ಕೋವಿಡ್ ನಿರ್ಬಂಧ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ತುರ್ತುಪರಿಸ್ಥಿತಿ ಹೇರಿದ ಕೆನಡಾ ಪ್ರಧಾನಿ

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯೋ (PTI)
ಒಟ್ಟಾವ: ಕೋವಿಡ್-19 ನಿರ್ಬಂಧಗಳನ್ನು ವಿರೋಧಿಸಿ ಕೆನಡಾದಲ್ಲಿ ಕಳೆದೆರಡು ವಾರಗಳಿಂದಲೂ ಹೆಚ್ಚಿನ ಸಮಯದಿಂದ ನಡೆಯುತ್ತಿರುವ ಅಭೂತಪೂರ್ವ ಫ್ರೀಡಂ ಕಾನ್ವಾಯ್ ಪ್ರತಿಭಟನೆಗಳನ್ನು ಅಂತ್ಯಗೊಳಿಸುವ ಉದ್ದೇಶದಿಂದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯೋ ಅವರು ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ರಾಜಧಾನಿ ಒಟ್ಟಾವ, ಆಲ್ಬರ್ಟ ಮತ್ತು ಮನಿಟೋಬಾ ಮತ್ತಿತರೆಡೆ ಪ್ರತಿಭಟನೆಗಳನ್ನು ಹತ್ತಿಕ್ಕುವ ಉದ್ಧೇಶವನ್ನು ಸರಕಾರ ಹೊಂದಿದೆ. ಒಟ್ಟಾವದಲ್ಲಂತೂ ಸುಮಾರು 400 ಟ್ರಕ್ಕುಗಳು ಪ್ರತಿಭಟನೆಯ ಭಾಗವಾಗಿದ್ದು ತುರ್ತುಪರಿಸ್ಥಿತಿಯನ್ನು ಘೋಷಿಸಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕುವ ಮತ್ತಿತರ ಕ್ರಮಗಳನ್ನು ಕೈಗೊಳ್ಳಲು ಸರಕಾರಕ್ಕೆ ಅನುವಾಗಲಿದೆ.
"ಅಕ್ರಮ ಮತ್ತು ಅಪಾಯಕಾರಿ ಚಟುವಟಿಕೆಗಳನ್ನು ನಾವು ಅನುಮತಿಸಲು ಸಾಧ್ಯವಿಲ್ಲ,'' ಎಂದು ಜಸ್ಟಿನ್ ಟ್ರುಡಿಯೋ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. ತುರ್ತುಪರಿಸ್ಥಿತಿ ಕಾಯಿದೆಯನ್ನು ದೇಶದಲ್ಲಿ ಜಾರಿಗೊಳಿಸಿರುವುದರಿಂದ ಸರಕಾರಕ್ಕೆ ತಾತ್ಕಾಲಿಕವಾಗಿಯಾದರೂ ವ್ಯಾಪಕ ಅಧಿಕಾರವನ್ನು ನೀಡಲಿದೆ. ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಕೆಲ ನಿರ್ದಿಷ್ಟ ಪ್ರದೇಶಗಳಿಗೆ ತೆರಳುವುದು ಹಾಗೂ ಅಲ್ಲಿಂದ ಆಗಮಿಸುವುದನ್ನು ನಿರ್ಬಂಧಿಸಲು ಸರಕಾರಕ್ಕೆ ಈಗ ಸಾಧ್ಯವಾಗಲಿದೆ.
ಕೆನಡಾದಲ್ಲಿ ತುರ್ತುಪರಿಸ್ಥಿತಿ ಈ ಹಿಂದೆ ಘೋಷಿಸಿ ಅರ್ಧ ಶತಮಾನವೇ ಸಂದಿದೆ. ಟ್ರುಡಿಯೋ ಅವರ ತಂದೆ, ಹಿಂದಿನ ಪ್ರಧಾನಿ ಪಿಯೆರ್ರೆ ಇಲಿಯಟ್ ಟ್ರುಡಿಯೋ ಅವರು ಖ್ವುಬೆಕ್ನಲ್ಲಿ ಉಗ್ರವಾದವನ್ನು ಮಟ್ಟ ಹಾಕಲು ಹಿಂದೆ ತುರ್ತುಪರಿಸ್ಥಿತಿ ಘೋಷಿಸಿದ್ದರು.
ತುರ್ತುಪರಿಸ್ಥಿತಿ ಕಾಯಿದೆಯನ್ವಯ ಪ್ರತಿಭಟನೆಯನ್ನು ಹತ್ತಿಕ್ಕಲು ಸೇನಾ ಪಡೆಗಳನ್ನು 30 ದಿನಗಳ ಕಾಲ ಬಳಸಬಹುದಾದರೂ ಈ ಅಧಿಕಾರವನ್ನು ಬಳಸುವುದಿಲ್ಲ ಎಂದು ಜಸ್ಟಿನ್ ಟ್ರುಡಿಯೋ ಹೇಳಿದ್ದಾರಾದರೂ ಕೆನಡಾದ ನ್ಯಾಯ ಸಚಿವ ಡೇವಿಡ್ ಲಮೆಟ್ಟಿ ಮಾತನಾಡಿ ಸರಕಾರ ಕೈಗೊಳ್ಳಬಹುದಾದ ಕ್ರಮಗಳ ವಿವರಣೆ ನಿಡಿದ್ದಾರೆ.
ಕಳೆದೆರಡು ವಾರಗಳಿಂದ ಪ್ರತಿಭಟನೆ ದೇಶದಲ್ಲಿ ನಡೆಯುತ್ತಿದ್ದು ವಾರಾಂತ್ಯದಲ್ಲಿ ಪ್ರತಿಭಟನಾಕಾರರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ. ಈಗಾಗಲೇ ಪ್ರತಿಭಟನಾಕಾರರು ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಹಾನಿಗೈದಿದ್ದಾರಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಸೇವನೆಗೆ ಇರುವ ನಿಷೇಧವನ್ನೂ ಉಲ್ಲಂಘಿಸಿದ್ಧಾರೆ. ಪ್ರತಿಭಟನೆಗಳಿಂದ ಹಲವಾರು ವ್ಯಾಪಾರ ಮಳಿಗೆಗಳು ವ್ಯಾಪಾರವಿಲ್ಲದೆ ನಷ್ಟವನ್ನನುಭವಿಸುವಂತಾಗಿದೆ.







