ವಿಧಾನಸಭೆ ಚುನಾವಣೆ: ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಕುಮಾರಸ್ವಾಮಿ ಹೇಳಿದ್ದು ಹೀಗೆ...

ಹಾಸನ : ''ಇದುವರೆಗೂ ನಾನು ಹಾಸನ ಜಿಲ್ಲೆಯ ರಾಜಕೀಯ ಬಗ್ಗೆ ಮೂಗು ತೂರಿಸಿಲ್ಲ. ಈ ಬಾರಿ ಹಾಸನ ವಿಧಾನಸಭಾ ಕ್ಷೇತ್ರ ಒಂದನ್ನು ಸೂಕ್ಷ್ಮವಾಗಿ ತೆಗೆದುಕೊಳ್ಳುತ್ತೇನೆ'' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, 'ನಾನು ಸಿಎಂ ಆಗಿದ್ದ ವೇಳೆ ಹಾಸನ ಜಿಲ್ಲೆಗೆ ದೊಡ್ಡಮಟ್ಟದಲ್ಲಿ ಕೆಲಸ ಮಾಡಿದ್ದೇನೆ. ಹಾಸನ ವಿಧಾನಸಭಾ ಕ್ಷೇತ್ರದ ಬಗ್ಗೆ ನಾನೇ ಸಲಹೆ ನೀಡುತ್ತೇನೆ. ನಮ್ಮ ಕುಟುಂಬದವರು ಸ್ಪರ್ಧಿಸುತ್ತಾರೆ ಎನ್ನುವುದು ಊಹಾಪೋಹ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ನಿಷ್ಠಾವಂತ ಮುಖಂಡರಿದ್ದಾರೆ. ಅವರೊಟ್ಟಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ '' ಎಂದು ಸ್ಪಷ್ಟಪಡಿಸಿದ್ದಾರೆ.
ಒಂದುವರೆ ತಿಂಗಳಿನಲ್ಲಿ ಮೊದಲ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಅನೌನ್ಸ್ ಮಾಡುತ್ತೇನೆ. ಅದರಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸುತ್ತೇನೆ. ಹಾಸನದಲ್ಲಿ ಯಾವ ರೀತಿ ವ್ಯವಸ್ಥೆ ಇದೆ ಎಲ್ಲರಿಗೂ ತಿಳಿದಿದೆ. ಎಚ್.ಎಸ್.ಪ್ರಕಾಶ್ ಇದ್ದ ಕಾಲದಲ್ಲಿ ಈ ರೀತಿ ವ್ಯವಸ್ಥೆ ಇರಲಿಲ್ಲಾ. ಅದನೆಲ್ಲದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕರ್ತರ ಜೊತೆ ಚರ್ಚಿಸಿ ಟಿಕೆಟ್ ನೀಡುತ್ತೇನೆ ಎಂದು ತಿಳಿಸಿದರು







