ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿಷೇಧ: ಪರೀಕ್ಷೆ ಬರೆಯದೆ ವಾಪಸ್ ತೆರಳಿದ 13 ವಿದ್ಯಾರ್ಥಿನಿಯರು

ಶಿವಮೊಗ್ಗ, ಫೆ.14: ಮಲೆನಾಡು ಶಿವಮೊಗ್ಗದಲ್ಲಿ ಹಿಜಾಬ್ ವಿಚಾರ ಬೂದಿ ಮುಚ್ಚಿದ ಕೆಂಡದಂತಿದೆ. ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡದ ಹಿನ್ನೆಲೆ ಪರೀಕ್ಷೆ ಬರೆಯದೆ 13 ವಿದ್ಯಾರ್ಥಿನಿಯರು ವಾಪಸ್ ತೆರಳಿರುವ ಘಟನೆ ನಡೆದಿದೆ.
ಬಿ.ಹೆಚ್.ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜ ಪ್ರೌಢಶಾಲೆ ವಿಭಾಗದಲ್ಲಿ ಈ ಘಟನೆ ಸಂಭವಿಸಿದೆ.13 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ (10 ನೇ ತರಗತಿ) ಪೂರ್ವಸಿದ್ಧತಾ ಪರೀಕ್ಷೆಯನ್ನು ಹಿಜಾಬ್ ಧರಿಸಿಯೇ ಬರೆಯುವುದಾಗಿ ತಿಳಿಸಿದ್ದಾರೆ. ಇದಕ್ಕೆ ಒಪ್ಪದ ಶಾಲೆಯವರು ಹೈಕೋರ್ಟ್ ಆದೇಶದ ಹಿನ್ನೆಲೆ ಹಿಜಾಬ್ ತೆಗೆಯುವಂತೆ ಶಿಕ್ಷಕರು ಸೂಚಿಸಿದ್ದಾರೆ. ಹಿಜಾಬ್ ತೆಗೆಯಲು ನಿರಾಕರಿಸಿದ 13 ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದ್ದಾರೆ.
ಪರೀಕ್ಷಾ ಕೊಠಡಿಯಿಂದ ಹೊರ ನಡೆದ ವಿದ್ಯಾರ್ಥಿಗಳು:
ವಿದ್ಯಾರ್ಥಿನಿಯರು ಬೆಳಗ್ಗೆ ಪರೀಕ್ಷಾ ಕೊಠಡಿಯೊಳಗೆ ಬಂದಿದ್ದರು. ಹಿಜಾಬ್, ಬುರ್ಖಾ ಧರಿಸುವಂತಿಲ್ಲ ಎಂದು ಶಿಕ್ಷಕರು ಸೂಚಿಸಿದ್ದಾರೆ.ಆದರೆ ಹಿಜಾಬ್ ತೆಗೆಯಲು ಒಪ್ಪದ 13 ವಿದ್ಯಾರ್ಥಿನಿಯರು ಪರೀಕ್ಷಾ ಕೊಠಡಿಯಿಂದ ಹೊರ ನಡೆದಿದ್ದಾರೆ. ಈ ಪೈಕಿ ಇಬ್ಬರು ಎಂಟು ಮತ್ತು ಒಂಭತ್ತನೆ ತರಗತಿಯವರು. ಉಳಿದವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಾಗಿದ್ದಾರೆ.
ಮನವೊಲಿಕೆ ಪ್ರಯತ್ನ ವಿಫಲ:
ವಿದ್ಯಾರ್ಥಿನಿಯರು ಪರೀಕ್ಷಾ ಕೊಠಡಿಯಿಂದ ಹೊರೆ ನಡೆಯುವುದಾಗಿ ತಿಳಿಸಿದ್ದಾರೆ. ಆದರೆ ಶಿಕ್ಷಕರು ಅವರ ಮನವೊಲಿಸಿ ಪರೀಕ್ಷೆ ಎದುರಿಸುವಂತೆ ಹೇಳಿದ್ದಾರೆ. ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಹೊರ ನಡೆದಿದ್ದಾರೆ. ವಿದ್ಯಾರ್ಥಿನಿಯರ ಪೋಷಕರು ಕೂಡ ತಮ್ಮ ಮಕ್ಕಳನ್ನು ಬೆಂಬಲಿಸಿ ಹಿಜಾಬ್ ಇಲ್ಲದೆ ತರಗತಿಗಳಿಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಹೇಳಿ ಮನೆಗೆ ಕರೆದೊಯ್ದರು.
ಬಿಗಿ ಭದ್ರೆತೆಯಲ್ಲಿ ಶಾಲೆ ಆರಂಭ:
ಹಿಜಾಬ್, ಕೇಸರಿ ಶಾಲು ಸಂಘರ್ಷದ ಹಿನ್ನೆಲೆ ರಾಜ್ಯ ಸರ್ಕಾರ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಸೋಮವಾರ ಮೊದಲ ಹಂತದಲ್ಲಿ ಪ್ರೌಢಶಾಲೆಗಳ ತರಗತಿ ಆರಂಭವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲಾ ಪ್ರೌಢಶಾಲೆಗಳು ಪುನಾರಂಭವಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಕಳೆದ ವಾರ ಬಾಪೂಜಿನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲ್ಲು ತೂರಾಟವಾಗಿತ್ತು. ಸಮೀಪದಲ್ಲೇ ಇರುವ ಬಿ.ಹೆಚ್.ರಸ್ತೆಯ ಸರ್ಕಾರಿ ಪ್ರೌಢಶಾಲೆ ಇದೆ. ಆದ್ದರಿಂದ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಅಹಿತಕರ ಘಟನೆ ಸಂಭವಿಸದಂತೆ ಮೀಸಲು ಪೊಲೀಸರನ್ನು ಕೂಡ ನಿಯೋಜಿಸಲಾಗಿದೆ.
ನ್ಯಾಯಾಲಯವು ಇನ್ನೂ ಆದೇಶ ನೀಡಿಲ್ಲ, ಏನೇ ಇರಲಿ ನಾವು ಹಿಜಾಬ್ ಅನ್ನು ತೆಗೆಯುವುದಿಲ್ಲ, ಹಿಜಾಬ್ ಕಡ್ಡಾಯಗೊಳಿಸದಿದ್ದರೆ ನಾವು ಶಾಲೆಗೆ ಬರುವುದಿಲ್ಲ. ಹಿಜಾಬ್ ತೆಗೆಯುವಂತೆ ಕೇಳಿದರೆ ಮನೆಗೆ ಹಿಂತಿರುಗುವಂತೆ ನನ್ನ ಪೋಷಕರು ನನ್ನನ್ನು ಹೇಳಿದ್ದಾರೆ.
-ಅಲಿಯಾ ಮೆಹತ್, ಪರೀಕ್ಷೆ ಬಹಿಷ್ಕರಿಸಿದ ವಿದ್ಯಾರ್ಥಿನಿ.
13 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೇಳಿದರು.ನ್ಯಾಯಾಲಯದ ಆದೇಶ ಇರುವ ಕಾರಣ ನಾವು ಅವಕಾಶ ನೀಡಲಿಲ್ಲ.ಎಷ್ಟು ಮನವೊಲಿಸಿದರೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುತ್ತೇವೆ ಎಂದು ಪಟ್ಟು ಹಿಡಿದರು.ಶಾಲಾ ಮುಖ್ಯಸ್ಥರು ನಿರಾಕರಿಸಿದ ಬಳಿಕ ಅವರು ವಾಪಾಸ್ ಆದರು.ನಮ್ಮ ಸಲಹೆ ತಿರಸ್ಕರಿಸಿದ ವಿದ್ಯಾರ್ಥಿನಿಯರು ಮನೆಗೆ ಮರಳಿದರು.ಅವರು ಈಗಲೂ ಮನಸು ಬದಲಿಸಿ ಬಂದರೆ ಮಂಗಳವಾರ ಇದೇ ಪರೀಕ್ಷೆಯನ್ನು ಬರೆಯಲು ಅವಕಾಶ ಕೊಡುತ್ತೇವೆ.ನ್ಯಾಯಾಲಯದ ಆದೇಶ ಪಾಲನೆ ನಮ್ಮ ಕರ್ತವ್ಯವಾಗಿದೆ.
-ರಮೇಶ್,ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ
ತರಗತಿಗೆ ಹಿಜಾಬ್, ಬುರ್ಖಾ ಇಲ್ಲ
ಹಿಜಾಬ್, ಬುರ್ಖಾ, ಕೇಸರಿ ಶಾಲು ಧರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶದಂತೆ ಸೋಮವಾರ ಶಿವಮೊಗ್ಗ ಜಿಲ್ಲೆಯ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಬುರ್ಖಾ, ಹಿಜಾಬ್ ಸೇರಿದಂತೆ ಧರ್ಮ ಸೂಚಕ ಬಟ್ಟೆ ಧರಿಸದಂತೆ ನಿಗಾ ವಹಿಸಲಾಯಿತು. ಹಿಜಾಬ್, ಬುರ್ಖಾ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ಸಮವಸ್ತ್ರದಲ್ಲಿ ಶಾಲೆಗೆ ಬರುವಂತೆ ಸೂಚಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಎಲ್ಲಾ ಕಡೆಯು ತರಗತಿಗಳು ನಡೆಯುತ್ತಿವೆ. ಸಾಗರ, ಶಿಕಾರಿಪುರದಲ್ಲಿ ಒಂದು ಕಡೆಯಲ್ಲಿ ಸ್ವಲ್ಪ ಸಮಸ್ಯೆ ಉಂಟಾಗಿದೆ. ಇದರ ಹೊರತು ಭದ್ರಾವತಿ, ತೀರ್ಥಹಳ್ಳಿ, ಹೊಸನಗರ ಸೇರಿದಂತೆ ಎಲ್ಲೆಡೆಯು ತರಗತಿಗಳು ಎಂದಿನಂತೆ ನಡೆಯುತ್ತಿವೆ ಎಂದು ಡಿಡಿಪಿಐ ರಮೇಶ್ ತಿಳಿಸಿದ್ದಾರೆ.







