ನಿಗದಿತ ವೇಳೆಯಲ್ಲಿ ಅನಿಲ ಟ್ಯಾಂಕರ್‌ಗಳ ಸಂಚಾರ: ದ.ಕ. ಜಿಲ್ಲಾಧಿಕಾರಿ ಸೂಚನೆ

ಮಂಗಳೂರು,ಫೆ.14: ನಿಗದಿತ (ಹಗಲು) ವೇಳೆಯಲ್ಲೇ ಅನಿಲ್ ಟ್ಯಾಂಕರುಗಳು ಸಂಚರಿಸುವ ಬಗ್ಗೆ ಅಧಿಕಾರಿಗಳು ವಿಶೇಷ ನಿಗಾ ವಹಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ದ.ಕ.ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯನ್ನು ಹಾದು ಹೋಗುವ ಹೆದ್ದಾರಿಗಳಲ್ಲಿ ಗ್ಯಾಸ್ ಟ್ಯಾಂಕರ್‌ಗಳ ಅಸುರಕ್ಷಿತ ಚಾಲನೆ ಪ್ರಯಾಣಿಕರಿಗೆ ತೊಂದರೆಯುಂಟು ಮಾಡುತ್ತದೆ. ಅಲ್ಲದೆ ಅದು ಸಾರ್ವಜನಿಕರ ಸುಗಮ ಸಂಚಾರಕ್ಕೂ ಅನಾನುಕೂಲವಾಗುತ್ತದೆ, ಒಂದು ವೇಳೆ ಅವುಗಳು ಅಪಘಾತಕ್ಕೀಡಾದಲ್ಲಿ ಹೆಚ್ಚಿನ ಅನಾಹುತವು ಸಂಭವಿಸುತ್ತದೆ. ಈ ಕಾರಣಗಳಿಂದಾಗಿ ಗ್ಯಾಸ್ ಟ್ಯಾಂಕರ್‌ಗಳ ಚಾಲನೆಗೆ ನಿಗದಿ ಪಡಿಸಿದ ಅವಧಿಯಲ್ಲಿ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಬೇಕು, ಅದನ್ನು ಉಲ್ಲಂಘಿಸಿದ್ದಲ್ಲಿ ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಟ್ಯಾಂಕರ್‌ಗಳಿಗೆ ಕಡ್ಡಾಯವಾಗಿ ಇಬ್ಬರು ಚಾಲಕರಿರಬೇಕು. ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬಾರದು, ಒಂದು ವೇಳೆ ಟ್ಯಾಂಕರ್‌ಗಳು ರಾತ್ರಿ ಸಂಚರಿಸಬೇಕಾದಲ್ಲೀ ಜಿಪಿಎಸ್ ಕಡ್ಡಾಯವಾಗಿ ಅಳವಡಿಸಬೇಕು ಎಂದು ಡಿಸಿ ತಿಳಿಸಿದರು.
ಸಭೆಯಲ್ಲಿ ಕಾರ್ಖಾನೆಗಳು ಹಾಗೂ ಬಾಯ್ಲರ್‌ಗಳ ಉಪನಿರ್ದೇಶಕ ರಾಜೇಶ್ ಮಿಶ್ರಿಕೋಟಿ, ಜಿಲ್ಲಾ ಬಿಕ್ಕಟ್ಟು ನಿರ್ವಹಣಾ ಕೋಶದ ಪರಿಣತ ವಿಜಯ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ.ಕಿಶೋರ್ ಕುಮಾರ್, ಅಗ್ನಿ ಶಾಮಕ ದಳದ ಮುಖ್ಯಸ್ಥ ನವಾಝ್ ಮತ್ತಿತರರು ಉಪಸ್ಥಿತರಿದ್ದರು.
ಪುಸ್ತಕ ಬಿಡುಗಡೆ: ಸಭೆಯಲ್ಲಿ ರಾಸಾಯನಿಕ ವಿಪತ್ತು ನಿರ್ವಹಣೆ ಯೋಜನೆ ಕುರಿತಂತೆ ಹೊರತಂದ ಆಫ್-ಸೈಟ್ ಕೆಮಿಕಲ್ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಪ್ಲಾನ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.