ಕೃಷಿ ರಾಸಾಯನಿಕ ಕಾರ್ಪೊರೇಟ್‌ಗಳ ಕರಾಳ ದಂಧೆ: ಕುಸಿಯುತ್ತಿರುವ ಜಾಗತಿಕ ಜನಜೀವನದ ಆರೋಗ್ಯ ಹಾಗೂ ಪರಿಸರ

ಈ ಕಂಪೆನಿಗಳು ವಿಷಕಾರಿ ರಾಸಾಯನಿಕಗಳು ಜೀವಜಾಲಕ್ಕಾಗಲೀ ಪರಿಸರಕ್ಕಾಗಲೀ ಹಾನಿಕರವಲ್ಲ ಎಂದು ಸ್ಥಾಪಿಸಿಕೊಳ್ಳಲು ತಮ್ಮದೇ ಸಂಶೋಧನಾ ಜಾಲವನ್ನೂ ರಚಿಸಿಕೊಳ್ಳುತ್ತವೆ. ಜೊತೆಗೆ ಹಲವು ರಾಷ್ಟ್ರಗಳಲ್ಲಿ ಸಂಶೋಧನೆಗಳ ಮೇಲೆ ಪ್ರಭಾವ ಬೀರಿ ತಮ್ಮ ಪರವಾಗಿ ಸಂಶೋಧನಾ ವರದಿಗಳು ಪ್ರಕಟಗೊಳ್ಳುವಂತೆ ಮಾಡಲು ಎಲ್ಲಾ ರೀತಿಗಳಲ್ಲೂ ಪ್ರಯತ್ನಿಸುತ್ತಾ ಬರುತ್ತವೆ. ಅದಕ್ಕಾಗಿ ಸಂಶೋಧನಾ ಸಂಸ್ಥೆಗಳಿಗೆ ಹಣಕಾಸು ಪೂರೈಸುವ ಜಾಗತಿಕ ವೇದಿಕೆಗಳನ್ನು ಒದಗಿಸಿಕೊಡುವ ಕಾರ್ಯಗಳನ್ನೂ ಮಾಡುತ್ತವೆ. ಆ ಮೂಲಕ ನೈಜ ವೈಜ್ಞಾನಿಕ ಸಂಶೋಧನಾ ವರದಿಗಳನ್ನು ಮಸುಕುಗೊಳಿಸುವ ಕಾರ್ಯಗಳನ್ನು ಮಾಡುತ್ತವೆ.
ನಮ್ಮ ರಾಜ್ಯದ ಪುತ್ತೂರು ಸುತ್ತಮುತ್ತ ಹಾಗೂ ಕೇರಳದ ಕಾಸರಗೋಡಿನ ಸುತ್ತಮುತ್ತ ಎಂಡೋಸಲ್ಫಾನ್ ಮೊದಲಾದ ಕೀಟನಾಶಕ ಬಳಕೆಯ ಧಾರುಣತೆಗಳು ಕೆಲವು ವರ್ಷಗಳ ಹಿಂದೆ ರಾಷ್ಟ್ರಾದ್ಯಂತ ಸುದ್ದಿಗಳಿಗೆ ಕಾರಣವಾಗಿತ್ತು. ಆ ಬಗ್ಗೆ ಹಲವಾರು ಲೇಖನಗಳು, ಚಿತ್ರಗಳು, ಜನರು ಈಗಲೂ ಅನುಭವಿಸುತ್ತಿರುವ ನೋವು ಹಾಗೂ ಭೀಕರ ಆರೋಗ್ಯ ಸಮಸ್ಯೆಗಳ ಕುರಿತು ಸಾಕಷ್ಟು ವರದಿಗಳು ಬರುತ್ತಿದ್ದವು. ಅಲ್ಲಿನ ಗೇರು ತೋಟಗಳಿಗೆ ಹೆಲಿಕಾಪ್ಟರ್‌ಗಳ ಮೂಲಕ ಸಿಂಪಡಿಸಿದ ಎಂಡೋಸಲ್ಫಾನ್ ಎಂಬ ಮಾರಕ ವಿಷ ಇಂತಹ ಧಾರುಣತೆಗಳಿಗೆ ಕಾರಣವಾಗಿರುವುದು ಈಗ ಸಾಬೀತಾದ ಸತ್ಯ.
ಆ ಭಾಗಗಳಲ್ಲಿ ಹುಟ್ಟುವ ಮಕ್ಕಳು ಶರೀರದ ಅವಯವಗಳ ಊನಗಳಿಂದ ಹುಟ್ಟುತ್ತಲಿರುವುದು ಈಗಲೂ ನಿಂತಿಲ್ಲ. ಮಾನವೀಯ ಸಂಬಂಧಗಳಿಗೂ ಭಾರೀ ಘಾಸಿ ಮಾಡಿದೆ. ಅದಕ್ಕೆ ಶಾಶ್ವತ ಪರಿಹಾರಗಳನ್ನು ಈಗಲೂ ಒದಗಿಸಲು ಸರಕಾರಗಳು ತಯಾರಾಗಿಲ್ಲ ಎನ್ನುವುದು ನಮ್ಮ ಮುಂದಿರುವ ಸತ್ಯಗಳು. ಕಾನೂನಾತ್ಮಕವಾಗಿ ನಿಷೇಧಿಸಲ್ಪಟ್ಟಿರುವ ವಸ್ತುಗಳು ಕೂಡ ನಮ್ಮ ದೇಶದಲ್ಲಿ ಬಳಕೆಗೆ ಸಿಗುತ್ತಿರುವ ವಿಚಾರ ಕೂಡ ಹೊಸದೇನಲ್ಲ. ಇವುಗಳಲ್ಲಿ ಹಲವು ರಾಸಾಯನಿಕಗಳು ಹಾಗೂ ಬಿಟಿ ಬಿತ್ತನೆ ಬೀಜಗಳು ಕೂಡ ಸೇರಿವೆ. ಈ ಬಿಟಿ ಬಿತ್ತನೆ ಬೀಜಗಳು ಮಾರಕವಾಗಿರುವ ಗ್ಲೈಫೋಸೇಟ್‌ಗಳಂತಹವುಗಳ ಮೇಲೇ ಪೂರ್ಣವಾಗಿ ಅವಲಂಬಿತವಾಗಿರುವಂತೆ ರೂಪೀಕರಿಸಲಾಗಿದೆ. ನಿಷೇಧಿತ ಎಚ್‌ಟಿ ಬಿಟಿ ಹತ್ತಿ ಬೀಜಗಳ ಅಕ್ರಮ ಮಾರಾಟ ಭಾರತದಲ್ಲಿ ಎರಡು ಪಟ್ಟು ಹೆಚ್ಚಾಗುತ್ತಿವೆ ಎಂಬ ವರದಿಗಳು 2021ರ ಜೂನ್‌ನಲ್ಲಿ ಬಂದಿದ್ದವು ಎನ್ನುವುದನ್ನು ನಾವಿಲ್ಲಿ ಗಮನಿಸಬೇಕು.
ಕಳೆದ 25 ವರ್ಷಗಳಲ್ಲಿ ಕೀಟನಾಶಕಗಳ ಬಳಕೆ ಶೇ. 983 ಆಗಿದ್ದರೆ ಕೃಷಿ ಪ್ರದೇಶಗಳ ವಿಸ್ತರಣೆ ಕೇವಲ ಶೇ. 50 ಮಾತ್ರ ಆಗಿದೆ ಎಂದು 2015ರಲ್ಲಿ ಬಿಡುಗಡೆಯಾದ ಅಂತರ್‌ರಾಷ್ಟ್ರೀಯ ವೈದ್ಯ ಸಮೂಹದ ವೈಜ್ಞಾನಿಕ ವರದಿಯೊಂದು ಹೇಳಿತ್ತು. ಅಮೆರಿಕ, ಬ್ರಿಟನ್ ಮೊದಲಾದ ರಾಷ್ಟ್ರಗಳಲ್ಲಿ ತಯಾರಾಗುವ ಓಟ್ಸ್ ಇನ್ನಿತರ ಬೆಳಗಿನ ಉಪಾಹಾರಗಳಲ್ಲಿ ಕಳೆನಾಶಕಗಳ ಉಳಿಕೆಯ ಪ್ರಮಾಣ ಹೆಚ್ಚಿನ ಮಟ್ಟದಲ್ಲಿವೆ ಎನ್ನುವ ಹಲವಾರು ವೈಜ್ಞಾನಿಕ ವರದಿಗಳಿವೆ. 2018ರಲ್ಲಿ ಅಮೆರಿಕದ ಕೆಲ್ಲೋಗ್ಸ್, ನೆಸ್ಲೆ ಮಲ್ಟಿ ಗ್ರೈನ್ ಚೀರಿಯೋಸ್ ಮೊದಲಾದ ಓಟ್ಸ್ ಆಧಾರಿತ ಆಹಾರಗಳಲ್ಲಿ ಗ್ಲೈಫೋಸೇಟ್ ಆಧಾರಿತ ಕಳೆನಾಶಕಗಳ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿವೆ ಎಂಬ ವರದಿಗಳು ಪ್ರಯೋಗಾಲಯಗಳಿಂದ ಹೊರಬಂದಿದ್ದವು. ಕೆಲ್ಲೋಗ್ಸ್‌ನಂತಹ ಓಟ್ಸ್ ಆಹಾರಗಳನ್ನು ಭಾರತದ ನಗರ ಕೇಂದ್ರಿತ ಮಧ್ಯಮವರ್ಗದಲ್ಲಿನ ಒಂದು ದೊಡ್ಡ ಸಂಖ್ಯೆಯ ದಿನನಿತ್ಯದ ಆಹಾರದ ಭಾಗವನ್ನಾಗಿ ಮಾಡಲಾಗಿರುವುದನ್ನು ನಾವಿಲ್ಲಿ ಗಮನಿಸಬೇಕು. ಜಗತ್ತಿನ ಹಲವು ರಾಷ್ಟ್ರಗಳು ಎಂಡೋಸಲ್ಫಾನ್ ಬಳಕೆಯನ್ನು ನಿಷೇಧಿಸಿದ ಬಹಳ ಕಾಲದ ನಂತರ ಭಾರತದಲ್ಲಿ ಎಂಡೋಸಲ್ಫಾನ್ ಕೀಟನಾಶಕದ ಉತ್ಪಾದನೆ ಹಾಗೂ ಬಳಕೆಯನ್ನು ನಿಷೇಧಿಸಲಾಗಿತ್ತು. ಈ ಕೀಟನಾಶಕವನ್ನು ಭಾರತದಲ್ಲಿ ಸರಕಾರಿ ಒಡೆತನದ ಹಿಂದೂಸ್ತಾನ್ ಇನ್ ಸೆಕ್ಟಿಸೈಡ್ಸ್ ಲಿಮಿಟೆಡ್ ನಂತರ ಖಾಸಗಿ ಒಡೆತನದ ಎಕ್ಸೆಲ್ ಕ್ರಾಪ್ ಕೇರ್ ಮತ್ತು ಕೋರಮಂಡಲ್ ಫರ್ಟಿಲೈಸರ್ಸ್ ಕಂಪೆನಿಗಳು ಉತ್ಪಾದಿಸುತ್ತಿದ್ದವು. ಎಂಡೋಸಲ್ಫಾನ್ ಮತ್ತು ಅದಕ್ಕಿಂತಲೂ ಅಪಾಯಕಾರಿಯಾಗಿರುವ ರಾಸಾಯನಿಕವು ಬೇರೆ ಹೆಸರುಗಳಲ್ಲಿ ಮಾರುಕಟ್ಟೆಯಲ್ಲಿ ಹಲವಾರು ವಿಧಾನಗಳಲ್ಲಿ ಬಿಡಲಾಗುತ್ತಿದೆ.ಅದೇ ಸಮಯದಲ್ಲಿ ಭಾರತದಲ್ಲಿ ಬಳಕೆಯಾಗುತ್ತಿರುವ ಕೀಟನಾಶಕ, ಕಳೆನಾಶಕ, ಶಿಲೀಂಧ್ರನಾಶಕಗಳ ಹೆಸರಿನ ಸಕಲಜೀವಜಾಲಕ್ಕೆ ಮತ್ತು ಪರಿಸರಕ್ಕೆ ಅಪಾಯಕಾರಿಯಾಗಿರುವ ವಿಷಕಾರಿ ರಾಸಾಯನಿಕಗಳ ಪ್ರಮಾಣ ಜಾಗತಿಕವಾಗಿಯೇ ದೊಡ್ಡ ಮಟ್ಟದ್ದಾಗಿದೆ ಎಂದು ವರದಿಗಳು ಹೇಳುತ್ತವೆ.
ಈ ರಾಸಾಯನಿಕಗಳನ್ನು ಅವೈಜ್ಞಾನಿಕ ಮತ್ತು ಅರಾಜಕವಾಗಿ ಸಿಂಪಡಿಸಿದ ಆಹಾರ ವಸ್ತುಗಳ ಬಳಕೆ ಮತ್ತು ಗ್ಲೈಫೋಸೇಟ್ ರಾಸಾಯನಿಕ ಆಧಾರಿತ ಕಳೆನಾಶಕಗಳ ಬಳಕೆಯಿಂದಾಗಿ ಕಣ್ಣಿನ ಸಮಸ್ಯೆ, ನರ ದೌರ್ಬಲ್ಯ, ಮಾಂಸಖಂಡಗಳ ದೌರ್ಬಲ್ಯ, ಅಂಗಹೀನತೆಗಳು, ಕ್ಯಾನ್ಸರ್‌ನಂತಹ ಕಾಯಿಲೆಗಳು, ಹುಟ್ಟುವ ಮಕ್ಕಳಲ್ಲೇ ಸಕ್ಕರೆ ಕಾಯಿಲೆಗಳು, ಉಸಿರಾಟದ ತೊಂದರೆಗಳು, ಶರೀರ ದಪ್ಪವಾಗುವುದು, ಶರೀರ ಊತಗಳು, ಗರ್ಭಪಾತಗಳು, ಚರ್ಮ ಕಾಯಿಲೆಗಳು, ವಾಕರಿಕೆ, ಮಕ್ಕಳಾಗುವಿಕೆಯಲ್ಲಿನ ತೊಂದರೆಗಳು, ಹೃದಯದ ತೊಂದರೆಗಳು, ಯಕೃತ್ತಿನ ತೊಂದರೆಗಳು, ಮೂತ್ರಕೋಶದ ತೊಂದರೆಗಳು, ವೃಷಣದ ಕಾಯಿಲೆಗಳು, ಲೈಂಗಿಕ ದೌರ್ಬಲ್ಯತೆಗಳು, ಮಕ್ಕಳ ಬೆಳವಣಿಗೆಯಲ್ಲಿನ ತೊಂದರೆಗಳು, ವಂಶವಾಹಿಗಳ ಮೇಲಿನ ಕೆಟ್ಟಪರಿಣಾಮಗಳು, ಪಾರ್ಕಿನ್‌ಸನ್ ಕಾಯಿಲೆ, ಮರೆವು ರೋಗ, ಆಟಿಸಂ, ವೀರ್ಯಾಣುಗಳ ಕೊರತೆ ಹೀಗೆ ಶಾರೀರಿಕವಾಗಿ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ರೌಂಡ್ ಅಪ್‌ನಂತಹ ಕಳೆನಾಶಕಗಳ ಬಳಕೆಯಿಂದಾಗಿ ಜೇನುಹುಳಗಳ ಸಂತತಿಗಳು ನಾಶವಾಗುತ್ತಿವೆ ಎಂಬ ವರದಿಗಳಿವೆ. ಇಂತಹ ಹಲವಾರು ವಿನಾಶಕಾರಿ ಕಾರಣಗಳು ಹಾಗೂ ಕಾನೂನು ಉಲ್ಲಂಘನೆಗಳ ಹಿನ್ನೆಲೆಯಲ್ಲಿ ಮಾನ್ಸೆಂಟೋ ಕಂಪೆನಿಯ ಮೇಲೆ ಅಮೆರಿಕದಲ್ಲಿ ಹಲವಾರು ಪ್ರಕರಣಗಳು ದಾಖಲಾಗಿ ವಿಚಾರಣೆಗಳು ನಡೆದು ಕೆಲವು ಪ್ರಕರಣಗಳು ಸಾಬೀತಾಗಿವೆ. ಅಂತಹ ಸಾವಿರಾರು ಪ್ರಕರಣಗಳ ವಿಚಾರಣೆ ಇನ್ನೂ ನಡೆಯಬೇಕಾಗಿದೆ.
ಮನುಷ್ಯರ ಕಾಯಿಲೆಗಳಿಗೆ ಅಲೋಪತಿ ಔಷಧಿಗಳನ್ನು ಉತ್ಪಾದಿಸುವ ಆಸ್ಟ್ರಜೆನೆಕಾದಂತಹ ಕಾರ್ಪೊರೇಟ್‌ಗಳು ಜೀವ ಹಾಗೂ ಪರಿಸರ ವಿನಾಶಕರ ವಿಷಕಾರಿ ಕೃಷಿ ರಾಸಾಯನಿಕಗಳನ್ನೂ ಕೂಡ ಉತ್ಪಾದಿಸಿ ಮಾರಾಟ ಮಾಡುತ್ತಿವೆ ಎನ್ನುವುದನ್ನು ಕೂಡ ಗಮನಿಸಬೇಕು. ಅಂದರೆ ಒಂದೆಡೆ ಜೀವರಕ್ಷಕ ಔಷಧಿಗಳನ್ನು ಉತ್ಪಾದಿಸುವ ಭಾರೀ ಕಾರ್ಪೊರೇಟ್‌ಗಳೇ ಜೀವನಾಶಕ ಹಾಗೂ ಪರಿಸರನಾಶಕ ರಾಸಾಯನಿಕಗಳನ್ನೂ ಕೂಡ ಉತ್ಪಾದಿಸಿ ಪ್ರಾಯೋಜನೆ ಹಾಗೂ ಮಾರಾಟವನ್ನು ಮಾಡುತ್ತಿವೆ. ಇಲ್ಲಿ ಇರುವುದು ಜನರು ಹಾಗೂ ಪರಿಸರದ ಬಗೆಗಿನ ಕಾಳಜಿಯಲ್ಲ. ಬದಲಿಗೆ ಲಾಭಗಳ ಕೊಳ್ಳೆಗಳನ್ನು ನಡೆಸುವ ಕ್ರೂರ ಬಂಡವಾಳಶಾಹಿ ಹಸಿವು ಮಾತ್ರ.
ಜಗತ್ತಿನ ಹಲವಾರು ರಾಷ್ಟ್ರಗಳು ಈಗಾಗಲೇ ನಿಷೇಧಿಸಿರುವ ಡಯಾಫೆಂಥಿಯುರಾನ್‌ನಂತಹ ಅಪಾಯಕಾರಿ ರಾಸಾಯನಿಕಗಳು ಭಾರತದಲ್ಲಿ ವ್ಯಾಪಕವಾಗಿ ಬಳಕೆಗೆ ಬಿಡಲಾಗಿದೆ. ನಮ್ಮ ದೇಶದಲ್ಲಿ ಕಾನೂನಾತ್ಮಕವಾಗಿ ಇಂತಹ ಮಾರಕ ರಾಸಾಯನಿಕಗಳ ಆಮದು ಹಾಗೂ ಬಳಕೆಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೇಕಾದಷ್ಟು ಅವಕಾಶಗಳಿರುವುದರಿಂದ ವಿಷಕಾರಿ ರಾಸಾಯನಿಕಗಳ ಉತ್ಪಾದಕರುಗಳಾದ ಬಾಯರ್, ಸಿಂಜೆಂಟಾದಂತಹ ಭಾರೀ ಜಾಗತಿಕ ಕಾರ್ಪೊರೇಟ್‌ಗಳು ಇವುಗಳನ್ನು ನೂರಾರು ಟನ್ ಗಟ್ಟಲೆ ನಮ್ಮ ದೇಶಕ್ಕೆ ತಂದು ಸುರಿಯುತ್ತಿವೆ. ಕೃಷಿ ರಾಸಾಯನಿಕಗಳೆಂಬ ಹೆಸರುಗಳನ್ನು ಇವುಗಳಿಗೆ ಪ್ರಚಲಿತಗೊಳಿಸಲಾಗಿದೆ. ಇವುಗಳಲ್ಲಿ ನಮ್ಮ ದೇಶದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಪೋಲೊ, ರೌಂಡ್ ಅಪ್‌ನಂತಹ ವಿಷಕಾರಿ ರಾಸಾಯನಿಕಗಳು ಕೂಡ ಸೇರಿವೆ. ರೌಂಡ್ ಅಪ್‌ಅನ್ನು ಕಳೆನಾಶಕವಾಗಿ ಬಹುತೇಕ ಕಡೆಗಳಲ್ಲಿ ಬಳಸಲಾಗುತ್ತಿದೆ. ಇವುಗಳು ಮಾಡಿರುವ ಹಾಗೆಯೇ ಮಾಡುತ್ತಿರುವ ಜೀವಜಾಲ ಹಾಗೂ ಪರಿಸರದ ಮೇಲಿನ ಹಾನಿಯ ಪರಿಣಾಮಗಳ ಬಗ್ಗೆ ಸರಿಯಾದ ಗಮನವನ್ನು ಆಡಳಿತಾತ್ಮಕವಾಗಿ ನೀಡಲಾಗುತ್ತಿಲ್ಲ. ಇವುಗಳ ಬಗ್ಗೆ ಗಮನಸೆಳೆದು ಗ್ಲೈಫೋಸೇಟ್‌ಗಳಂತಹ ಮಾರಕ ವಿಶಕಾರಿ ರಾಸಾಯನಿಕಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂಬ ಹಕ್ಕೊತ್ತಾಯಗಳನ್ನು ಹಲವಾರು ಸಂಘ ಸಂಸ್ಥೆಗಳು ಮಾಡುತ್ತಿದ್ದರೂ ಅವುಗಳನ್ನು ಸರಕಾರಗಳು ಗಣನೆಗೆ ತೆಗೆದುಕೊಳ್ಳದೆ ಹೋಗುತ್ತಿವೆ. ಜಾಗತಿಕವಾಗಿಯೂ ಗ್ಲೈಫೋಸೇಟ್ ಬಗ್ಗೆ ವಿರೋಧಗಳು ವ್ಯಕ್ತವಾಗುತ್ತಲೇ ಬರುತ್ತಿದ್ದರೂ ಯುರೋಪು ಹಾಗೂ ಅಮೆರಿಕ ಈಗಲೂ ಗ್ಲೈಫೋಸೇಟ್ ಉತ್ಪಾದನೆ, ಬಳಕೆ ಹಾಗೂ ರಫ್ತಿಗೆ ಮುಕ್ತ ಅವಕಾಶ ಒದಗಿಸಿದೆ.
ಇಂತಹ ಪರಿಸರ ಹಾಗೂ ಜೀವಜಾಲದ ವಿನಾಶಗಳಿಗೆ ಕಾರಣವಾಗುವ ವಿಷಕಾರಿ ರಾಸಾಯನಿಕಗಳ ಅವೈಜ್ಞಾನಿಕ ಬಳಕೆಯನ್ನು ಪ್ರಾಯೋಜಿಸುತ್ತಾ ತಮ್ಮ ಲಾಭಗಳ ಕೊಳ್ಳೆಯ ಪ್ರಮಾಣವನ್ನು ಏರುಗತಿಯಲ್ಲಿಡಲು ಇವುಗಳನ್ನು ಉತ್ಪಾದಿಸುವ ಭಾರೀ ಕಾರ್ಪೊರೇಟ್‌ಗಳು ನಿರಂತರವಾಗಿ ಶ್ರಮಿಸುತ್ತಾ ಬರುತ್ತಿವೆ. ನಿರ್ದಿಷ್ಟವಾಗಿ ಎರಡನೇ ಮಹಾಯುದ್ಧದ ನಂತರ ಮುಂದುವರಿದು ಹಸಿರು ಕ್ರಾಂತಿಯ ಸಂದರ್ಭದಲ್ಲಿ ಹಾಗೂ ಜಾಗತೀಕರಣದ ನಂತರ ಇದನ್ನು ಜಾಗತಿಕವಾಗಿ ವ್ಯಾಪಿಸಲಾಗಿದೆ. ಇಂದು ಇಂತಹ ಭಾರೀ ಜಾಗತಿಕ ಕಾರ್ಪೊರೇಟ್‌ಗಳು ಜಾಗತಿಕ ಕೃಷಿ ಚಟುವಟಿಕೆಗಳನ್ನು ನೇರವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಗಳನ್ನು ಆರಂಭಿಸಿವೆ. ಭಾರತದಲ್ಲಿ ಕಳೆದ ವರ್ಷ ಜಾರಿಗೊಳಿಸಿ ನಂತರ ರೈತರ ಭಾರೀ ಪ್ರತಿಭಟನೆಗಳ ಕಾರಣದಿಂದಾಗಿ ವಾಪಸ್ ಪಡೆದುಕೊಂಡ ಮೂರು ಕೃಷಿ ಮಸೂದೆಗಳ ಹಿಂದೆ ಇಂತಹ ಜಾಗತಿಕ ಭಾರೀ ಕಾರ್ಪೊರೇಟ್‌ಗಳ ಹಿತಾಸಕ್ತಿಯಿದೆ. ಅದರ ಭಾಗವಾಗಿಯೇ ಕಾರ್ಪೊರೇಟ್ ಫಾರ್ಮಿಂಗ್ ಅನ್ನು ಭಾರೀ ಮಟ್ಟದಲ್ಲಿ ಪ್ರಾಯೋಜಿಸಲಾಗುತ್ತಿದೆ. ವೈಜ್ಞಾನಿಕವಾಗಿ ಗ್ಲೈಫೋಸೇಟ್‌ಗಳಂತಹ ರಾಸಾಯನಿಕ ವಿಷಗಳು ಜೀವಜಾಲ, ಪರಿಸರ ಹಾಗೂ ಮಣ್ಣಿನ ಆರೋಗ್ಯಕ್ಕೆ ಮಾರಕವಾಗಿವೆ ಎಂಬುದು ಸಾಬೀತಾಗಿದ್ದರೂ ಇಂತಹ ಭಾರೀ ಜಾಗತಿಕ ಕಾರ್ಪೊರೇಟ್‌ಗಳು ಜಗತ್ತಿನ ಹಲವು ರಾಷ್ಟ್ರಗಳ ಸರಕಾರಗಳ ಮೇಲೆ ಪ್ರಭಾವ ಹಾಗೂ ಒತ್ತಡ ಹೇರಿ ಅದರ ರಫ್ತು ಹಾಗೂ ಮಾರಾಟಗಳು ನಿರಾತಂಕವಾಗಿ ನಡೆಯಲು ತಮ್ಮದೇ ಆದ ಸಂಘಟನೆಗಳನ್ನು, ಪ್ರಚಾರ ಅಂಗಗಳನ್ನು ರಚಿಸಿ ಕಾರ್ಯಾಚರಿಸುತ್ತಿವೆ. ಬಾರ್ಕೆಲೆ ಕೆಮಿಕಲ್ಸ್ ಮ್ಯಾನ್ಯುಫ್ಯಾಕ್ಚರಿಂಗ್ ಲಿಮಿಟೆಡ್, ಬಾಯರ್ ಅಗ್ರಿಕಲ್ಚರ್ ಬಿವಿಬಿಎ, ಸಿಂಜೆಂಟಾ ಕ್ರಾಪ್ ಪ್ರೊಟೆಕ್ಷನ್ ಎಜಿ ಮೊದಲಾದ ಹತ್ತಾರು ಜಾಗತಿಕ ಭಾರೀ ಕಾರ್ಪೊರೇಟುಗಳು ಸೇರಿಕೊಂಡು ಯೂರೋಪಿಯನ್ ಗ್ಲೈಫೋಸೇಟ್ ರಿನ್ಯೂವಲ್ ಗ್ರೂಪ್(ಜಿಆರ್‌ಜಿ) ಎಂದು ಯೂರೋಪಿನಲ್ಲಿ ರಚಿಸಿಕೊಂಡಿವೆ. ಈ ಭಾರೀ ಕಾರ್ಪೊರೇಟ್‌ಗಳ ಕೂಟವು ಯೂರೋಪಿನ ಸರಕಾರಗಳ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತಾ ತಮಗೆ ಪೂರಕವಾಗಿರುವ ಸರಕಾರಿ ತೀರ್ಮಾನಗಳು ಜಾರಿಯಲ್ಲಿರುವಂತೆ ನೋಡಿಕೊಳ್ಳುತ್ತಾ ಬರುತ್ತಿದೆ. ಜೊತೆಗೆ ಗ್ಲೈಫೋಸೇಟ್ ಆಧಾರಿತ ಉತ್ಪಾದನೆ ಹಾಗೂ ಮಾರಾಟದ ಅವಕಾಶ ಕಾಯ್ದುಕೊಳ್ಳಲು ಅದಕ್ಕೆ ಪೂರಕವಾಗಲು ಬಿಟಿ ಬಿತ್ತನೆ ಬೀಜಗಳನ್ನು ವ್ಯಾಪಕಗೊಳಿಸುತ್ತಾ ಬರುತ್ತಿವೆ. ಈ ರೀತಿಯ ಜೈವಿಕ ತಂತ್ರಜ್ಞಾನ ಬಳಸಿ ರೂಪಿಸಿರುವ ಬಿತ್ತನೆ ಬೀಜಗಳನ್ನು ಉತ್ಪಾದಿಸಿ ಮಾರುವ ಚಟುವಟಿಕೆಗಳನ್ನು ಕೂಡ ಕೃಷಿರಾಸಾಯನಿಕ ಕಂಪೆನಿಗಳೇ ಮಾಡುತ್ತಿವೆ. ಬಾಯರ್ ಎನ್ನುವ ಕೃಷಿ ರಾಸಾಯನಿಕ ಉತ್ಪಾದನೆಯ ಜಾಗತಿಕ ಕಾರ್ಪೊರೇಟ್ ಕಂಪೆನಿ ಮಾನ್ಸೆಂಟೋ ಎಂಬ ಕೃಷಿ ಬಿತ್ತನೆ ಬೀಜಗಳನ್ನು ಹಾಗೂ ಕೃಷಿ ರಾಸಾಯನಿಕಗಳನ್ನು ಉತ್ಪಾದಿಸುವ ದೈತ್ಯ ಕಂಪೆನಿಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಕೃಷಿ ಕ್ಷೇತ್ರದಲ್ಲಿ ಜಾಗತಿಕ ಏಕಸ್ವಾಮ್ಯ ಸ್ಥಾಪಿಸಲು ಹೊರಟಿದೆ. ನಮ್ಮ ದೇಶದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿರುವ ಗ್ಲೈಫೋಸೇಟ್ ವಿಷ ಆಧಾರಿತ ರೌಂಡ್ ಅಪ್ ಎಂಬ ಕಳೆನಾಶಕ ಈ ಹಿಂದಿನ ಮಾನ್ಸೆಂಟೋ ಕಂಪೆನಿಯ ಒಂದು ಉತ್ಪನ್ನವಾಗಿದೆ.
ಈ ಕಂಪೆನಿಗಳು ವಿಷಕಾರಿ ರಾಸಾಯನಿಕಗಳು ಜೀವಜಾಲಕ್ಕಾಗಲೀ ಪರಿಸರಕ್ಕಾಗಲೀ ಹಾನಿಕರವಲ್ಲ ಎಂದು ಸ್ಥಾಪಿಸಿಕೊಳ್ಳಲು ತಮ್ಮದೇ ಸಂಶೋಧನಾ ಜಾಲವನ್ನೂ ರಚಿಸಿಕೊಳ್ಳುತ್ತವೆ. ಜೊತೆಗೆ ಹಲವು ರಾಷ್ಟ್ರಗಳಲ್ಲಿ ಸಂಶೋಧನೆಗಳ ಮೇಲೆ ಪ್ರಭಾವ ಬೀರಿ ತಮ್ಮ ಪರವಾಗಿ ಸಂಶೋಧನಾ ವರದಿಗಳು ಪ್ರಕಟಗೊಳ್ಳುವಂತೆ ಮಾಡಲು ಎಲ್ಲಾ ರೀತಿಗಳಲ್ಲೂ ಪ್ರಯತ್ನಿಸುತ್ತಾ ಬರುತ್ತವೆ. ಅದಕ್ಕಾಗಿ ಸಂಶೋಧನಾ ಸಂಸ್ಥೆಗಳಿಗೆ ಹಣಕಾಸು ಪೂರೈಸುವ ಜಾಗತಿಕ ವೇದಿಕೆಗಳನ್ನು ಒದಗಿಸಿಕೊಡುವ ಕಾರ್ಯಗಳನ್ನೂ ಮಾಡುತ್ತವೆ. ಆ ಮೂಲಕ ನೈಜ ವೈಜ್ಞಾನಿಕ ಸಂಶೋಧನಾ ವರದಿಗಳನ್ನು ಮಸುಕುಗೊಳಿಸುವ ಕಾರ್ಯಗಳನ್ನು ಮಾಡುತ್ತವೆ.
ಕರ್ನಾಟಕ ರಾಜ್ಯದ ಬಯಲು ಪ್ರದೇಶಗಳಲ್ಲಿ ನೀರಾವರಿ ಬೆಳೆಗಳನ್ನು ಬೆಳೆಯುವ ಪ್ರದೇಶಗಳಲ್ಲಿ ಬಳಸುತ್ತಿರುವ ಕೃಷಿ ರಾಸಾಯನಿಕಗಳು ಬಹಳ ಅವೈಜ್ಞಾನಿಕವಾಗಿದೆ ಎಂಬ ವರದಿಗಳು ಬಹಳ ಹಿಂದೆಯೇ ಬಂದಿವೆ. ಕೃಷಿ ಕಂಪೆನಿಗಳೆಂದು ಕರೆಯಲ್ಪಡುವ ಕೃಷಿ ರಾಸಾಯನಿಕಗಳನ್ನು ಉತ್ಪಾದಿಸುವ ಕಾರ್ಪೊರೇಟ್‌ಗಳು ನೇರವಾಗಿ ರೈತರೊಂದಿಗೆ ಸಂಪರ್ಕಿಸಿ ತಮ್ಮ ವಿಷಕಾರಿ ಉತ್ಪನ್ನಗಳನ್ನು ಪ್ರಾಯೋಜಿಸುತ್ತಾ ಬರುತ್ತಿವೆ. ಇಂತಹ ಕೃಷಿ ರಾಸಾಯನಿಕಗಳ ಬಳಕೆಯ ಮೇಲೆ ನಿಗಾ ಇಡುವ ಆಡಳಿತಾತ್ಮಕ ವ್ಯವಸ್ಥೆಯೇ ನಮ್ಮ ದೇಶದಲ್ಲಿ ಇಲ್ಲ. ಹಾಗಾಗಿ ಹೆಚ್ಚು ರಾಸಾಯನಿಕ ಬಳಕೆ ಹೆಚ್ಚು ಹೆಚ್ಚು ಲಾಭ ಎಂಬ ಅವೈಜ್ಞಾನಿಕತೆಯೇ ಚಾಲ್ತಿಯಲ್ಲಿ ಇದೆ. ಅದರ ಪರಿಣಾಮವಾಗಿ ಅಲ್ಲಿನ ಸಮೃದ್ಧವಾಗಿದ್ದ ಮಣ್ಣಿನ ಆರೋಗ್ಯ ಬಹಳ ನಾಶವಾಗಿದೆ. ಹಾಗಾಗಿ ಅಲ್ಲಿ ಬೆಳೆಯುವ ಭತ್ತ ಇನ್ನಿತರ ಆಹಾರ ವಸ್ತುಗಳು ವಿಪರೀತ ವಿಷಪದಾರ್ಥಗಳನ್ನು ಹೊಂದಿರುವುದು ಸಹಜವಾಗಿದೆ. ಒಟ್ಟಾರೆಯಾಗಿ ನಾವು ಗಮನಿಸಿ ನೋಡಿದರೆ ಈ ದೊಡ್ಡ ದೊಡ್ಡ ಜಾಗತಿಕ ಕಾರ್ಪೊರೇಟುಗಳು ಕೃಷಿ ಹಾಗೂ ಆಹಾರೋತ್ಪಾದನೆಯ ಹೆಚ್ಚಳ, ಆಧುನಿಕ ಕೃಷಿ ಹೆಸರಿನಲ್ಲಿ ಭೂಮಿಯ ಮಣ್ಣು, ಗಾಳಿ, ನೀರು ಹಾಗೂ ಪರಿಸರವನ್ನು ದಿನೇ ದಿನೇ ವಿಷಕಾರಿಯನ್ನಾಗಿ ಮಾಡುತ್ತಾ ಬರುತ್ತಿವೆ. ಅದನ್ನು ಸರಿಪಡಿಸುವುದು ತಕ್ಷಣಕ್ಕೆ ಸಾಧ್ಯವಾಗದ ಕಾರಣ ಜಾಗತಿಕ ದುರಂತಗಳಿಗೆ ಕಾರಣವಾಗುತ್ತಿದೆ. ಇವುಗಳು ಜಗತ್ತಿನ ಸಾರ್ವಜನಿಕರ ಜೀವ ಹಾಗೂ ಬದುಕುಗಳ ಮೇಲೆ ಸವಾರಿ ಮಾಡುತ್ತಾ ಬರುತ್ತಿವೆ. ಕೋವಿಡ್-19 ಸಂದರ್ಭದಲ್ಲಿ ರೋಗನಿರೋಧಕತೆಯ ಕೊರತೆಯಿಂದಾಗಿ ಸಾವುಗಳಿಗೆ ಕಾರಣವಾಗಿದ್ದರಲ್ಲಿ ಇಂತಹ ಜಾಗತಿಕ ಕಾರ್ಪೊರೇಟ್‌ಗಳ ಕೊಡುಗೆ ಒಂದು ಪ್ರಧಾನ ಅಂಶವಾಗಿದೆ.
ಪರಿಸರ ರಕ್ಷಣೆಯ ವಿಚಾರ ಬಂದಾಗ ಈ ಜಾಗತಿಕ ಕಾರ್ಪೊರೇಟ್‌ಗಳ ವಿನಾಶಕಾರಿ ಚಟುವಟಿಕೆಗಳು ಮತ್ತವುಗಳ ಪರಿಣಾಮಗಳ ಬಗ್ಗೆ ಗಮನ ನೀಡುವುದು ಕಡಿಮೆ. ಪರಿಸರ ರಕ್ಷಣೆಯೆಂದಾಗ ಅರಣ್ಯ, ಪಶ್ಚಿಮಘಟ್ಟ, ಗಿಡ ನೆಡುವುದು, ಜನರನ್ನು ಒಕ್ಕೆಲೆಬ್ಬಿಸಿ ಬೀದಿಪಾಲು ಮಾಡುವ ಮಟ್ಟಕ್ಕೆ ಸೀಮಿತಗೊಳಿಸಲಾಗುತ್ತಿದೆ. ಈ ರೀತಿಯ ದೃಷ್ಟಿಕೋನ ಇಂತಹ ವಿನಾಶಕಾರಿ ಕಂಪೆನಿಗಳ ಹಿತಾಸಕ್ತಿಗಳಿಗೆ ಪೂರಕವಾಗಿ ಕೆಲಸ ಮಾಡುತ್ತಾ ಬರುತ್ತಿವೆ ಎನ್ನುವುದಕ್ಕೆ ಅನುಮಾನ ಬೇಕಿಲ್ಲ ತಾನೇ.
ಮಿಂಚಂಚೆ: nandakumarnandana67@gmail.com







