ಅಫ್ಗಾನ್ನಲ್ಲಿ ಹಲವು ಬ್ರಿಟನ್ ಪ್ರಜೆಗಳು ಬಂಧನದಲ್ಲಿದ್ದಾರೆ ಬ್ರಿಟನ್ ಸರಕಾರ
ಲಂಡನ್, ಫೆ.13: ಹಲವು ಬ್ರಿಟಿಷ್ ಪ್ರಜೆಗಳು ಅಫ್ಗಾನಿಸ್ತಾನದಲ್ಲಿ ಬಂಧನದಲ್ಲಿದ್ದು ಈ ವಿಷಯವನ್ನು ಅಫ್ಗಾನ್ನ ತಾಲಿಬಾನ್ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಬ್ರಿಟನ್ನ ವಿದೇಶ ವ್ಯವಹಾರ ಇಲಾಖೆ ಶನಿವಾರ ಹೇಳಿದೆ. ಬಿಬಿಸಿ ವರದಿಗಾರನ ಸಹಿತ ಇಬ್ಬರು ಪತ್ರಕರ್ತರನ್ನು ಶುಕ್ರವಾರ ತಾಲಿಬಾನ್ ಬಿಡುಗಡೆಗೊಳಿಸಿದೆ. ಈ ಪತ್ರಕರ್ತರ ಬಳಿ ನ್ಯಾಯಸಮ್ಮತ ದಾಖಲೆಗಳಿರಲಿಲ್ಲ . ಆದ್ದರಿಂದ ಬಂಧಿಸಲಾಗಿತ್ತು ಎಂದು ತಾಲಿಬಾನ್ ಸರಕಾರದ ವಕ್ತಾರ ಝಬೀಹುಲ್ಲಾ ಮುಜಾಹಿದ್ ಪ್ರತಿಕ್ರಿಯಿಸಿದ್ದಾರೆ.
ಅಫ್ಗಾನ್ನಲ್ಲಿ ಬಂಧನದಲ್ಲಿರುವ ಇನ್ನೂ ಹಲವು ಬ್ರಿಟನ್ ಪ್ರಜೆಗಳ ಕುಟುಂಬದವರಿಗೆ ನಾವು ನೆರವು ನೀಡುತ್ತಿದ್ದೇವೆ . ಬಂಧನದ ವಿಷಯವನ್ನು ತಾಲಿಬಾನ್ ಅಧಿಕಾರಿಗಳೊಂದಿಗೆ ಹಲವು ಬಾರಿ ಪ್ರಸ್ತಾವಿಸಲಾಗಿದ್ದು ಈ ವಾರ ಕಾಬೂಲ್ಗೆ ಭೇಟಿ ನೀಡಿದ್ದ ನಮ್ಮ ನಿಯೋಗವೂ ಈ ಬಗ್ಗೆ ಪ್ರಸ್ತಾವಿಸಿದೆ ಎಂದು ಇಲಾಖೆ ಹೇಳಿದೆ. ಅಫ್ಗಾನಿಸ್ತಾನಕ್ಕೆ ಬ್ರಿಟನ್ನ ಕಾರ್ಯಯೋಜನೆಯ ಮುಖ್ಯಸ್ಥ ಹ್ಯೂಗೊ ಶಾರ್ಟರ್ ನೇತೃತ್ವದ ನಿಯೋಗವು ಈ ವಾರದ ಆರಂಭದಲ್ಲಿ ಕಾಬೂಲ್ಗೆ ಭೇಟಿ ನೀಡಿದ್ದು ಅಫ್ಗಾನಿಸ್ತಾನದ ವಿದೇಶ ವ್ಯವಹಾರ ಸಚಿವ ಅಮೀರ್ಖಾನ್ ಮುತ್ತಖಿಯ ಜತೆ ಮಾತುಕತೆ ನಡೆಸಿತ್ತು. ಅಪ್ಗಾನಿಸ್ತಾನದಲ್ಲಿನ ಮಾನವಹಕ್ಕು ಬಿಕ್ಕಟ್ಟು, ಮಾನವ ಹಕ್ಕುಗಳ ಉಲ್ಲಂಘನೆ ಮತ್ತಿತರ ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ಶಾರ್ಟರ್ ಹೇಳಿಕೆ ನೀಡಿದ್ದರು.
ಬಿಬಿಸಿಯ ಮಾಜಿ ವರದಿಗಾರ ಆ್ಯಂಡ್ರೂ ನಾರ್ಥ್ ಸಹಿತ ಕನಿಷ್ಟ 6 ಬ್ರಿಟನ್ ನಾಗರಿಕರು ಅಫ್ಗಾನಿಸ್ತಾನದಲ್ಲಿ ಬಂಧನದಲ್ಲಿದ್ದಾರೆ ಎಂದು ಶುಕ್ರವಾರ ಮಾಧ್ಯಮಗಳು ವರದಿ ಮಾಡಿವೆ. ಈ ವರದಿಯ ಬಗ್ಗೆ ತಾಲಿಬಾನ್ ಅಧಿಕಾರಿಗಳು ಪ್ರತಿಕ್ರಿಯಿಸಿಲ್ಲ.





