ಹಿಜಾಬ್ ಧರಿಸಿದ ಮಹಿಳೆ ಮುಂದೊಂದು ದಿನ ಪ್ರಧಾನಿಯಾಗುತ್ತಾಳೆ: ಅಸದುದ್ದೀನ್ ಉವೈಸಿ

ಹೊಸದಿಲ್ಲಿ, ಫೆ. 13: ಹಿಜಾಬ್ ಧರಿಸಿದ ಬಾಲಕಿ ಮುಂದೊಂದು ದಿನ ಭಾರತದ ಪ್ರಧಾನಿ ಆಗುತ್ತಾಳೆ ಎಂದು ಎಐಎಂಐಎಂನ ಸಂಸದ ಅಸದುದ್ದೀನ್ ಉವೈಸಿ ರವಿವಾರ ಘೋಷಿಸಿದ್ದಾರೆ. ಅಸದುದ್ದೀನ್ ಅವರು ಟ್ವೀಟ್ ಮಾಡಿದ 43 ಸೆಕೆಂಡ್ಗಳ ವೀಡಿಯೊದಲ್ಲಿ ಹಿಜಾಬ್ ಧರಿಸಿದ ಬಾಲಕಿಯರು ಅತ್ಯುಚ್ಛ ಎತ್ತರಕ್ಕೆ ಏರಲಿದ್ದಾರೆ ಎಂದು ಹೇಳುತ್ತಿರುವುದು ಕೇಳಿ ಬಂದಿದೆ.
‘‘ಹಿಜಾಬ್ ಧರಿಸಿದ ಮಹಿಳೆಯರು ವೈದ್ಯರು, ಜಿಲ್ಲಾಧಿಕಾರಿ, ದಂಡಾಧಿಕಾರಿ, ಉದ್ಯಮಿ ಹೀಗೆ ಏನೂ ಆಗಬಹುದು. ಅದನ್ನು ನೋಡಲು ನಾನು ಇಲ್ಲದೇ ಇರಬಹುದು, ಆದರೆ, ಒಂದು ದಿನ ಹಿಜಾಬ್ ಧರಿಸಿದ ಮಹಿಳೆ ಈ ದೇಶದ ಪ್ರಧಾನಿ ಆಗುತ್ತಾಳೆ’’ ಎಂದು ಉವೈಸಿ ಹೇಳಿದ್ದಾರೆ. ಈಗ ಕರ್ನಾಟಕ ಹಾಗೂ ದೇಶದ ಇತರ ಭಾಗಗಳಲ್ಲಿ ಹರಡುತ್ತಿರುವ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಉವೈಸಿ ಅವರು ಈ ಹೇಳಿಕೆ ನೀಡಿದ್ದಾರೆ.
ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ತೊಂದರೆಗೆ ಒಳಗಾದ ಮುಸ್ಲಿಂ ವಿದ್ಯಾರ್ಥಿನಿ ಮುಸ್ಕಾನ್ ಅವರನ್ನು ಬಹಿರಂಗವಾಗಿ ಬೆಂಬಲಿಸಿದ ಒಂದು ದಿನದ ಬಳಿಕ ಉವೈಸಿ ಅವರು ಹಿಜಾಬ್ ಧರಿಸಿದ ಬಾಲಕಿ ಭವಿಷ್ಯದ ಪ್ರಧಾನಿ ಆಗುತ್ತಾಳೆ ಎಂದು ಭವಿಷ್ಯ ನುಡಿದಿದ್ದಾರೆ.





