ಉಡುಪಿ ಜಿಲ್ಲೆಯಲ್ಲಿ ರವಿವಾರ 54 ಮಂದಿಗೆ ಕೋವಿಡ್ ಸೋಂಕು ದೃಢ
![ಉಡುಪಿ ಜಿಲ್ಲೆಯಲ್ಲಿ ರವಿವಾರ 54 ಮಂದಿಗೆ ಕೋವಿಡ್ ಸೋಂಕು ದೃಢ ಉಡುಪಿ ಜಿಲ್ಲೆಯಲ್ಲಿ ರವಿವಾರ 54 ಮಂದಿಗೆ ಕೋವಿಡ್ ಸೋಂಕು ದೃಢ](https://www.varthabharati.in/sites/default/files/images/articles/2022/02/13/324933-1644767631.gif)
ಸಾಂದರ್ಭಿಕ ಚಿತ್ರ(PTI)
ಉಡುಪಿ, ಫೆ.13: ರವಿವಾರ ಜಿಲ್ಲೆಯಲ್ಲಿ ಉಡುಪಿಯ 72 ವರ್ಷ ಪ್ರಾಯದ ಹಿರಿಯರೊಬ್ಬರು ಕೋವಿಡ್ಗೆ ಬಲಿಯಾಗಿದ್ದು, ದಿನದಲ್ಲಿ 54 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ದಿನದಲ್ಲಿ 74 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದರೆ, ಸದ್ಯ ಚಿಕಿತ್ಸೆಯಲ್ಲಿರುವವರ ಸಂಖ್ಯೆ 744ಕ್ಕೆ ಇಳಿದಿದೆ.
ಇಂದು ಉಡುಪಿಯಲ್ಲಿ 72 ವರ್ಷ ಪ್ರಾಯದ ವೃದ್ಧರೊಬ್ಬರು ಕೋವಿಡ್ ಸೋಂಕಿನೊಂದಿಗೆ ಮೃತಪಟ್ಟಿದ್ದಾರೆ. ಮಧುಮೇಹ, ಕಿಡ್ನಿ ಸಮಸ್ಯೆ ಹಾಗೂ ಇತರ ಗಂಭೀರ ಸಮಸ್ಯೆಗಳನ್ನು ಹೊಂದಿದ್ದ ಇವರು ಕೋವಿಡ್ ಗುಣಲಕ್ಷಣದೊಂದಿಗೆ ಉಸಿರಾಟದ ತೊಂದರೆ ಹಾಗೂ ನ್ಯುಮೋನಿಯಾದ ಕಾರಣಕ್ಕಾಗಿ ಶುಕ್ರವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅದೇ ದಿನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಇದರಿಂದ ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ 532ಕ್ಕೇರಿದೆ.
ಇಂದು ಪಾಸಿಟಿವ್ ಬಂದ 54 ಮಂದಿಯಲ್ಲಿ ತಲಾ 30 ಮಂದಿ ಪುರುಷರು ಹಾಗೂ 24 ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ 36 ಮಂದಿ ಉಡುಪಿ ತಾಲೂಕಿಗೆ, 7 ಮಂದಿ ಕುಂದಾಪುರ ಹಾಗೂ 11 ಮಂದಿ ಕಾರ್ಕಳ ತಾಲೂಕಿಗೆ ಸೇರಿದವರು. ಪಾಸಿಟಿವ್ ಬಂದವರಲ್ಲಿ 50 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಈಗ 52ಕ್ಕಿಳಿದಿದೆ. ಇವರಲ್ಲಿ ಮೂವರು ವೆಂಟಿಲೇಟರ್ ಹಾಗೂ 8 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಶನಿವಾರ 74 ಮಂದಿ ರೋಗಮುಕ್ತರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 17398ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 1561 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 18,034ಕ್ಕೇರಿದೆ.
ಜಿಲ್ಲೆಯಲ್ಲಿ ಇಂದು ಒಟ್ಟು 9 ಮಂದಿ ಕೋವಿಡ್ ನಿಯಂತ್ರಣಕ್ಕಿರುವ ಲಸಿಕೆಯನ್ನು ಪಡೆದಿದ್ದಾರೆ. ಇಬ್ಬರು ಮುನ್ನೆಚ್ಚರಿಕೆ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಉಳಿದಂತೆ ಒಬ್ಬರು ಮೊದಲ ಡೋಸ್ ಹಾಗೂ ಆರು ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.