29 ಮಹಿಳೆಯರು ತಾಲಿಬಾನ್ ಬಂಧನದಲ್ಲಿ: ಅಮೆರಿಕ ಪ್ರತಿನಿಧಿ
ಕಾಬೂಲ್ ನಲ್ಲಿ 29 ಮಹಿಳೆಯರು ಹಾಗೂ ಅವರ ಕುಟುಂಬದವರನ್ನು ತಾಲಿಬಾನ್ ಬಂಧನದಲ್ಲಿಟ್ಟಿದೆ. ಶುಕ್ರವಾರ ವಶಕ್ಕೆ ಪಡೆದಿದ್ದ 40 ಮಂದಿಯಲ್ಲಿ ಇವರೂ ಸೇರಿದ್ದರು ಎಂದು ಅಫ್ಗಾನ್ನ ಮಹಿಳೆ, ಬಾಲಕಿಯರು ಮತ್ತು ಮಾನವ ಹಕ್ಕುಗಳ ವಿಶೇಷ ಪ್ರತಿನಿಧಿ ರೀನಾ ಅಮೀರಿ ಹೇಳಿದ್ದಾರೆ.
ಇಂತಹ ಅನ್ಯಾಯದ ಬಂಧನಗಳು ಸಮಾಪ್ತಿಯಾಗಬೇಕು ಎಂದು ಅವರು ಟ್ವೀಟ್ ಮಾಡಿದ್ದು ಬಳಿಕ ಅದನ್ನು ಡಿಲೀಟ್ ಮಾಡಲಾಗಿದೆ. ಆದರೆ ಕಾಬೂಲ್ನಲ್ಲಿ ಹಲವು ಮಹಿಳೆಯರು ಬಂಧನದಲ್ಲಿರುವುದನ್ನು ಹಲವು ಮೂಲಗಳು ದೃಢಪಡಿಸಿವೆ. ಅಫ್ಗಾನ್ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಬಂಧನಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಅಫ್ಗಾನಿಸ್ತಾನದಲ್ಲಿ ನಾಪತ್ತೆಯಾಗಿರುವ ಮಹಿಳಾ ಕಾರ್ಯಕರ್ತೆಯರ ಯೋಗಕ್ಷೇಮದ ವಿಷಯದಲ್ಲಿ ನನಗೆ ಹೆಚ್ಚಿನ ಆತಂಕವಿದೆ. ಇದರಲ್ಲಿ ಹಲವರು ಕಣ್ಮರೆಯಾಗಿದ್ದು ಹಲವ ದಿನಗಳಿಂದ ಅವರ ಬಗ್ಗೆ ಯಾವುದೇ ಮಾಹಿತಿಯಿಲ್ಲ . ಅವರ ಸುರಕ್ಷತೆಯನ್ನು ಖಾತರಿಪಡಿಸಿ ಅವರು ಮನೆಗೆ ಮರಳುವಂತೆ ತಾಲಿಬಾನ್ ಅನ್ನು ಆಗ್ರಹಿಸುವುದಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಹೇಳಿದ್ದಾರೆ.
ಪ್ರತಿರೋಧ ಮತ್ತು ಪ್ರತಿಭಟನೆಯನ್ನು ಹತ್ತಿಕ್ಕಿ ಪ್ರತಿಭಟನಾಕಾರರನ್ನು ಬಂಧನದಲ್ಲಿಡುವ ಎಲ್ಲಾ ಹಕ್ಕು ತಮಗಿದೆ ಎಂದು ಜನವರಿಯಲ್ಲಿ ತಾಲಿಬಾನ್ ಆಡಳಿತ ಹೇಳಿತ್ತು. ಕಾಬೂಲ್ನಲ್ಲಿನ ಮನೆಯಿಂದ ಮಹಿಳಾ ಹಕ್ಕುಗಳ ಕಾರ್ಯಕರ್ತರಾದ ತಮನ್ನಾ ಝರ್ಯಾಬಿ ಮತ್ತು ಪರ್ವಾನಾ ಇಬ್ರಾಹಿಂಖೆಲ್ರನ್ನು ಅಪಹರಿಸಲಾಗಿದೆ ಎಂದು ಸುದ್ಧಿಸಂಸ್ಥೆ ವರದಿ ಮಾಡಿತ್ತು. ಆದರೆ ಈ ವರದಿಯನ್ನು ನಿರಾಕರಿಸಿದ್ದ ತಾಲಿಬಾನ್ ಸರಕಾರದ ವಕ್ತಾರ ಝಬೀಹುಲ್ಲಾ ಮುಜಾಹಿದ್, ಕಾನೂನು ಉಲ್ಲಂಘಿಸಿ, ಪ್ರತಿಭಟನೆ ನಡೆಸುವ ಮೂಲಕ ಶಾಂತಿ ಕದಡುವ ಮತ್ತು ದೊಂಬಿಗೆ ಪ್ರಯತ್ನಿಸುವ ವ್ಯಕ್ತಿಗಳನ್ನು ಬಂಧಿಸುವ ಎಲ್ಲಾ ಹಕ್ಕು ಸರಕಾರಕ್ಕಿದೆ ಎಂದಿದ್ದರು.







