ಸುರತ್ಕಲ್-ಎನ್‌ಐಟಿಕೆ ಅಕ್ರಮ ಟೋಲ್ ಗೇಟ್ ವಿರೋಧಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ

ಸುರತ್ಕಲ್, ಫೆ.14: ಸಾಮಾಜಿಕ ಹೋರಾಟಗಾರ ಆಸಿಫ್ ಆಪದ್ಬಾಂಧವರ ನೇತೃತ್ವದಲ್ಲಿ ನಡೆಯುತ್ತಿರುವ ಎನ್‌ಐಟಿಕೆ ಅಕ್ರಮ ಟೋಲ್ ಗೇಟ್ ವಿರುದ್ಧದ ಅಹೋರಾತ್ರಿ ಧರಣಿಯು ಸೋಮವಾರವೂ ನಡೆದಿದೆ.
ಕಳೆದ ಎರಡು ದಿನಗಳಿಂದ ಆಸಿಫ್‌ರ ಆರೋಗ್ಯದ ಸ್ಥಿತಿ ಹದಗೆಟ್ಟಿದ್ದು, ಸೋಮವಾರ ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಸುರತ್ಕಲ್ ಪೊಲೀಸ್ ಠಾಣೆಯ ಅಧಿಕಾರಿ ಹಾಗು ಸಿಬ್ಬಂದಿ ವರ್ಗವು ಆಸಿಫ್‌ರನ್ನು ಆಸ್ಪತ್ರೆಗೆ ತೆರಳುವಂತೆ ಮನವಿ ಮಾಡಿದರು. ಆದರೆ ಅದನ್ನು ನಿರಾಕರಿಸಿದ ಆಸಿಫ್ ನನಗೆ ನ್ಯಾಯ ಸಿಗುವವರೆಗೂ ಈ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಆ ಬಳಿಕ ವೈದ್ಯರನ್ನು ಸ್ಥಳಕ್ಕೆ ಕರೆಸಿ ಆಸಿಫ್ ಅವರನ್ನು ಪರೀಕ್ಷಿಸಿ ಚಿಕಿತ್ಸೆ ನೀಡಲಾಯಿತು.
ಸಂಜೆಯ ವೇಳೆ ಆಸೀಫ್ ಅವರು ಟ್ಯೂಬ್‌ಲೈಟ್ ಒಡೆದು ಗಾಜಿನ ಚೂರುಗಳ ಮೇಲೆ ಮಲಗಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಲೇಖಕ ಮರವಂತೆ ಪ್ರಕಾಶ್ ಪಾಡಿಯಾರ್, ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್, ಕಾಪು ವಲಯಾಧ್ಯಕ್ಷ ನಿಝಾಮ್ ಪಡುಬಿದ್ರಿ, ಕಂಬಳ ಕಟ್ಟೆ ಬಂಟರ ಸಂಘ ಮತ್ತು ಲಯನ್ಸ್ ಕ್ಲಬ್ ಉಡುಪಿ ಜಿಲ್ಲಾ ಘಟಕದ ಪದಾಧಿಕಾರಿಗಳು, ಕಾಪು ತಾಪಂ ಮಾಜಿ ಉಪಾಧ್ಯಕ್ಷ ಯು.ಸಿ.ಶೇಖಬ್ಬ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ನೀಡಿದರು.
