ಮಂಗಳೂರು ಸಹಾಯಕ ಆಯುಕ್ತರ ಆದೇಶದ ವಿರುದ್ಧದ ದಾವೆ ತಿರಸ್ಕರಿಸಿದ ನ್ಯಾಯಾಲಯ
ದ.ಕ.ಜಿಲ್ಲಾ ಸರಕಾರಿ ನೌಕರರ ಸಂಘದ ಜಮೀನು ವಿವಾದ
ಮಂಗಳೂರು, ಫೆ.14: ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ 33 ಸೆಂಟ್ಸ್ ಜಮೀನನ್ನು ಸರಕಾರಕ್ಕೆ ವಶಕ್ಕೆ ಒಪ್ಪಿಸಿ ಮಂಗಳೂರು ಸಹಾಯಕ ಆಯುಕ್ತರ ನ್ಯಾಯಾಲಯದ ಆದೇಶದ ವಿರುದ್ಧ ನೌಕರರ ಸಂಘವು ಸಲ್ಲಿಸಿದ ದಾವೆಯನ್ನು ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯ ತಿರಸ್ಕರಿಸಿದೆ.
ನಗರದ ಹೃದಯಭಾಗದಲ್ಲಿರುವ ಮಿನಿ ವಿಧಾನಸೌಧ ಕಟ್ಟಡದ ಬಳಿಯ ದ.ಕ.ಜಿಲ್ಲಾ ಸರಕಾರಿ ನೌಕರರ ಸಂಘದ ಸ್ವಾಧೀನ ಮತ್ತು ಒಡೆತನಕ್ಕೊಳಪಟ್ಟ ಮಂಗಳೂರು ತಾಲೂಕಿನ ಅತ್ತಾವರ ಗ್ರಾಮದ ಸರ್ವೆ ನಂ.278/2ಬಿಗೆ ಒಳಪಟ್ಟ 33 ಸೆಂಟ್ಸ್ ಸ್ಥಳದ ಪಹಣಿಯನ್ನು ರದ್ದುಪಡಿಸಿ ಸರಕಾರಕ್ಕೆ ಒಪ್ಪಿಸುವಂತೆ ಹಾಗೂ ಈ ಸ್ಥಿರಾಸ್ಥಿಯಲ್ಲಿರುವ ಕಟ್ಟಡವನ್ನು ಜಿಲ್ಲಾ ಸಂಘದ ಸ್ವಾಧೀನತೆಯಿಂದ ಬಿಡಿಸಿ ಸರಕಾರದ ವಶಕ್ಕೆ ಪಡೆದು ಅಕ್ರಮ ಎಸಗಿದ ಸಂಬಂಧಪಟ್ಟ ಜಿಲ್ಲಾ ಪದಾಧಿಕಾರಿಗಳ ವಿರುದ್ಧ ಭೂ ಕಂದಾಯ ಕಾಯ್ದೆ 192 ಎ ಪ್ರಕಾರ ಕ್ರಮ ಕೈಗೊಳ್ಳಲು ಮಂಗಳೂರಿನ ತಹಸೀಲ್ದಾರ್‌ಗೆ ಮಂಗಳೂರಿನ ಸಹಾಯಕ ಆಯುಕ್ತರು ಮತ್ತು ಉಪವಿಭಾಗ ದಂಡಾಧಿಕಾರಿಗಳ ನ್ಯಾಯಾಲಯ ಆದೇಶ ನೀಡಿತ್ತು.
ಕಳೆದ ಆರು ದಶಕಗಳಿಂದ ತನ್ನ ಸ್ವಾಧೀನದಲ್ಲಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಕಟ್ಟಡ ಸಹಿತ ಸ್ಥಿರಾಸ್ತಿಯನ್ನು ರಕ್ಷಿಸಿಕೊಳ್ಳಲು ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಎ.ಸಿ. ಕೋರ್ಟಿನ ಆದೇಶ ರದ್ದುಪಡಿಸುವಂತೆ ಜಿಲ್ಲಾ ಸಂಘವು ದಾವೆ ಹೂಡಿತ್ತು. ಈ ದಾವೆಯಲ್ಲಿ ಸಲ್ಲಿಸಲಾದ ಮಧ್ಯಂತರ ಅರ್ಜಿಯ ಮೇಲೆ ಆದೇಶ ಹೊರಡಿಸಿದ ನ್ಯಾಯಾಲಯವು ದಾವೆಯ ಮುಂದಿನ ವಾಯಿದೆ ವರೆಗೆ ಎ.ಸಿ. ಕೋರ್ಟಿನ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು.
ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ಸಹಾಯಕ ಆಯುಕ್ತರ ನ್ಯಾಯಾಲಯದ ಆದೇಶದ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲು ಅವಕಾಶವಿಲ್ಲ ಎಂಬ ಸರಕಾರಿ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ಮಂಗಳೂರಿನ ಸಹಾಯಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ಸಂಘವು ಹೂಡಿದ ದಾವೆಯನ್ನು ತಿರಸ್ಕರಿಸಿ ಸೋಮವಾರ ಆದೇಶ ಹೊರಡಿಸಿದೆ.