ದಾರೆ.
ಕಾನೂನು ಭಂಗ ಮಾಡುವ ಉದ್ದೇಶದಿಂದ ಶಾಲಾ ಕಾಲೇಜಿನ 200 ಮೀಟರ್ ಸುತ್ತಮುತ್ತಲು 5ಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ, ಮೆರವಣಿಗೆ, ಸಭೆ ನಡೆಸುವಂತಿಲ್ಲ. ಯಾವುದೇ ಆಯುಧ, ಕುಡುಗೋಲು, ಖಡ್ಗ, ಭರ್ಜಿ, ಚೂರಿ,ದೊಣ್ಣೆ, ಲಾಠಿ ಅಥವಾ ದೈಹಿಕ ದಂಡನೆಗೆ ಕಾರಣವಾಗುವ ಅಥವಾ ಅದಕ್ಕೆ ಪೂರಕವಾದ ಯಾವುದೇ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ.
ಈ ಆದೇಶವು ಸರಕಾರದಿಂದ ನಡೆಸಲ್ಪಡುವ ಯಾವುದೇ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರು ಸ್ಷಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಸಮವಸ್ತ್ರ ಇಲ್ಲದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ಗೆ ಹಿಂದಿನಂತೆ ಅವಕಾಶ: ಉಡುಪಿ ಶಾಸಕ ರಘುಪತಿ ಭಟ್