ವಿದೇಶದಲ್ಲಿ ಸ್ಥಂಭನಗೊಳಿಸಿರುವ ನಿಧಿಯನ್ನು ವಿಭಜಿಸುವ ಅಮೆರಿಕದ ನಿರ್ಧಾರಕ್ಕೆ ಅಫ್ಘಾನ್ ಮಾಜಿ ಅಧ್ಯಕ್ಷರ ಖಂಡನೆ

ಹಮೀದ್ ಕರ್ಝಾಯ್(photo:twitter/@KarzaiH)
ಕಾಬೂಲ್, ಫೆ.13: ವಿದೇಶಿ ಬ್ಯಾಂಕ್ಗಳಲ್ಲಿ ಸ್ಥಂಭನಗೊಳಿಸಿರುವ 7 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ನಿಧಿಯು ಯಾವುದೇ ಸರಕಾರಕ್ಕೆ ಸೇರಿದ್ದಲ್ಲ, ಅದು ಅಫ್ಗಾನ್ ಜನರ ಆಸ್ತಿಯಾಗಿದೆ ಎಂದು ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಝಾಯ್ ಹೇಳಿದ್ದಾರೆ. ಸ್ಥಂಭನಗೊಳಿಸಿರುವ 9 ಬಿಲಿಯನ್ ಡಾಲರ್ಗೂ ಅಧಿಕ ಮೊತ್ತದ ಆಸ್ತಿಯಲ್ಲಿ 7 ಮಿಲಿಯನ್ ಮೊತ್ತವನ್ನು ಬಿಡುಗಡೆಗೊಳಿಸಿ ಅದನ್ನು ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು ಮತ್ತು 9/11ರ ಸಂತ್ರಸ್ತರಿಗೆ ಒದಗಿಸುವುದಕ್ಕೆ ಸಂಬಂಧಿಸಿದ ಕಾರ್ಯನಿರ್ವಾಹಕ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಸಹಿ ಹಾಕಿದ್ದರು. ಈ ಕುರಿತು ಕಾಬೂಲ್ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಕರ್ಝಾಯ್, ಎಲ್ಲಾ ಹಣವನ್ನೂ ಅಫ್ಘಾನಿಸ್ತಾನದ ಸೆಂಟ್ರಲ್ ಬ್ಯಾಂಕ್ಗೆ ಮರಳಿಸುವಂತೆ ಅಮೆರಿಕವನ್ನು ಆಗ್ರಹಿಸಿದರು. ಇದು ಅಫ್ಘಾನ್ನ ಜನತೆಯ ಆಗ್ರಹವಾಗಿದೆ.
ನಿಧಿಯನ್ನು ಮರಳಿಸಿದರೆ ಅದನ್ನು ದೈನಂದಿನ ಖರ್ಚು ವೆಚ್ಚಕ್ಕೆ ಬಳಸಬಾರದು ಮತ್ತು ಇದಕ್ಕೆ ಇನ್ನಷ್ಟು ಮೊತ್ತ ಸೇರಿಸಿ ಮೀಸಲು ನಿಧಿಯಾಗಿ ಕಾಯ್ದಿರಿಸಬೇಕು ಎಂದರು. ಒಸಾಮಾ ಬಿನ್ ಲಾದೆನ್ರನ್ನು ಅಫ್ಘಾನಿಸ್ತಾನಕ್ಕೆ ಕರೆತಂದಿದ್ದು ಅಫ್ಘಾನೀಯರಲ್ಲ, ಆತನನ್ನು ಪಾಕಿಸ್ತಾನದಿಂದ ಕರೆತಂದವರು ವಿದೇಶೀಯರು ಮತ್ತು ಆತ ಮತ್ತೆ ಪಾಕಿಸ್ತಾನಕ್ಕೆ ಮರಳಿದ್ದು ಅಲ್ಲಿ ಆತನ ಹತ್ಯೆಯಾಗಿದೆ. ಪಾಕಿಸ್ತಾನದ ಕೃತ್ಯಗಳಿಗೆ ಈಗ ಅಫ್ಘಾನೀಯರು ಬೆಲೆ ತೆರುವಂತಾಗಿದೆ ಎಂದು ಕರ್ಝಾಯ್ ಹೇಳಿರುವುದಾಗಿ ಟೋಲೋ ನ್ಯೂಸ್ ವರದಿ ಮಾಡಿದೆ.
ಸ್ಥಂಭನಗೊಳಿಸಿರುವ ಅಫ್ಘಾನ್ನ 7 ಬಿಲಿಯನ್ ಡಾಲರ್ ಮೌಲ್ಯದ ವಿದೇಶಿ ವಿನಿಮಯ ಸಂಗ್ರಹವನ್ನು ವಿಭಜಿಸುವ ಅಮೆರಿಕದ ನಿರ್ಧಾರವನ್ನು ಟೀಕಿಸಿರುವ ಅಫ್ಘಾನಿಸ್ತಾನದ ಸೆಂಟ್ರಲ್ ಬ್ಯಾಂಕ್, ಇದು ಅಫ್ಘಾನ್ ಜನತೆಗೆ ಎಸಗಿದ ಅನ್ಯಾಯವಾಗಿದೆ. ಇದು ಸ್ವೀಕಾರಾರ್ಹವಲ್ಲ ಎಂದು ಸೆಂಟ್ರಲ್ ಬ್ಯಾಂಕ್ನ ಹೇಳಿಕೆ ಖಂಡಿಸಿದೆ. ಕಳೆದ ವರ್ಷದ ಆಗಸ್ಟ್ನಲ್ಲಿ ಅಫ್ಘಾನಿಸ್ತಾನ ತಾಲಿಬಾನ್ಗಳ ನಿಯಂತ್ರಣಕ್ಕೆ ಬಂದಂದಿನಿಂದ ಆ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಬಿಕ್ಕಟ್ಟಿಗೆ ಸಿಲುಕಿದೆ. ವಿದೇಶಿ ನೆರವಿನ ಅಮಾನತು, ಅಫ್ಘಾನ್ ಸರಕಾರ ವಿದೇಶಿ ಬ್ಯಾಂಕ್ನಲ್ಲಿ ಇರಿಸಿರುವ ವಿದೇಶಿ ವಿನಿಮಯ ಸಂಗ್ರಹವನ್ನು ಸ್ಥಂಭನಗೊಳಿಸಿರುವುದು ಹಾಗೂ ತಾಲಿಬಾನ್ ಮೇಲಿನ ಅಂತರಾಷ್ಟ್ರೀಯ ನಿರ್ಬಂಧದಿಂದಾಗಿ ಅಫ್ಘಾನಿಸ್ತಾನ ತೀವ್ರ ಆರ್ಥಿಕ ಬಿಕ್ಕಟ್ಟಿನ ಸ್ಥಿತಿಗೆ ತಲುಪಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.







