ಮೇವು ಹಗರಣ: 5ನೇ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ದೋಷಿ ಎಂದು ತೀರ್ಪು ನೀಡಿದ ನ್ಯಾಯಾಲಯ

ರಾಂಚಿ (ಜಾರ್ಖಂಡ್), ಫೆ. 15: ದೊರಾಂಡ ಖಜಾನೆಯಿಂದ 139.35 ಕೋಟಿ ರೂಪಾಯಿಯನ್ನು ಕಾನೂನುಬಾಹಿರವಾಗಿ ತೆಗೆದ ಮೇವು ಹಗರಣದ ಐದನೇ ಪ್ರಕರಣದಲ್ಲಿ ಆರ್ಜೆಡಿ ವರಿಷ್ಠ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಹಾಗೂ ಇತರ 74 ಮಂದಿಯನ್ನು ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ಮಂಗಳವಾರ ದೋಷಿ ಎಂದು ಪರಿಗಣಿಸಿದೆ.
ಶಿಕ್ಷೆ ಪ್ರಮಾಣವನ್ನು ನ್ಯಾಯಾಲಯ ಫೆಬ್ರವರಿ 18ರಂದು ಪ್ರಕಟಿಸಲಿದೆ. ಪ್ರಕರಣದ ವಿಚಾರಣೆಯನ್ನು ಜ. 29ಕ್ಕೆ ಪೂರ್ಣಗೊಳಿಸಿದ್ದ ನ್ಯಾಯಾಲಯ ತೀರ್ಪನ್ನು ಫೆ. 15ಕ್ಕೆ ನಿಗದಿ ಮಾಡಿತ್ತು. ರಾಂಚಿಯ ಡೊರಾಂಡ ಖಜಾನೆಯಿಂದ 1995-1996ರ ವೇಳೆ 139.35 ಕೋಟಿ ರೂಪಾಯಿ ತೆಗೆದಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ 24 ಮಂದಿ ಆರೋಪಿಗಳನ್ನು ವಿಶೇಷ ನ್ಯಾಯಾಧೀಶ ಎಸ್.ಕೆ. ಶಶಿ ಖುಲಾಸೆಗೊಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ 2005 ಸೆಪ್ಟಂಬರ್ 26ರಂದು ಆರೋಪಿಗಳ ವಿರುದ್ಧ ಆರೋಪ ಪಟ್ಟಿ ರೂಪಿಸಲಾಗಿತ್ತು. 2019 ಮೇ 16ರಂದು ಪ್ರಾಸಿಕ್ಯೂಷನ್ ಸಾಕ್ಷವನ್ನು ಪೂರ್ಣಗೊಳಿಸಿತ್ತು.
2020 ಜನವರಿ 16ರಂದು ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿತ್ತು ಎಂದು ನ್ಯಾಯಾಲಯದ ದಾಖಲೆಗಳು ತಿಳಿಸಿವೆ. ನ್ಯಾಯಾಲಯದಲ್ಲಿ ಉಪಸ್ಥಿತರಿದ್ದ ಇತರ 13 ಆರೋಪಿಗಳ ಪರ ವಕೀಲ ಸಂಜಯ್ ಕುಮಾರ್, ‘‘ಲಾಲು ಪ್ರಸಾದ್ ಯಾದವ್ ಅವರನ್ನು ದೋಷಿ ಎಂದು ಪರಿಗಣಿಸಲಾಗಿದೆ. ಒಟ್ಟು 99 ಆರೋಪಿಗಳಲ್ಲಿ 24 ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಉಳಿದ 75 ಮಂದಿ ಆರೋಪಿಗಳಲ್ಲಿ 34 ಮಂದಿಗೆ ಮೂರು ವರ್ಷಗಳ ಕಾರಗೃಹ ಶಿಕ್ಷೆ ವಿಧಿಸಲಾಗಿದೆ. ಲಾಲು ಪ್ರಸಾದ್ ಯಾದವ್ ಸೇರಿದಂತೆ ಉಳಿದವರ ಶಿಕ್ಷೆಯ ಪ್ರಮಾಣ ಇನ್ನಷ್ಟೆ ಘೋಷಣೆಯಾಗಬೇಕಿದೆ’’ ಎಂದಿದ್ದಾರೆ. ಇದು ಮೇವು ಹಗರಣದ ಐದನೇ ಪ್ರಕರಣ. ಈ ಹಿಂದಿನ ನಾಲ್ಕು ಪ್ರಕರಣಗಳಲ್ಲಿ ಅವರು ಲಾಲು ಪ್ರಸಾದ್ ಯಾದವ್ ಅವರು ಈಗಾಗಲೇ ದೋಷಿ ಎಂದು ಪರಿಗಣಿತರಾಗಿದ್ದಾರೆ. ಈಗಾಗಲೇ ಶಿಕ್ಷೆಯ ಅರ್ಧ ಭಾಗವನ್ನು ಅನುಭವಿಸಿದ ಹಿನ್ನೆಲೆಯಲ್ಲಿ ಪ್ರಸ್ತುತ ಅವರು ಜಾಮೀನಿ ನಲ್ಲಿದ್ದಾರೆ. ಬಂಕಾ-ಭಾಗಲ್ಪುರ ಖಜಾನೆಯಿಂದ ಕಾನೂನು ಬಾಹಿರವಾಗಿ ಹಣ ತೆಗೆದ ಪ್ರಕರಣಕ್ಕೆ ಸಂಬಂಧಿಸಿ ಪಾಟ್ನಾದ ಸಿಬಿಐ ನ್ಯಾಯಾಲಯದ ಮುಂದೆ ಒಂದು ಪ್ರಕರಣ ವಿಚಾರಣೆಗೆ ಬಾಕಿ ಇದೆ







