ಪಜೀರು, ಕೈರಂಗಳ ಕೈಗಾರಿಕಾ ಪ್ರದೇಶದಲ್ಲಿ ಖಾಯಂ ಅಗ್ನಿಶಾಮಕ ಠಾಣೆ: ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು, ಫೆ. 15: ‘ಉಳ್ಳಾಲ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಪಜೀರು/ಕೈರಂಗಳ ಕೈಗಾರಿಕಾ ಪ್ರದೇಶದಲ್ಲಿ ಖಾಯಂ ಅಗ್ನಿಶಾಮಕ ಠಾಣೆಯ ಕಟ್ಟಡ ನಿರ್ಮಿಸಲು ಅನುಮೋದನೆ ನೀಡಿದ್ದು, ಸಿಬ್ಬಂದಿ ನೇಮಕಕ್ಕೂ ಪರಿಶೀಲನೆ ನಡೆಸಲಾಗುವುದು' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಆ ಪ್ರದೇಶದ ವ್ಯಾಪ್ತಿಯಲ್ಲಿ ವಿಶೇಷ ಆರ್ಥಿಕ ವಲಯ, ಐಟಿ ಸೆಜ್ ಸೇರಿದಂತೆ ಕೈಗಾರಿಕಾ ಪ್ರದೇಶವಿದೆ. ಕೆ ಸೇಫ್-2 ಯೋಜನೆಯಡಿ 2024-25ನೆ ಸಾಲಿನಲ್ಲಿ ಪಜೀರು/ಕೈರಂಗಳ ಕೈಗಾರಿಕಾ ಪ್ರದೇಶದಲ್ಲಿ ಖಾಯಂ ಅಗ್ನಿಶಾಮಕ ಠಾಣೆ ಕಟ್ಟಡವನ್ನು ನಿರ್ಮಿಸಲು ಅನುದಾನ ನಿಗದಿಪಡಿಸಲಾಗಿದೆ'.
‘22 ಕಿಮೀ ವ್ಯಾಪ್ತಿಯಲ್ಲಿ ಪಾಂಡೇಶ್ವರ ಅಗ್ನಿಶಾಮಕ ಠಾಣೆ ಇದೆ. ಜೊತೆಗೆ 27 ಕಿಮೀ ವ್ಯಾಪ್ತಿಯಲ್ಲಿ ಕದ್ರಿ ಅಗ್ನಿಶಾಮಕ ಠಾಣೆ ಇದೆ. ಹೊಸ ಠಾಣೆಗೆ ಈಗಾಗಲೇ ಜಾಗವನ್ನು ಮೀಸಲಿಟ್ಟಿದ್ದು, ಶೀಘ್ರದಲ್ಲೆ ಠಾಣೆ ಕಟ್ಟಡ ಮತ್ತು ಸಿಬ್ಬಂದಿ ನೇಮಕಾತಿ ಆರ್ಥಿಕ ಇಲಾಖೆ ಅನುಮತಿ ಪಡೆದು ಕ್ರಮ ವಹಿಸಲಾಗುವುದು' ಎಂದು ಅವರು ಸದನಕ್ಕೆ ತಿಳಿಸಿದರು.





