ಸುಳ್ಳು ಜಾತಿ ಪ್ರಮಾಣ ಪತ್ರದ ಆರೋಪ: ಪ್ರಭು ಚೌಹಾಣ್ ವಜಾಕ್ಕೆ ದಸಂಸ ಆಗ್ರಹ

ಬೆಂಗಳೂರು, ಫೆ. 13: ‘ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಸೃಷ್ಟಿಸಿ, ಶಾಸಕರಾಗಿರುವ ಸಚಿವ ಪ್ರಭು ಚೌಹಾಣ್ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಬೇಕು' ಎಂದು ದಲಿತ ಸಂಘರ್ಷ ಸಮಿತಿ(ಭೀಮಶಕ್ತಿ) ರಾಜ್ಯಾಧ್ಯಕ್ಷ ಹೆಬ್ಬಾಳ್ ವೆಂಕಟೇಶ್ ಆಗ್ರಹಿಸಿದ್ದಾರೆ.
‘ಮೂಲತಃ ಮಹಾರಾಷ್ಟ್ರದವರಾದ ಪ್ರಭು ಚೌಹಾಣ್ ಪರಿಶಿಷ್ಟ ಜಾತಿ(ಎಸ್ಸಿ)ಗೆ ಮೀಸಲಿರಿಸಿದ್ದ ಬೀದರ್ ಜಿಲ್ಲೆಯ ಔರಾದ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಮಹಾರಾಷ್ಟ್ರದಲ್ಲಿ ಅವರ ಜಾತಿಯನ್ನು ಬುಡಕಟ್ಟು ಜನಾಂಗ(ಎಸ್ಟಿ) ಎಂದು ಗುರುತಿಸಿದ್ದು, ನೆರೆರಾಜ್ಯದ ಅವರನ್ನು ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ(ಎಸ್ಸಿ) ಎಂದು ಪರಿಗಣಿಸಲು ಸಾಧ್ಯವಿಲ್ಲ.
ಹೀಗಾಗಿ ಹೈಕೋರ್ಟ್ ಈ ವಿಚಾರವಾಗಿ ತನಿಖೆಗೆ ಆದೇಶಿಸಿತ್ತು. ಆ ದಿನದಂದೇ ಚೌಹಾಣ್ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತನಿಖಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿಸಿದ್ದಾರೆ. ಅಲ್ಲದೆ, ತಮಗೆ ಇಷ್ಟ ಬಂದತೆ ತನಿಖೆಯ ಹಾದಿಯನ್ನು ತಪ್ಪಿಸಿದರು' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಫೆ.1ರಂದು ಪುನಃ ಹೈಕೋರ್ಟ್ ಪ್ರಭು ಚೌಹಾಣ್ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮರು ತನಿಖೆಗೆ ಆದೇಶಿಸಿದೆ. ಪ್ರಭು ಚೌಹಾಣ್ ಸಚಿವ ಸ್ಥಾನದಲ್ಲಿದ್ದರೆ, ಈ ತನಿಖೆಯ ದಿಕ್ಕು ತಪ್ಪಿಸಬಹುದು. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಚೌಹಾಣ್ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ಕೈಬಿಟ್ಟು, ನ್ಯಾಯಯುತವಾಗಿ ತನಿಖೆಯನ್ನು ನಡೆಸಲು ಅನುವು ಮಾಡಿಕೊಡಬೇಕು' ಎಂದು ವೆಂಕಟೇಶ್ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.







