ಸರಕಾರವು ಕಾರ್ಮಿಕರ ಕಡೆ ಗಮನ ಹರಿಸಲಿ: ಸಿಐಟಿಯು
ಬೆಂಗಳೂರು, ಫೆ. 13: ‘ನಗರದ ಹೂಡಿಯಲ್ಲಿ ಶಾಂತಿನಿಕೇತನ್ ಸಮೀಪವಿರುವ ಸ್ಯಾಸ್‍ಮೋಸ್ ಕಾರ್ಖಾನೆಯು ಹತ್ತು ತಿಂಗಳ ಹಿಂದೆ 119 ಕಾರ್ಮಿಕರಿಗೆ ಕೆಲಸವನ್ನು ನಿರಾಕರಿಸಿದೆ. ಮರಳಿ ಕೆಲಸಕ್ಕೆ ತೆಗೆದುಕೊಳ್ಳುವಂತೆ ಕಾರ್ಮಿಕರು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಆದರೆ ಸರಕಾರವು ಇತ್ತ ಗಮನ ಹರಿಸುತ್ತಿಲ್ಲ' ಎಂದು ಸಿಐಟಿಯು ಅಸಮಾಧಾನ ವ್ಯಕ್ತಪಡಿಸಿದೆ.
ರವಿವಾರದಂದು ಸಿಐಟಿಯುನ ಮುಖಂಡ ಗೋಪಾಲ್ ಗೌಡ ಮಾತನಾಡಿ, ‘ಎಪ್ರಿಲ್ ತಿಂಗಳಿನಲ್ಲಿ 119 ಕಾರ್ಮಿಕರನ್ನು ಯಾವುದೇ ಪೂರ್ವಭಾವಿ ನೋಟಿಸ್ ಅನ್ನು ನೀಡದೆ ಕೆಲಸದಿಂದ ವಜಾಗೊಳಿಸಿದೆ. ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಂಘಟನೆಯ ಅಗತ್ಯವಿರುತ್ತದೆ. ಹಾಗಾಗಿ ಕಾರ್ಮಿಕರು ಒಗ್ಗೂಡಿ ಸಂಘವನ್ನು ಸೇರಿಕೊಡಿದ್ದು, ಅಪರಾಧ ಎಂದು ಭಾವಿಸಿರುವ ಸ್ಯಾಸ್‍ಮೋಸ್ ಕಾರ್ಖಾನೆಯು ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿದೆ' ಎಂದು ದೂರಿದರು.
‘ಕೇವಲ 2ಕೋಟಿ ರೂ.ಗಳಲ್ಲಿ ಸ್ಥಾಪಿತವಾಗಿರುವ ಖಾಸಗಿ ಒಡೆತನದ ಸ್ಯಾಸ್‍ಮೋಸ್ ಕಾರ್ಖಾನೆಯು ಇಂದು 600 ಕೋಟಿ ರೂ.ಗಳಿಗಿಂತ ಹೆಚ್ಚಿನ ವಹಿವಾಟನ್ನು ನಡೆಸುತ್ತಿದೆ. ಆದರೆ, ಇಂತಹ ಅಪೂರ್ವ ಯಶಸ್ಸಿಗಾಗಿ ಶ್ರಮಿಸಿದ ಕಾರ್ಮಿಕರನ್ನು ಬೀದಿಪಾಲು ಮಾಡಿರುವುದು, ಖಂಡನಾರ್ಹವಾಗಿದೆ. ಅಲ್ಲದೆ, ಕಾರ್ಮಿಕರನ್ನು ಕೇವಲ ಗುತ್ತಿಗೆ ಆಧಾರದಲ್ಲಿಯೇ ಮುಂದುವರೆಯುವಂತೆ ಮಾಡಿ, ಖಾಯಂಗೊಳಿಸಿದೆ, ಕಾರ್ಮಿಕರನ್ನು ಕಡೆಗಣಿಸಲಾಗಿದೆ. ಇನ್ನು ಕಾರ್ಮಿಕರನ್ನು ಕಾರ್ಖಾನೆಗೆ ಪೂರೈಕೆ ಮಾಡುವ ಕಂಪನಿಯು ಯಾವುದೇ ರೀತಿಯ ಲೇಸೆನ್ಸ್ ಅನ್ನು ಹೊಂದಿರುವಂತಿಲ್ಲ' ಎಂದು ಅವರು ಮಾಹಿತಿ ನೀಡಿದರು.
‘ಕಾನೂನುಬಾಹಿರವಾಗಿ ಕೆಲಸ ನಿರಾಕರಿಸಿದನ್ನು ಪ್ರಶ್ನಿಸಿ, ಕಾರ್ಮಿಕರು ಪ್ರಾದೇಶಿಕ ಆಯುಕ್ತರ ಬಳಿ ದೂರು ಸಲ್ಲಿಸಿದರು. ಇದನ್ನು ಪರಿಷ್ಕರಿಸಿದ ಬಳಿಕ ಸ್ಯಾಸ್‍ಮೋಸ್ ಕಾರ್ಖಾನೆಯು ಕಾರ್ಮಿಕರಿಗೆ ಕೆಲಸ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಪುಣೆಯಲ್ಲಿರುವ ಕಂಪನಿಗೆ ಕಾರ್ಮಿಕರನ್ನು ವರ್ಗಾಹಿಸುವ ಹುನ್ನಾರ ನಡೆಸಿತ್ತು. ಪುಣೆಯಲ್ಲಿ ಸ್ಯಾಸ್‍ಮೋಸ್ ಕಾರ್ಖಾನೆಯ ಬ್ರಾಂಚ್ ಇಲ್ಲದ ಕಾರಣ ಕಾರ್ಮಿಕರು ಇದನ್ನು ತಿರಸ್ಕರಿಸಿದರು' ಎಂದು ಸ್ಪಷ್ಟಪಡಿಸಿದರು.
ಪ್ರಾದೇಶಿಕ ಕಾರ್ಮಿಕ ಆಯುಕ್ತರ ಬಳಿ ವಿಚಾರಣೆ ನಡೆಯುತ್ತಿರುವ ಕಾರಣ ಕಾರ್ಖಾನೆಯಲ್ಲಿ, ಕಾರ್ಮಿಕರಿಗೆ ಕೆಲಸವನ್ನು ನೀಡಬೇಕು. ಪ್ರಕರಣ ಇತ್ಯಾರ್ಥವಾಗಿ ಕಾರ್ಮಿಕರನ್ನು ವಜಾ ಮಾಡಿದ ಆಡಳಿತ ಮಂಡಳಿಯ ಪರವಾಗಿ ತೀರ್ಪು ಬಂದಲ್ಲಿ ಕಾರ್ಮಿಕರು ಪ್ರತಿಭಟನೆಯನ್ನು ಬಿಟ್ಟು ಹೊರಡುತ್ತಾರೆ. ಅಲ್ಲಿಯವರೆಗೂ ಕಾರ್ಮಿಕರಿಗೆ ಕೆಲಸವನ್ನು ನೀಡಬೇಕು ಎಂದು ಅವರು ಮನವಿ ಮಾಡಿದರು.
ಸ್ಯಾಸ್‍ಮೋಸ್ ಕಾರ್ಖಾನೆಯಲ್ಲಿ ಏರೋಸ್ಪೆಸ್ ಸಂಬಂಧಿಸಿದಂತೆ ಬಿಡಿಭಾಗಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕೆಲಸಕ್ಕೆ ಸೇರಿ ವರ್ಷಗಳೇ ಕಳೆದರೂ, ಕನಿಷ್ಟ ವೇತನವನ್ನೇ ಪಾವತಿ ಮಾಡುತ್ತಿದೆ. ಇಂತಹ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ, ಸಂಘವನ್ನು ಪ್ರಾರಂಭಿಸಬೇಕಾಯಿತು. ಇದನ್ನು ನೆಪವಾಗಿರಿಕೊಂಡು ಕೆಲಸವನ್ನು ನಿರಾಕರಿಸಿದೆ. ಕಾರ್ಮಿಕರನ್ನು ವಿಕಲಚೇತನರು ಸೇರಿದಂತೆ ಮಹಿಳೆಯರು ಇದ್ದಾರೆ. ಕೆಲಸವಿಲ್ಲದ ಕಾರಣ ಕುಟುಂಬ ಪೋಷಣೆಯು ಕಷ್ಟವಾಗಿದೆ. ಹಾಗಾಗಿ ಕೆಲಸವನ್ನು ಮರಳಿ 119 ಕಾರ್ಮಿರಿಗೂ ನೀಡಬೇಕು.
-ರಾಜು, ಸ್ಯಾಸ್‍ಮೋಸ್ ಕಾರ್ಖಾನೆಯ ವಜಾಗೊಂಡ ಕಾರ್ಮಿಕ







