ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳನ್ನು ಬಿಟ್ಟು ಹಿಂದೂ-ಮುಸ್ಲಿಂ ಆಧಾರದಲ್ಲಿ ಜನರು ಮತ ಹಾಕುವುದಿಲ್ಲ: ವರುಣ್ ಗಾಂಧಿ
"ಮತದಾರರನ್ನು ಜಾತಿಗಳ ಆಧಾರದ ಮೇಲೆ ನೋಡುವುದನ್ನು ವಿರೋಧಿಸುತ್ತೇನೆ"

ವರುಣ್ ಗಾಂಧಿ (PTI)
ಹೊಸದಿಲ್ಲಿ: ಬಿಜೆಪಿ ಸಂಸದ ಮತ್ತು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವರುಣ್ ಗಾಂಧಿ ಅವರು ಉತ್ತರ ಪ್ರದೇಶ ಚುನಾವಣೆಯಲ್ಲಿ ಬೆಲೆ ಏರಿಕೆ, ನಿರುದ್ಯೋಗ ಮತ್ತು ರೈತರ ಅಶಾಂತಿ ಪ್ರಮುಖ ಸಮಸ್ಯೆಗಳಾಗಿದ್ದು, ರಾಜ್ಯವು ಹಿಂದೂ-ಮುಸ್ಲಿಂ ವಿಷಯದ ಆಧಾರದ ಮೇಲೆ ಮತ ಚಲಾಯಿಸುವುದಿಲ್ಲ ಎಂದು ಹೇಳಿದ್ದಾರೆ.
'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ಜೊತೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವರುಣ್ ಗಾಂಧಿ, 80% vs 20% ಮತದಾನದ ಬಗ್ಗೆ ತನ್ನ ಪಕ್ಷ ನೀಡುತ್ತಿರುವ ಹೇಳಿಕೆಗಿಂತ ವ್ಯತಿರಿಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಯಾವುದೇ ಮತದಾರನನ್ನು ಧರ್ಮ ಅಥವಾ ಜಾತಿಯ ಆಧಾರದ ಮೇಲೆ ನೋಡುವುದು ಅನೈತಿಕ. ನಾನು ಮತದಾರನನ್ನು ದೊಡ್ಡ ಪಾಲುದಾರನೆಂದು ಪರಿಗಣಿಸುತ್ತೇನೆ, ನೀವು ಮತದಾರನನ್ನು ನಿಮ್ಮ ನಿರ್ಧಾರಗಳಲ್ಲಿ ಸೇರಿಸಿಕೊಳ್ಳದಿದ್ದರೆ, ಅವನೂ ತನ್ನ ನಿರ್ಧಾರಗಳಲ್ಲಿ ನಿಮ್ಮನ್ನು ಸೇರಿಸಿಕೊಳ್ಳುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಹಿಂದುಳಿದ-ಮುಂದುವರೆದ (ಜಾತಿ) ಅಥವಾ ಹಿಂದೂ-ಮುಸ್ಲಿಂ ಎಂದು ಎಷ್ಟೇ ಗದ್ದಲ ಮಾಡಿದರೂ ಮತಗಳು ಆ ವಿಭಜನೆಯ ಮೇಲೆ ಚಲಾವಣೆ ಆಗುವುದಿಲ್ಲ. ಯಾವುದೇ ಮತದಾರರನ್ನು ಹೀಗೆ ಮತಗಳ, ಜಾತಿಗಳ ಆಧಾರದ ಮೇಲೆ ನೋಡುವುದನ್ನು ನಾನು ವಿರೋಧಿಸುತ್ತೇನೆ ಎಂದಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆಯೇ? ರೈತರಿಗೆ ನ್ಯಾಯ ಸಿಕ್ಕಿತೇ? ಹಣದುಬ್ಬರದ ಪ್ರಭಾವದಿಂದ ಸಾರ್ವಜನಿಕರಿಗೆ ಪರಿಹಾರ ಸಿಕ್ಕಿದೆಯೇ? ಗುತ್ತಿಗೆ ನೌಕರರು ಎಷ್ಟು ದಿನ ನ್ಯಾಯಕ್ಕಾಗಿ ಕಾಯಬೇಕು? ಯುವಕರಿಗೆ ಉದ್ಯೋಗ ಸಿಕ್ಕಿದೆಯೇ? ಎಂಬ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಪ್ರದೇಶ ಮತದಾರರು ಈ ಚುನಾವಣೆ ಮೂಲಕ ಉತ್ತರಿಸಬೇಕು ಎಂದು ಅವರು ಹೇಳಿದ್ದಾರೆ.
2017ರಲ್ಲಿ, ಜನರು ರಾಜ್ಯಾದ್ಯಂತ ಮೂಲಸೌಕರ್ಯದಲ್ಲಿ ಮಾತ್ರವಲ್ಲದೆ ಇಡೀ ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಬಹುದೆಂಬ ಭರವಸೆಯೊಂದಿಗೆ ನಮಗೆ ಭಾರಿ ಜನಾದೇಶವನ್ನು ನೀಡಿದರು, ಆದರೆ ಜನರ ಈ ಭರವಸೆಗಳು ಈಡೇರಿವೆಯೇ? ಎಂದು ಪ್ರಶ್ನಿಸಿದ ಗಾಂಧಿ, “ನಮ್ಮ ಯುವ ರಾಷ್ಟ್ರವು ನಿರುದ್ಯೋಗದ ದೊಡ್ಡ ಹೊಡೆತವನ್ನು ಎದುರಿಸುತ್ತಿದೆ. ರೈಲ್ವೇ ನೇಮಕಾತಿ ಮಂಡಳಿಯ ಪರೀಕ್ಷೆಯ ಸಮಯದಲ್ಲಿ ಏನಾಯಿತು ಎಂದು ನೋಡಿದ್ದೀರಾ? RRB-NTPC ಯ 35,000 ಹುದ್ದೆಗಳಿಗೆ 1.25 ಕೋಟಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ರೈಲ್ವೇ ಶೇ.20ರ ಬದಲು ಶೇ.5ರಷ್ಟು ನೇಮಕಾತಿ ಕುರಿತು ಮಾತು ಆರಂಭಿಸಿದಾಗ ಸಹಜವಾಗಿಯೇ ವಿದ್ಯಾರ್ಥಿಗಳ ತಾಳ್ಮೆ ಕಟ್ಟೆಯೊಡೆದು ಪ್ರತಿಭಟನೆ ನಡೆಸಿದರು. ಅವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಯುವಕರಿಗೆ ಯಾವಾಗ ನ್ಯಾಯ ಸಿಗುತ್ತದೆ? ಎಂದು ವರುಣ್ ಗಾಂಧಿ ಪ್ರಶ್ನಿಸಿದ್ದಾರೆ.







