'ನಮ್ಮ ಅಬ್ಬಕ್ಕ 2022' ರ ಸಂಘಟನಾ ಸಮಿತಿ ಸಭೆ

ಉಳ್ಳಾಲ, ಫೆ.13: ಮಂಗಳೂರು ಮಹಾನಗರ ಪಾಲಿಕೆ ಮತ್ತು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯುವ 'ನಮ್ಮ ಅಬ್ಬಕ್ಕ - 2022: ಅಮೃತ ಸ್ವಾತಂತ್ರ್ಯ ಸಂಭ್ರಮ’ದ ಪೂರ್ವಸಿದ್ಧತಾ ಸಭೆಯು ಕೋಟೆಕಾರ್ ಕೊಲ್ಯದ ಶ್ರೀ ಶಾರದಾ ಸಭಾ ಸದನದಲ್ಲಿ ಜರಗಿತು.
ಪ್ರತಿಷ್ಠಾನದ ಸಂಚಾಲಕ ಹಾಗೂ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರಶೆಟ್ಟಿ ಉಳಿದೊಟ್ಟು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಸ್ಪರ್ಧಾ ಸಂಚಾಲಕ ತ್ಯಾಗಂ ಹರೇಕಳ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಸಮೂಹ ದೇಶಭಕ್ತಿ ಗೀತೆ ಸ್ಪರ್ಧೆ ಮತ್ತು ಸಾರ್ವಜನಿಕರಿಗಾಗಿ ನಡೆಯುವ ಭಾಷಣ ಸ್ಪರ್ಧೆಗಳ ನಿಯಮಾವಳಿಗಳನ್ನು ಸಭೆಯ ಮುಂದಿಟ್ಟರು. ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಉಪಾಧ್ಯಕ್ಷೆ ನಮಿತಾ ಶ್ಯಾಂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ನೀಡಿದರು. ಕೋಶಾಧಿಕಾರಿ ಪಿ.ಡಿ.ಶೆಟ್ಟಿ ಮತ್ತು ಹಿರಿಯ ಸದಸ್ಯೆ ಸುವಾಸಿನಿ ಬಬ್ಬುಕಟ್ಟೆ ವಿವಿಧ ಸಮಿತಿಗಳ ಕಾರ್ಯಕಲಾಪಗಳ ಬಗ್ಗೆ ತಿಳಿಸಿದರು.
ಸದಸ್ಯರಾದ ಕೆ.ಲೋಕನಾಥ ರೈ, ತುಕಾರಾಮ್ ಮಾಸ್ಟರ್, ವಿಕ್ರಂ ದತ್ತ, ಮೋಹನದಾಸ್ ರೈ, ಡಾ.ಅರುಣ್ ಉಳ್ಳಾಲ್, ಪ್ರಭಾಕರ್ ರೈ ಮತ್ತು ಗೀತಾ ಜ್ಯುಡಿತ್ ಸಲ್ದಾನ ಅಭಿಪ್ರಾಯ ವ್ಯಕ್ತಪಡಿಸಿದರು. ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ವಿಜಯಲಕ್ಷ್ಮಿ ಕಟೀಲು ವಂದಿಸಿದರು.