ಈಜುಕೊಳ ಪ್ರವೇಶಕ್ಕೆ ಸಾರ್ವಜನಿಕರಿಗೆ ಮುಕ್ತ ಅನುಮತಿ: ಮೇಯರ್ ಪ್ರೇಮಾನಂದ ಶೆಟ್ಟಿ

ಮಂಗಳೂರು, ಫೆ.14: ಎರಡು ಡೋಸ್ ಕೋವಿಡ್ ಲಸಿಕೆ ಪಡೆದವರು ಈಜುಕೊಳಕ್ಕೆ ಪ್ರವೇಶಕ್ಕೆ ಅನುಮತಿ ನೀಡಬಹುದೆಂದು ಸರಕಾರ ಆದೇಶಿಸಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದರು.
ಮೇಯರ್ ಪ್ರೇಮಾನಂದ ಶೆಟ್ಟಿಯ ಅಧ್ಯಕ್ಷತೆಯಲ್ಲಿ ಸೋಮವಾರ ಮಂಗಳೂರು ಮನಪಾ ಅಧೀನದಲ್ಲಿರುವ ಮನಪಾ ಈಜುಕೊಳ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಈಜುಕೊಳದಲ್ಲಿ ಕೈಗೊಳ್ಳಬೇಕಾದ ಕೆಲವೊಂದು ದುರಸ್ತಿ ಕಾಮಗಾರಿಯನ್ನು ತುರ್ತಾಗಿ ಕೈಗೊಳ್ಳಬೇಕಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಎಲ್ಲಾ ಸಾರ್ವಜನಿಕರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಮತ್ತು ಈಜುಕೊಳಕ್ಕೆ ಜೀವರಕ್ಷಕರನ್ನು ಹೆಚ್ಷುವರಿಯಾಗಿ ಹೊರಗುತ್ತಿಗೆ ಆಧಾರದಲ್ಲಿ ಪಡೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ಮೇಯರ್ ಸೂಚಿಸಿದರು.
ಸಭೆಯಲ್ಲಿ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಉಪಮೇಯರ್ ಸುಮಂಗಳ ರಾವ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶೋಭ ರಾಜೇಶ್, ಸಂದೀಪ್ ಗರೋಡಿ, ಲೋಕೇಶ್ ಬೊಳ್ಳಾಜೆ, ಸದಸ್ಯರಾದ ಸಂಧ್ಯಾ ಮೋಹನ್ ಆಚಾರ್ಯ, ಉಪ ಆಯುಕ್ತಾ (ಅಭಿವೃದ್ಧಿ) ಗಣೇಶನ್ ಆರ್, ಯುವಜನ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿ ಪ್ರದೀಪ್ ಡಿಸೋಜ ಹಾಗೂ ಈಜುಕೊಳ ಸಮಿತಿಯ ಸದಸ್ಯರು ಮತ್ತು ಈಜುಕೊಳದ ವ್ಯವಸ್ಥಾಪಕ ರಮೇಶ್ ಬಿಜೈ ಉಪಸ್ಥಿತರಿದ್ದರು.





