ಬೇಲೂರು: ಹಿಜಾಬ್ ಧರಿಸಿದ್ದಕ್ಕೆ ಪ್ರವೇಶ ನಿರಾಕರಣೆ, ಶಾಲೆಯ ಮುಂಭಾಗದಲ್ಲಿ ವಿದ್ಯಾರ್ಥಿನಿಯರಿಂದ ಧರಣಿ

ಬೇಲೂರು, ಫೆ.15: ಬೇಲೂರಿನ ಸರಕಾರಿ ಜೂನಿಯರ್ ಕಾಲೇಜಿನ ಪಕ್ಕದಲ್ಲಿರುವ ಶಾಲೆಗೆ ಇಂದು, ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಲಾಯಿತು. ಈ ವೇಳೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿ ಪ್ರವೇಶ ಕೋರಿ ಶಾಲಾ ಗೇಟಿನ ಎದುರು ಧರಣಿ ನಡೆಸಿದರು.
ಇಂದು ಬೆಳಗ್ಗೆ ಶಾಲೆಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಮುಖ್ಯ ಶಿಕ್ಷಕರು ಗೇಟಿನ ಮುಂಭಾಗದಲ್ಲಿ ತಡೆದರು. ಹೈಕೋರ್ಟಿನ ಮಧ್ಯಂತರ ಆದೇಶದ ಅನ್ವಯ, ಎಲ್ಲಾ ವಿದ್ಯಾರ್ಥಿನಿಯರು ತೆಗೆದು ಶಾಲೆಯ ಒಳಗೆ ಪ್ರವೇಶಿಸುವಂತೆ ಸೂಚಿಸಿದರು. ಆದರೆ ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು, ನಾವು ಶಾಲೆಗೆ ದಾಖಲಾಗಿ ಅಂದಿನಿಂದ ಇಂದಿನವರೆಗೂ, ಹಿಜಾಬ್ ಧರಿಸಿಕೊಂಡು ಬರುತ್ತಿದ್ದೆವು. ಇದೀಗ ಏಕಾಏಕಿ ಹಿಜಾಬ್ ತೆಗೆಯುವಂತೆ ಏಕೆ ಹೇಳುತ್ತಿದ್ದೀರಿ ಪ್ರಶ್ನಿಸಿದರು. ಹಿಜಾಬ್ ಧರಿಸಿಯೇ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡಿ ಎಂದು ವಿದ್ಯಾರ್ಥಿನಿಯರು ಜೂನಿಯರ್ ಕಾಲೇಜು ಆವರಣದಲ್ಲಿ ಶಾಲೆಯ ಮುಂಭಾಗದಲ್ಲಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಬೇಲೂರಿನ ವೃತ್ತ ನಿರೀಕ್ಷಕ ಯೋಗೇಶ್ ನೇತೃತ್ವದಲ್ಲಿ ಪೊಲೀಸರು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.





