ಹಮಾರಾ ಬಜಾಜ್

ತನ್ನ ಉದ್ಯಮ ಗೆಳೆಯರ ಹಾಗೆ ರಾಹುಲ್ ಬಜಾಜ್ ಕೂಡಾ ಕಳಪೆಗುಣಮಟ್ಟದ ಉತ್ಪನ್ನಗಳನ್ನು ಮಾರಾಟ ಮಾಡಿಕೊಂಡಿರಬಹುದಾಗಿತ್ತು ಮತ್ತು ತನ್ನ ವಂಶಾವಳಿಯ ಹೆಸರನ್ನು ಬಳಸಿಕೊಂಡು ಸರಕಾರದಿಂದ ಪ್ರೋತ್ಸಾಹಕಗಳನ್ನು ಪಡೆಯುತ್ತಾ ಹಾಯಾಗಿದ್ದುಬಿಡಬಹುದಾಗಿತ್ತು. ಆದರೆ ಬಜಾಜ್ ಅವರು ಭಾರತದಲ್ಲಿ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಕ್ರಾಂತಿಯಾಗಬೇಕಾದ ಅಗತ್ಯವಿದೆಯೆಂಬ ಚಿಂತನೆಯನ್ನು ಬಲವಾಗಿ ಮನಸ್ಸಿಗೆ ಹಚ್ಚಿಕೊಂಡಿದ್ದರು. ವಾಯುಯಾನ ಉದ್ಯಮ ರಂಗವು ಪ್ರಯಾಣಿಕರನ್ನು ವಿಮಾನದಲ್ಲಿ ಆಸೀನರಾಗುಂತೆ ಪ್ರೇರೇಪಿಸುವ ಉದ್ಯಮ ಮಾದರಿಯನ್ನು ಅನುಸರಿಸಿದರೆ, ಬಜಾಜ್ ಅವರು ಕೋಟ್ಯಂತರ ಭಾರತೀಯರನ್ನು ದ್ವಿಚಕ್ರ ಹಾಗೂ ತ್ರಿಚಕ್ರ ವಾಹನದಲ್ಲಿ ಕುಳ್ಳಿರಿಸುವ ಕನಸನ್ನು ಕಂಡಿದ್ದರು.
ರಾಹುಲ್ ಬಜಾಜ್ (1938-2022) ಅವರು ತನ್ನ ಯುಗದ ಓರ್ವ ವಿಶಿಷ್ಟ ವ್ಯಕ್ತಿತ್ವದ ಉದ್ಯಮಿಯಾಗಿದ್ದರು. ಅವರ ಬಹುತೇಕ ಸ್ನೇಹಿತರು ಲೈಸೆನ್ಸ್ ಪರ್ಮಿಟ್ ರಾಜ್‌ನ ದುಷ್ಪರಿಣಾಮಗಳ ಪ್ರಯೋಜನ ಪಡೆದುಕೊಂಡರೆ, ಬಜಾಜ್ ಅವರು ಏಕಾಂಗಿಯಾಗಿ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ದ್ವಿಚಕ್ರ ವಾಹನ ಸಂಚಾರವು ಅತ್ಯಂತ ಸೂಕ್ತವಾಗಿದೆ ಎಂಬ ಸರಳ ನಿರ್ಣಯದೊಂದಿಗೆ ತನ್ನ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿಕೊಂಡರು.
ಯಾರಾದರೂ ಭಾರತೀಯ ಆರ್ಥಿಕತೆಯ ಮೂಲದ ಕುರಿತು ಕೇಳಲು ಬಯಸುತ್ತಾರಾದರೆ, ಅವರಿಗೆ ನಾನು 1980ರ ದಶಕದಲ್ಲಿ ಮುಂಬೈಯಲ್ಲಿ ಔದ್ಯಮಿಕ ವಿಷಯಗಳ ಕುರಿತ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದ ಬಜಾಜ್ ಅವರನ್ನು ಸಾರ್ವಕಾಲಿಕವಾಗಿ ಬೆಟ್ಟು ಮಾಡಿ ತೋರಿಸುತ್ತೇನೆ. ಮುಂಬೈಗೆ ಬಜಾಜ್ ಆಗಾಗ ಭೇಟಿ ನೀಡುತ್ತಿದ್ದ ಸಂದರ್ಭ ಅವರು ನಾರಿಮನ್ ಪಾಯಿಂಟ್‌ನಲ್ಲಿರುವ ಬಜಾಜ್ ಭವನದಲ್ಲಿ ಆಸೀನರಾಗಿರುತ್ತಾರೆ. ಇತರರ ಮೇಲೆ ಗರಿಷ್ಠ ಪರಿಣಾಮವನ್ನು ಬೀರಲು ಅವರು ತನ್ನ ಎತ್ತರದ ನಿಲುವು ಹಾಗೂ ಗಂಭೀರವಾದ ಧ್ವನಿಯನ್ನು ಬಳಸಿಕೊಳ್ಳುತ್ತಾರೆ. ತನ್ನ ಸಹಾಯಕರು ಹಾಗೂ ದಿಲ್ಲಿಯಲ್ಲಿರುವ ಕೆಲವು ರಾಜಕಾರಣಿಗಳ ದೂರವಾಣಿ ಕರೆಗಳಿಂದ ಆಗಾಗ ಆಡಚಣೆಗೊಳಗಾಗುವ ಬಜಾಜ್ ಅವರು ಸರಕಾರವು ಒಂದು ವೇಳೆ ಅಡಚಣೆಯುಂಟು ಮಾಡದೆ ಇದ್ದಲ್ಲಿ ಭಾರತವನ್ನು ಮುನ್ನಡೆಸಲು ಕಾರ್ಯಸಾಧ್ಯವಾದಂತಹ ಆರ್ಥಿಕ ಪಥವೊಂದಿದೆಯೆಂಬ ಗಾಢನಂಬಿಕೆಯನ್ನು ಹೊಂದಿದ್ದರು.
ತನ್ನ ಈ ವಿಚಾರಧಾರೆಯ ಬೀಜವನ್ನು ಅವರು ಯುವಕನಾಗಿದ್ದಾಗಲೇ ಬಿತ್ತಿದ್ದರು. 1960ರ ದಶಕದ ಮಧ್ಯದಲ್ಲಿ ಬಜಾಜ್ ಅವರು ಹಾರ್ವರ್ಡ್ ವಿವಿಯಲ್ಲಿ ಎಂಬಿಎ ಪದವಿ ಪಡೆದು ಭಾರತಕ್ಕೆ ವಾಪಸಾಗಿದ್ದರು. ಆ ಕಾಲದಲ್ಲಿ ವಿದೇಶದಲ್ಲಿ ಎಂಬಿಎ ಪದವಿ ಪಡೆಯುವುದು ಭಾರತೀಯರ ಪಾಲಿಗೆ ತೀರಾ ಅಪರೂಪವೆನಿಸಿತ್ತು. ಕೆಲವು ವರ್ಷಗಳ ಕಾಲ ಅವರಲ್ಲಿ ನಿಸ್ಸಹಾಯಕತೆ ಹಾಗೂ ಗೊತ್ತುಗುರಿಯಿಲ್ಲದ ಜೀವನ ಸಾಗಿಸುತ್ತಿರುವಂತಹ ಭಾವನೆಯುಂಟಾಗಿತ್ತು. ಆಗ ಭಾರತ ಇನ್ನೂ ನೆಹರೂ ಕಾಲದ ಸಮಾಜವಾದ ಗುಂಗಿನಲ್ಲಿತ್ತು. ದೇಶದ ಆರ್ಥಿಕತೆಯಲ್ಲಿ ಖಾಸಗಿ ವಲಯಕ್ಕೆ ಕಾರ್ಯಸಾಧ್ಯವಾದ ಪಾತ್ರವಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಾಗುತ್ತಿರಲಿಲ್ಲ.
ಬಜಾಜ್ ಅವರು ಹೆಸರಾಂತ ಉದ್ಯಮ ಕುಟುಂಬಕ್ಕೆ ಸೇರಿದವರಾಗಿದ್ದು, ಅವರ ತಾತ ಸ್ವಾತಂತ್ರ ಹೋರಾಟದಲ್ಲಿ ಮಹಾತ್ಮಾ ಗಾಂಧೀಜಿ ಜೊತೆ ಹೋರಾಡಿದ್ದರು. ತನ್ನ ಗೆಳೆಯರ ಹಾಗೆ ಬಜಾಜ್ ಅವರು ಕೂಡಾ ಕಳಪೆಗುಣಮಟ್ಟದ ಉತ್ಪನ್ನಗಳನ್ನು ಮಾರಾಟ ಮಾಡಿಕೊಂಡಿರಬಹುದಾಗಿತ್ತು ಮತ್ತು ತನ್ನ ವಂಶಾವಳಿಯ ಹೆಸರನ್ನು ಬಳಸಿಕೊಂಡು ಸರಕಾರದಿಂದ ಪ್ರೋತ್ಸಾಹಕಗಳನ್ನು ಪಡೆಯುತ್ತಾ ಹಾಯಾಗಿದ್ದುಬಿಡಬಹುದಾಗಿತ್ತು. ಆದರೆ ಬಜಾಜ್ ಅವರು ಭಾರತದಲ್ಲಿ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಕ್ರಾಂತಿಯಾಗಬೇಕಾದ ಅಗತ್ಯವಿದೆಯೆಂಬ ಚಿಂತನೆಯನ್ನು ಬಲವಾಗಿ ಮನಸ್ಸಿಗೆ ಹಚ್ಚಿಕೊಂಡಿದ್ದರು. ವಾಯುಯಾನ ಉದ್ಯಮ ರಂಗವು ಪ್ರಯಾಣಿಕರನ್ನು ವಿಮಾನದಲ್ಲಿ ಆಸೀನರಾಗುವಂತೆ ಪ್ರೇರೇಪಿಸುವ ಉದ್ಯಮ ಮಾದರಿಯನ್ನು ಅನುಸರಿಸಿದರೆ, ಬಜಾಜ್ ಅವರು ಕೋಟ್ಯಂತರ ಭಾರತೀಯರನ್ನು ದ್ವಿಚಕ್ರ ಹಾಗೂ ತ್ರಿಚಕ್ರ ವಾಹನದಲ್ಲಿ ಕುಳ್ಳಿರಿಸುವ ಕನಸನ್ನು ಅವರು ಕಂಡಿದ್ದರು.
80ರ ದಶಕದ ಆರಂಭದಲ್ಲಿ ನಾನು ಬ್ಯುಸಿನೆಸ್ ಇಂಡಿಯಾ ಪತ್ರಿಕೆಯಲ್ಲಿ ಕಿರಿಯ ವರದಿಗಾರನಾಗಿದ್ದಾಗ ಬಜಾಜ್ ಅವರನ್ನು ಭೇಟಿಯಾಗಿದ್ದೆ. ಪತ್ರಿಕೆಯ ಪ್ರತಿಷ್ಠಿತ ವರ್ಷದ ಉದ್ಯಮ ಪ್ರಶಸ್ತಿಗೆ ಅವರು ಆಯ್ಕೆಯಾಗಿದ್ದರು. ಆಗ ಪುಣೆಯಲ್ಲಿ ಅವರನ್ನು ಭೇಟಿಯಾಗಲು ನಾನು ಹಿರಿಯ ಸಂಪಾದಕರ ಜೊತೆ ತೆರಳಿದ್ದೆ. ಹಲವು ತಾಸುಗಳ ಕಾಲ ನಡೆದ ಮಾತುಕತೆಯ ಸಂದರ್ಭದಲ್ಲಿ ಭಾರತೀಯ ಗ್ರಾಹಕನ ಅಭಿರುಚಿಯ ವಿಕಸನವನ್ನು ಅರಿತುಕೊಳ್ಳುವಲ್ಲಿ ಬಜಾಜ್ ಅವರು ಉತ್ಕಟವಾದ ಆಸಕ್ತಿಯನ್ನು ವ್ಯಕ್ತಪಡಿಸಿರುವುದು ಈಗಲೂ ನನಗೆ ನೆನಪಾಗುತ್ತಿದೆ. ತನ್ನ ಉತ್ಪನ್ನಗಳನ್ನು ಖರೀದಿಸಿದ ಮಧ್ಯ ವಯಸ್ಕ ಭಾರತೀಯರು ಬೊಜ್ಜುದೇಹಿಗಳಾಗುತ್ತಾರೆ ಹಾಗೂ ತನ್ನ ಸ್ಕೂಟರ್‌ನಲ್ಲಿ ಕುಳಿತುಕೊಳ್ಳಲು ಅವರಿಗೆ ಸಾಧ್ಯವಾಗಲಾರದು ಎಂಬ ಬಗ್ಗೆ ತಾನು ಚಿಂತಿತನಾಗಿದ್ದೇನೆ ಎಂದವರು ನಗುತ್ತಲೇ ಹೇಳಿದರು. ಈ ವಯೋಮಾನದ ಮಂದಿಗಾಗಿ ಅವರು ಸೂಕ್ತವಾದ ಪರಿಹಾರ ಮಾರ್ಗವಾಗಿ ಬಜಾಜ್ ಕೊಂಟಿಯನ್ನು ಹೊರತರುವ ಯೋಜನೆಯನ್ನು ನಮಗೆ ಪ್ರದರ್ಶಿಸಿದರು. ವಿಶಾಲವಾದ ಬೇಸ್ ಹೊಂದಿರುವ ಈ ಸ್ಕೂಟರ್‌ನಲ್ಲಿ ದಪ್ಪನೆಯ ಗಾತ್ರದ ಭಾರತೀಯರು ಸುರಕ್ಷಿತವಾಗಿ ಪ್ರಯಾಣಿಸಲು ಸಾಧ್ಯವಾಗಿತ್ತು. ತನ್ನ ಉತ್ಪನ್ನಗಳ ಬಗ್ಗೆ ಗಮನಸೆಳೆಯಲು ಇಂದು ವೈರಲ್ ಮಾರ್ಕೆಟಿಂಗ್ ಎಂದು ಪರಿಗಣಿಸಲಾಗುವ ಪ್ರಚಾರತಂತ್ರದ ಪರಿಣಾಮಕಾರಿತ್ವವನ್ನು ಬಜಾಜ್ ಆಗಲೇ ಆರಿತುಕೊಂಡಿದ್ದರು. ಪ್ರೆಸಿಡೆಂಟ್ ಹೊಟೇಲ್‌ನಲ್ಲಿ ಜಪಾನ್‌ನ ಕಾವಾಸಾಕಿ ಕಂಪೆನಿಯ ಸಹಯೋಗದಲ್ಲಿ ಪ್ರಾರಂಭಿಸಿರುವ ತನ್ನ ಮೋಟಾರು ಸೈಕಲ್‌ನ ಅನಾವರಣ ಕಾರ್ಯಕ್ರಮದಲ್ಲಿ, ಬಜಾಜ್ ಅವರು ಗರ್ಜಿಸುತ್ತಿರುವ ಈ ದ್ವಿಚಕ್ರವನ್ನು ವೇದಿಕೆಯಲ್ಲಿ ಪ್ರದರ್ಶಿಸಲು ಸ್ಟಂಟ್‌ಮ್ಯಾನ್ ಒಬ್ಬರನ್ನು ಗೊತ್ತುಪಡಿಸಿದ್ದರು (ಆ ಕಾಲದಲ್ಲೇ ವೇದಿಕೆಯಲ್ಲಿ ಹೊಗೆ ಹಾಗೂ ಗಟ್ಟಿಯಾದ ಸಂಗೀತದ ವ್ಯವಸ್ಥೆಯನ್ನು ಕೂಡಾ ಮಾಡಲಾಗಿತ್ತು). ಮುಂದಿನ ಸಾಲಲ್ಲಿ ಕುಳಿತುಕೊಂಡಿದ್ದ ಪತ್ರಕರ್ತನೊಬ್ಬ ಮೋಟಾರು ಸೈಕಲ್ ತನಗೆ ಢಿಕ್ಕಿ ಹೊಡೆಯುವುದೆಂದು ಭಾವಿಸಿ ಎದ್ದು ಓಡಿಹೋಗಿದ್ದನು. ಆತ ಬಜಾಜ್ ಅವರ ಕೀಟಲೆಗೆ ಗ್ರಾಸವಾಗುತ್ತಲೇ ಇದ್ದನು. ಭವಿಷ್ಯದ ಕಾರ್ಯಕ್ರಮಗಳಲ್ಲಿಯೂ ಬಜಾಜ್ ಅವರು ಆ ಪತ್ರಕರ್ತನಿಗೆ ವಾಹನವು ಆತ ಕುಳಿತುಕೊಂಡ ದಿಕ್ಕಿಗೆ ಧಾವಿಸಿ ಬರಲಿದೆಯೆಂದು ಜೋಕ್ ಮಾಡುತ್ತಿದ್ದರು.
1991ರಲ್ಲಿ ಭಾರತವು ಮುಕ್ತ ಆರ್ಥಿಕತೆಗೆ ತನ್ನನ್ನು ತೆರೆದುಕೊಂಡಾಗ ಬಜಾಜ್ ಅವರನ್ನು ಆರ್ಥಿಕ ಸುಧಾರಣೆಗಳ ಪ್ರತಿಪಾದನೆಗೆ ನಿರುತ್ಸಾಹ ತೋರಿಸುತ್ತಿರುವ ಉದ್ಯಮಿಯೆಂದೇ ಪರಿಗಣಿಸಲ್ಬಟ್ಟಿದ್ದರು. ಆದರೆ ಹಲವಾರು ಮಂದಿ ಅವರನ್ನು ಭಾರತಕ್ಕೆ ಧಾವಿಸಲಿರುವ ವಿದೇಶಿ ಕಂಪೆನಿಗಳ ವಿರುದ್ಧ ಭಾರತೀಯ ಮೂಲದ ಕಂಪೆನಿಗಳ ಸವಲತ್ತುಗಳನ್ನು ರಕ್ಷಿಸಲು ಆಸಕ್ತರಾಗಿದ್ದವರು ಎಂದೇ ಪರಿಗಣಿಸಿದ್ದರು. ಭಾರತೀಯ ಉದ್ಯಮಗಳ ಹಿತರಕ್ಷಣೆಯನ್ನು ಪ್ರತಿಪಾದಿಸಲು ಭಾರತೀಯ ಉದ್ಯಮಪತಿಗಳು ಸ್ಥಾಪಿಸಿದ್ದ ಬಾಂಬೆ ಕ್ಲಬ್‌ನ ಹಿಂದಿರುವ ಚಾಲಕಶಕ್ತಿ ಅವರಾಗಿದ್ದರು.
ತನ್ನ ಉದ್ಯಮ ಬದುಕಿನುದ್ದಕ್ಕೂ ವಿಶಾಲವಾದ ಸ್ಪರ್ಧೆಗೆ ಒಡ್ಡಿಕೊಂಡಿದ್ದ ಬಜಾಜ್ ಅವರು ದೇಶೀಯ ಖಾಸಗಿ ವಲಯವನ್ನು ರಕ್ಷಿಸುವುದರ ಹಿಂದೆ ಯಾವ ತರ್ಕವನ್ನು ಹೊಂದಿದ್ದರು ಎಂಬ ಪ್ರಶ್ನೆ ಮೂಡುವುದು ಸಹಜ. ಒಂದು ಹಂತದವರೆಗೆ ಬಜಾಜ್ ಅವರ ನಿಲುವು ತಾರ್ಕಿಕವಾದುದಾಗಿತ್ತು. ಭಾರತ ಸರಕಾರವು ಜಾಗತಿಕ ಆರ್ಥಿಕ ಉದಾರೀಕರಣದೆಡೆಗೆ ಬಾಗಿಲುಗಳನ್ನು ತೆರೆದಾಗ, ಮೊದಲ ಹಂತದಲ್ಲಿ ಅದರ ಪ್ರಯೋಜನವನ್ನು ಸ್ವದೇಶಿ ಉದ್ಯಮಗಳು ಒಂದು ದಶಕದವರೆಗಾದರೂ ಪಡೆದುಕೊಳ್ಳಬೇಕೆಂದು ಅವರು ಬಯಸಿದ್ದರು. ಹಲವಾರು ನ್ಯೂನತೆಗಳನ್ನು ಹಾಗೂ ನಿಷ್ಕ್ರಿಯತೆಗಳಿಂದ ಬಾಧಿತವಾದ ಭಾರತೀಯ ಉದ್ಯಮಗಳು ಹೆಚ್ಚು ಬಲಿಷ್ಠವಾದ ಹಾಗೂ ಉತ್ತಮವಾದ ಸಂಪನ್ಮೂಲಗಳಿರುವ ವಿದೇಶಿ ಪ್ರತಿಸ್ಪರ್ಧಿಗಳು ಒಡ್ಡುವ ಸ್ಪರ್ಧೆಯನ್ನು ಎದುರಿಸಲು ಸಾಧ್ಯವಾಗಲಾರದೆಂಬ ಆತಂಕವನ್ನು ಹೊಂದಿದ್ದರು.
ಬಜಾಜ್ ಅವರ ಸಿದ್ಧಾಂತವನ್ನು ಅನೇಕ ಮಂದಿ ಒಪ್ಪಲಿಲ್ಲ. ಅದನ್ನು ಸ್ವತಃ ಬಜಾಜ್ ಅವರೇ ನನ್ನೊಂದಿಗೆ ಹಲವಾರು ವರ್ಷಗಳ ಆನಂತರ ಹೇಳಿಕೊಂಡಿದ್ದರು. ಬಾಂಬೆ ಕ್ಲಬ್‌ನಲ್ಲಿರುವ ತನ್ನ ಒಡನಾಡಿಗಳ ಸಮಸ್ಯೆಯೇನೆಂದರೆ, ಅವರು ವಿದೇಶದಿಂದಾಗಲೀ ಅಥವಾ ಸ್ವದೇಶದಿಂದಾಗಲೀ ಹೀಗೆ ಯಾವುದೇ ಮೂಲದಿಂದ ಬರುವ ಸ್ಪರ್ಧಾತ್ಮಕತೆಯ ಮೂಲಭೂತ ಚಿಂತನೆಯನ್ನು ಪ್ರತಿರೋಧಿಸುತ್ತಿದ್ದರು. ಬಜಾಜ್ ಜೊತೆಗೆ ಹಲವಾರು ವರ್ಷಗಳ ನನ್ನ ಮುಖಾಮುಖಿಯ ಅವಧಿಯಲ್ಲಿ ಅವರು ಹಿಂದಿಗಿಂತ ಕಳೆದ ದಶಕದಲ್ಲಿ ಭಾರತವು ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಹಲವು ಬದಲಾವಣೆಗಳನ್ನು ಕಂಡಿತ್ತು. ಆದರೆ ಭಾರತೀಯ ಪ್ರಜಾಪ್ರಭುತ್ವದ ಚಿಂತನೆಯ ಕೆಲವು ಮೂಲಭೂತ ಸಿದ್ಧಾಂತಗಳನ್ನು ಅವರು ಗಾಢವಾಗಿ ನಂಬಿದ್ದರು. ಬಹಿರಂಗವಾಗಿ ಯಾವುದೇ ಮುಕ್ತ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕಾಗಿ ಅವರ ವಿರುದ್ಧ ನಿರ್ಬಂಧಕ್ರಮಗಳನ್ನು ಹೇರಕೂಡದೆಂಬುದನ್ನು ಬಜಾಜ್ ಅವರು ಬಲವಾಗಿ ನಂಬಿದ್ದರು. ಮೋದಿ ಸರಕಾರವು ದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆಯೆಂಬ ತನ್ನ ಬಹಿರಂಗ ಹೇಳಿಕೆಯು ಕಾರ್ಪೊರೇಟ್ ಭಾರತದಲ್ಲಿ ನಿರ್ಣಾಯಕವಾದ ಕ್ಷಣವಾಗಿದೆ. ಯಾಕೆಂದರೆ ಅದು ನನ್ನ ಸಹವರ್ತಿಗಳ ಹೇಡಿತನವನ್ನು ಬಯಲಿಗೆಳೆದಿದೆ ಎಂದು ಬಜಾಜ್ ಅಭಿಪ್ರಾಯಿಸಿದ್ದರು.
ಹಲವು ವರ್ಷಗಳ ಕಾಲ ಅದರಲ್ಲೂ ಮುಖ್ಯವಾಗಿ ದಾವೋಸ್‌ನಲ್ಲಿ ವಾರ್ಷಿಕ ಔದ್ಯಮಿಕ ಮೇಳದಲ್ಲಿ ಬಜಾಜ್ ಅವರನ್ನು ಭೇಟಿಯಾಗಿದ್ದೆ. ಆಗ ನಾನು ಪತ್ರಿಕೋದ್ಯಮವನ್ನು ತೊರೆದಿರುವುದಾಗಿ ಹೇಳಿದಾಗ ಅವರದನ್ನು ನಂಬಲೇ ಇಲ್ಲ. ಆಗ ನಾನು ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಗಾಗಿ ಕೆಲಸ ಮಾಡುತ್ತಿದ್ದೇನೆಂದು ಹೇಳಿದಾಗ ನೀವು ‘ಬಾಬು’ ಆಗಿದ್ದೀರಿ ಎಂದು ಚಟಾಕಿ ಹಾರಿಸಿದರು. ನಾನು ಮಾತನಾಡುತ್ತಲೇ ಸಾಗುತ್ತಿದ್ದಾಗ, ಹಿಮಭರಿತವಾದ ಕಾಲುದಾರಿಯಲ್ಲಿ ಜಾರಿದಾಗ ಅವರು ನನ್ನ ಕೈಹಿಡಿದು ನಿಲ್ಲಿಸಿದರು. ‘‘ಖಾಸಗಿ ವಲಯವು ಬಾಬು ಅವರ ರಕ್ಷಣೆಗೆ ಧಾವಿಸಿಬಂತು’’ ಎಂದು ಅವರು ನನ್ನೊಂದಿಗೆ ತಮಾಷೆಯಾಗಿ ಹೇಳಿದರು ಹಾಗೂ ಅವರದ್ದೇ ಆದ ಶೈಲಿಯ ನಗುವಿನೊಂದಿಗೆ ಮುಂದಕ್ಕೆ ನಡೆದು ಹೋದರು.
ಕೃಪೆ : thewire.in







