ಯುಎಇಗೆ ನೀಡುವ ಭೇಟಿಯಿಂದ ದ್ವಿಪಕ್ಷೀಯ ಬಾಂಧವ್ಯಕ್ಕೆ ಬಲ: ಟರ್ಕಿ ಅಧ್ಯಕ್ಷ ಎರ್ಡೋಗನ್

Source : PTI
ಇಸ್ತಾಂಬುಲ್, ಫೆ.14: ಯುಎಇಗೆ ನೀಡಲಿರುವ ಭೇಟಿಯು ಉಭಯ ದೇಶಗಳ ನಡುವಿನ ಮುಂದಿನ 50 ವರ್ಷಗಳವರೆಗಿನ ಸ್ನೇಹ ಮತ್ತು ಸಹೋದರತ್ವವನ್ನು ರೂಪಿಸುವ ಉದ್ದೇಶ ಹೊಂದಿದೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯೀಪ್ ಎರ್ಡೋಗನ್ ಹೇಳಿದ್ದಾರೆ. ಯುಎಇಗೆ ತೆರಳುವ ಮುನ್ನ ಸೋಮವಾರ ಇಸ್ತಾಂಬುಲ್ ನ ಅಟಾಟರ್ಕ್ ವಿಮಾನನಿಲ್ದಾಣದಲ್ಲಿ ಅವರು ಸುದ್ಧಿಗಾರರ ಜತೆ ಮಾತನಾಡಿದರು. ಸುಮಾರು 10 ವರ್ಷದಲ್ಲಿ ಟರ್ಕಿಯ ಅಧ್ಯಕ್ಷರೊಬ್ಬರು ಯುಎಇಗೆ ನೀಡುತ್ತಿರುವ ಪ್ರಪ್ರಥಮ ಭೇಟಿ ಇದಾಗಿದೆ.
ಈ ಭೇಟಿಯು ಉಭಯ ದೇಶಗಳ ನಡುವಿನ ರಾಜಕೀಯ, ಆರ್ಥಿಕ ಸಂಬಂಧವನ್ನು ಬಲಪಡಿಸಲಿದ್ದು ಗಲ್ಫ್ ವಲಯದ ಎಲ್ಲಾ ಸಹೋದರ ದೇಶಗಳ ಭದ್ರತೆ ಮತ್ತು ಸ್ಥಿರತೆಯನ್ನು ನಮ್ಮ ದೇಶಕ್ಕಿಂತ ಪ್ರತ್ಯೇಕವಾಗಿ ಪರಿಗಣಿಸುವುದಿಲ್ಲ. ಯುಎಇ ಟರ್ಕಿಯ ಪ್ರಮುಖ ವ್ಯಾಪಾರ ಸಹಭಾಗಿಯಾಗಿದ್ದು ಉಭಯ ದೇಶಗಳ ನಡುವಿನ ವ್ಯವಹಾರ ಪ್ರಮಾಣ 8 ಬಿಲಿಯನ್ ಡಾಲರ್ನಷ್ಟಿದೆ. ಈ ದೇಶ ಟರ್ಕಿಯ ಸಾಗರೋತ್ತರ ಗುತ್ತಿಗೆ ವಲಯದ 10ನೇ ಅತೀ ದೊಡ್ಡ ಮಾರುಕಟ್ಟೆಯಾಗಿದೆ ಎಂದವರು ಹೇಳಿದರು.
ಬಳಿಕ ಟರ್ಕಿಯ ಅಧ್ಯಕ್ಷರೊಬ್ಬರು ನೀಡುತ್ತಿರುವ ಈ ಭೇಟಿಯು ದ್ವಿಪಕ್ಷೀಯ ಸಂಬಂಧದ ಹೊಸ, ಧನಾತ್ಮಕ ಅಧ್ಯಾಯವನ್ನು ತೆರೆಯಲಿದೆ. ಸ್ಥಿರ, ಅಭಿವೃದ್ಧಿಹೊಂದಿದ ವಲಯಗಳನ್ನು ಗುರಿಯಾಗಿಟ್ಟುಕೊಂಡು ಬಲವಾದ ಸಂವಹನ ಮತ್ತು ಸಹಕಾರ ಸೇತುವೆಗಳನ್ನು ನಿರ್ಮಿಸುವ ಯುಎಇಯ ಪ್ರಯತ್ನಗಳಿಗೆ ಈ ಭೇಟಿ ಪೂರಕವಾಗಲಿದೆ ಎಂದು ಯುಎಇ ಅಧ್ಯಕ್ಷರ ಸಲಹೆಗಾರ ಅನ್ವರ್ ಗರ್ಗಶ್ ಟ್ವೀಟ್ ಮಾಡಿದ್ದಾರೆ.
ಹಲವು ವರ್ಷಗಳಿಂದ ಟರ್ಕಿ ಮತ್ತು ಯುಎಇ ನಡುವಿನ ಸಂಬಂಧ ಹದಗೆಟ್ಟಿತ್ತು. ಪ್ರಾದೇಶಿಕ ಸಂಘರ್ಷದ ಸಂದರ್ಭ ಉಭಯ ದೇಶಗಳೂ ಎದುರಾಳಿ ಪಕ್ಷಗಳನ್ನು ಬೆಂಬಲಿಸುತ್ತಿದ್ದವು ಮತ್ತು ಪೂರ್ವ ಮೆಡಿಟರೇನಿಯನ್ ಪ್ರದೇಶದಲ್ಲಿ ಅನಿಲ ಪರಿಶೋಧನೆ ಮತ್ತಿತರ ವಿಷಯಗಳಲ್ಲಿ ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದವು. ಆದರೆ ಕಳೆದ ನವೆಂಬರ್ನಲ್ಲಿ ಅಬುಧಾಬಿಯ ಯುವರಾಜ ಮುಹಮ್ಮದ್ ಬಿನ್ ಝಾಯೆದ್ ಟರ್ಕಿಗೆ ಭೇಟಿ ನೀಡುವುದರೊಂದಿಗೆ ಉಭಯ ದೇಶಗಳ ನಡುವಿನ ವೈಮನಸ್ಯವನ್ನು ತಿಳಿಗೊಳಿಸುವ ಪ್ರಕ್ರಿಯೆಗೆ ಚಾಲನೆ ದೊರಕಿತ್ತು. ಈ ಭೇಟಿಯ ಬಳಿಕ ಟರ್ಕಿಯಲ್ಲಿ 10 ಬಿಲಿಯನ್ ಡಾಲರ್ ಮೊತ್ತದ ಹೂಡಿಕೆ ಮಾಡುವುದಾಗಿ ಯುಎಇ ಘೋಷಿಸಿತ್ತು. ಅಲ್ಲದೆ ಭದ್ರತೆ, ಅರ್ಥವ್ಯವಸ್ಥೆ, ತಂತ್ರಜ್ಞಾನಕ್ಕೆ ಸಂಬಂಧಿಸಿದ 10 ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿವೆ ಎಂದು ಯುಎಇ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಡಬ್ಲ್ಯೂಎಎಮ್ ವರದಿ ಮಾಡಿದೆ.







