ಅಲ್ಪಸಂಖ್ಯಾತ ಶಾಸಕರ ನಿಯೋಗದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ

ಬೆಂಗಳೂರು, ಫೆ.15: ರಾಜ್ಯದಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳು ಹಾಗೂ ಮುಂಬರುವ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡುವಂತೆ ಮುಸ್ಲಿಮ್ ಶಾಸಕರ ನಿಯೋಗವು ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಕಚೇರಿಯಲ್ಲಿ ಅವರನ್ನು ಭೇಟಿಯಾದ ಶಾಸಕರು, ಹಿಜಾಬ್ ವಿಚಾರವನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಅಂಕುಶ ಹಾಕಬೇಕು. ಮುಸ್ಲಿಮ್ ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗೆ ಯಾವುದೆ ರೀತಿಯ ಅಡಚಣೆಗಳುಂಟಾಗದಂತೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ವಿದ್ಯಾರ್ಥಿನಿಯರ ವಿಚಾರದಲ್ಲಿ ಉಡುಪಿ ಹಾಗೂ ಕುಂದಾಪುರದ ಕಾಲೇಜುಗಳಲ್ಲಿ ನಡೆದ ಬೆಳವಣಿಗೆಗಳು ಸರಿಯಲ್ಲ. ಇದಲ್ಲದೆ, ಶಿವಮೊಗ್ಗ, ಮಂಡ್ಯ, ವಿಜಯಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದಿರುವ ಅಹಿತಕರ ಘಟನೆಗಳು ಮರುಕಳಿಸದಂತೆ ಸರಕಾರ ಎಚ್ಚರ ವಹಿಸಬೇಕು ಎಂದು ನಿಯೋಗ ಕೋರಿತು.
ರಾಜ್ಯದಲ್ಲಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ ನಿಯೋಗವು, 2022-23ನೆ ಸಾಲಿನ ರಾಜ್ಯ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.
ನಿಯೋಗದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಕಾಂಗ್ರೆಸ್ ಶಾಸಕಾಂಗ ಪಕ್ಷ ಉಪ ನಾಯಕ ಯು.ಟಿ.ಖಾದರ್, ಶಾಸಕರಾದ ತನ್ವೀರ್ ಸೇಠ್, ಝಮೀರ್ ಅಹ್ಮದ್ ಖಾನ್, ನಸೀರ್ ಅಹ್ಮದ್, ಎನ್.ಎ.ಹಾರೀಸ್, ಕನೀಝ್ ಫಾತಿಮಾ, ರಹೀಮ್ ಖಾನ್, ರಿಝ್ವಾನ್ ಅರ್ಶದ್, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗ ಅಧ್ಯಕ್ಷ ಕೆ.ಅಬ್ದುಲ್ ಜಬ್ಬಾರ್ ಉಪಸ್ಥಿತರಿದ್ದರು.








