ಬೆಂಗಳೂರು: ದೇವಸ್ಥಾನಗಳಲ್ಲಿ ಮಿತಿಗಿಂತ ಅಧಿಕ ಶಬ್ದ: ಪೊಲೀಸರಿಂದ ನೋಟಿಸ್, ಕ್ರಮದ ಎಚ್ಚರಿಕೆ

ಬೆಂಗಳೂರು, ಫೆ.15: ನಗರದ ಬಸವನಗುಡಿಯಲ್ಲಿರುವ ಶ್ರೀ ದೊಡ್ಡ ಗಣಪತಿ ದೇವಸ್ಥಾನ ಹಾಗೂ ಸಮೂಹ ದೇವಾಲಯಗಳಲ್ಲಿ ಡೆಸಿಬಲ್ ಗಿಂತ ಹೆಚ್ಚಿನ ಶಬ್ದ ಕೇಳಿಬರುತ್ತಿದೆ ಎಂದು ಬಸವನಗುಡಿ ಪೊಲೀಸ್ ಠಾಣೆಯಿಂದ ಈ ದೇವಸ್ಥಾನಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಸೂಚನೆಯ ಹೊರತಾಗಿಯೂ ಈ ದೇವಾಲಯಗಳಲ್ಲಿ ನಿಗದಿತ ಡೆಸಿಬಲ್ ಗಿಂತ ಹೆಚ್ಚಿನ ಶಬ್ದ ಕೇಳಿಬಂದಲ್ಲಿ Noise Pollution (Regulation and control rules-2000 amended, 2010 farmed under the Environment Protection act 1986ರ ಅಡಿಯಲ್ಲಿ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ನೋಟಿಸ್ ಹಿನ್ನೆಲೆಯಲ್ಲಿ ದೊಡ್ಡ ಗಣಪತಿ ದೇವಸ್ಥಾನ ಹಾಗೂ ಸಮೂಹ ದೇವಾಲಯಗಳಲ್ಲಿ ಮಹಾಮಂಗಳಾರತಿ, ಅಭಿಷೇಕ ಇತ್ಯಾದಿ ಸಂದರ್ಭಗಳಲ್ಲಿ ಹಾಗೂ ದೇವಾಲಯದ ಆವರಣದಲ್ಲಿ ಉಪಯೋಗಿಸುವಂತಹ ಡಮರುಗ, ಧ್ವನಿವರ್ಧಕ ಯಂತ್ರಗಳಲ್ಲಿ ಮಿತಿಗಿಂತ ಹೆಚ್ಚಿನ ಶಬ್ದ ಉಂಟಾಗದಂತೆ ಕ್ರಮ ಕೈಗೊಳ್ಳಲು ದೊಡ್ಡ ಗಣಪತಿ ಸಮೂಹ ದೇವಸ್ಥಾನಗಳ ಕಾರ್ಯನಿರ್ವಹಣಾಧಿಕಾರಿಯು ದೇವಳದ ಸಿಬ್ಬಂದಿಗೆ ಸೂಚಿಸಿದ್ದಾರೆ.
ಸಮೂಹ ದೇವಸ್ಥಾನಗಳೆಂದರೆ ದೊಡ್ಡ ಗಣೇಶ ದೇವಸ್ಥಾನ, ಮಿಂಟೋ ಆಂಜನೇಯ ಸ್ವಾಮಿ ದೇವಸ್ಥಾನ, ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ದೊಡ್ಡ ಬಸವಣ್ಣ ದೇವಸ್ಥಾನ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಹಾಗೂ ಇನ್ನಿತರ ದೇವಸ್ಥಾನಗಳು ಇದರಡಿ ಬರಲಿವೆ.








