ಚಿಕ್ಕಮಗಳೂರು:ಸಮವಸ್ತ್ರದ ವೇಲನ್ನೇ ಹಿಜಾಬ್ ಮಾದರಿಯಲ್ಲಿ ಧರಿಸಿದ ವಿದ್ಯಾರ್ಥಿನಿಯರು; ತರಗತಿಗೆ ಪ್ರವೇಶ ನೀಡದ ಶಿಕ್ಷಕರು
ಹಿಜಾಬ್ ಮಾದರಿಯಲ್ಲಿ ವೇಲ್ ಧರಿಸಲು ಅವಕಾಶವಿಲ್ಲ ಎಂದ ಡಿಡಿಪಿಐ ಬಿ.ವಿ.ಮಲ್ಲೇಶಪ್ಪ
ಚಿಕ್ಕಮಗಳೂರು, ಫೆ.15: ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಸ್ಕಾರ್ಫ್ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದು, ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಸೋಮವಾರ ಕಾಫಿನಾಡಿನಲ್ಲಿ 9, 10ನೇ ತರಗತಿಗಳು ಪುನಾರಂಭಗೊಂಡಿದೆ. ಸೋಮವಾರ ಜಿಲ್ಲೆಯಲ್ಲಿ ಈ ವಿವಾದ ಸಂಬಂಧ ಯಾವುದೇ ಅಹಿತಕರ ಘಟನೆಗಳು ವರದಿಯಾಗದಿದ್ದರೂ ಮಂಗಳವಾರ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಸ್ಕಾರ್ಫ್ ವಿವಾದ ಮತ್ತೆ ಭುಗಿಲೆದ್ದಿದ್ದು, ಸ್ಕಾರ್ಫ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರನ್ನು ಶಾಲೆಗೆ ಸೇರಿಸದ ಪರಿಣಾಮ ವಿದ್ಯಾರ್ಥಿನಿಯರು ಶಾಲೆಗಳಿಂದ ಹೊರಗುಳಿದ ಘಟನೆ ನಡೆದಿದೆ.
ಸ್ಕಾರ್ಫ್ ವಿವಾದ ಮಂಗಳವಾರ ಜಿಲ್ಲೆಯ ಚಿಕ್ಕಮಗಳೂರು ಹಾಗೂ ಮೂಡಿಗೆರೆ ತಾಲೂಕು ವ್ಯಾಪ್ತಿಯ ಎರಡು ಸರಕಾರಿ ಶಾಲೆಗಳಲ್ಲಿ ಭುಗಿಲೆದ್ದಿದ್ದು, ಶಾಲಾ ಸಮವಸ್ತ್ರದ ವೇಲ್‍ಅನ್ನೇ ಸ್ಕಾರ್ಫ್ ಮಾದರಿಯಲ್ಲಿ ಧರಿಸಿ ಆಗಮಿಸಿದ್ದ ವಿದ್ಯಾರ್ಥಿನಿಯರನ್ನು ತರಗತಿಗಳಿಗೆ ಹಾಜರಾಗಲು ಬಿಡದ ಶಿಕ್ಷಕರ ಕ್ರಮ ಖಂಡಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆಯ ಪ್ರಾಂಶುಪಾಲರು, ಪೊಲೀಸರು ಹಾಗೂ ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಶಾಲೆಗೆ ರಜೆ ಘೋಷಣೆ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದ ಸರಕಾರಿ ಶಾಲೆಯಲ್ಲಿ ವರದಿಯಾಗಿದ್ದರೇ, ಸ್ಕಾರ್ಫ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರನ್ನು ಶಾಲೆಯ ಗೇಟ್ ಎದುರೇ ತಡೆದು ನಿಲ್ಲಿಸಿದ ಘಟನೆ ಮೂಡಿಗೆರೆ ಪಟ್ಟಣದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದಿದೆ.
ಮಂಗಳವಾರ ನಗರದ ಹೊರವಲಯದ ಇಂದಾವರದಲ್ಲಿರುವ ಮೌಲಾನ ಅಜಾದ್ ಮಾದರಿ ಶಾಲೆಯ 167 ವಿದ್ಯಾರ್ಥಿಗಳ ಪೈಕಿ 25 ವಿದ್ಯಾರ್ಥಿಗಳು ಎಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ ಬರೆಯಬೇಕಿತ್ತು. ಆದರೆ ಶಾಲೆಯ ಮುಸ್ಲಿಂ ಸಮುದಾಯದ ಬಹುತೇಕ ವಿದ್ಯಾರ್ಥಿನಿಯರು ಶಾಲಾ ಸಮವಸ್ತ್ರದೊಂದಿಗೆ ಸಮವಸ್ತ್ರದ ವೇಲನ್ನೇ ಹಿಜಾಬ್ ಮಾದರಿಯಲ್ಲಿ ತಲೆಯ ಮೇಲೆ ಧರಿಸಿ ಬಂದಿದ್ದರು. ನ್ಯಾಯಾಲಯದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ತಲೆ ಮೇಲೆ ಧರಿಸಿರುವ ವಸ್ತ್ರವನ್ನು ತೆಗೆದು ಪರೀಕ್ಷೆ ಬರೆಯುವಂತೆ ಶಿಕ್ಷಕರು ತಿಳಿಸಿದರು.
ಈ ವೇಳೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ತಪ್ಪಿದಲ್ಲಿ ನಾವು ಪರೀಕ್ಷೆ ಬರೆಯುವುದಿಲ್ಲ ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದರು. ಈ ವೇಳೆ ವಿದ್ಯಾರ್ಥಿಗಳ ಜೊತೆ ಆಗಮಿಸಿದ್ದ ಪೋಷಕರು ಶಿಕ್ಷಕರು, ಪ್ರಾಂಶುಪಾಲರೊಂದಿಗೆ ಮಾತಿನ ಚಕಮಕಿ ನಡೆಸಿದರು. ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿಲ್ಲ, ಸಮವಸ್ತ್ರದ ವೇಲನ್ನೇ ತಲೆಯ ಮೇಲೆ ಹಾಕಿಕೊಂಡು ಬಂದಿದ್ದಾರಷ್ಟೆ. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಈ ವೇಳೆ ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಪೋಷಕರು ನಡುವೆ ಮಾತಿನ ಚಕಮಕಿ ನಡೆಯಿತು. ಶಾಲಾ ಆವರಣದಲ್ಲಿ ಗೊಂದಲದ ವಾತವರಣ ಸೃಷ್ಟಿಯಾಯಿತು. ಈ ವೇಳೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಸ್ವರ್ಣ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿನಿಯರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಪೊಲೀಸರ ಮಾತಿಗೆ ವಿದ್ಯಾರ್ಥಿನಿಯರು ಸೊಪ್ಪು ಹಾಕದೇ ಸ್ಕಾರ್ಫ್ ಧರಿಸಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಹಠ ಸಾಧಿಸಿದರು.
ಶಿಕ್ಷಕರು, ಪೊಲೀಸ್ ಸಿಬ್ಬಂದಿ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಕಾರ್ಫ್ ತೆಗೆದು ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರನ್ನು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಸ್ಕಾರ್ಫ್ ತೆಗೆದು ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯರು ನಿರಾಕರಿಸಿದ್ದರಿಂದ ಸ್ಥಳದಲ್ಲಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ವಿ.ಮಲ್ಲೇಶಪ್ಪ ಶಾಲೆಗೆ ರಜೆ ಘೋಷಣೆ ಮಾಡಿದರು.
ರಜೆ ನೀಡಿದರೂ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಮುಂದಾದ ವಿದ್ಯಾರ್ಥಿನಿಯರು: ಶಾಲೆಯ ಸಮವಸ್ತ್ರದ ದುಪ್ಪಟವನ್ನು ಸ್ಕಾರ್ಫ್ ಮಾದರಿಯಲ್ಲಿ ಧರಿಸಿ ಬಂದಿದ್ದ ವಿದ್ಯಾರ್ಥಿಯರನ್ನು ತಡೆದ ಶಿಕ್ಷಕರು, ಪೊಲೀಸರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಕಾರ್ಫ್ ತೆಗೆದು ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿನಿಯರು ಮತ್ತು ಪೋಷಕರಲ್ಲಿ ಮನವಿ ಮಾಡಿದರೂ ಇದಕ್ಕೆ ಒಪ್ಪದ ಪರಿಣಾಮ ವಿದ್ಯಾರ್ಥಿಗಳು, ಪೋಷಕರು ಶಾಲಾ ಸಿಬ್ಬಂದಿ, ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಾ ಮಧ್ಯಾಹ್ನದವರೆಗೂ ಬಿಸಿಲಿನಲ್ಲಿ ಒಣಗುತ್ತಾ ಶಾಲೆಯ ಆವರಣದಲ್ಲೇ ಕಾಲ ಕಳೆದರು. ಶಾಲಾ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದ ಸಂದರ್ಭದಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆಯಬೇಕಿದ್ದವರು ಹಾಗೂ 8, 9ನೇ ತರಗತಿ ವಿದ್ಯಾರ್ಥಿನಿಯರು ಶಾಲೆಯ ಒಳಗೆ ಸ್ಕಾರ್ಫ್ ಧರಿಸಿಯೇ ತರಗತಿಗಳನ್ನು ಪ್ರವೇಶಿಸಿದರು. ಈ ವೇಳೆ ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಅವರನ್ನು ಬರಮಾಡಿಕೊಂಡರು. ಈ ಘಟನೆಯ ಬಳಿಕ ಡಿಡಿಪಿಐ ಶಾಲೆಗೆ ರಜೆ ಘೋಷಣೆ ಮಾಡಿದರು.
ಶಾಲೆಗೆ ರಜೆ ಘೋಷಣೆ ಮಾಡುತ್ತಿದ್ದಂತೆ ಶಾಲಾ ಆವರಣದೊಳಗೆ ಪ್ರವೇಶಿಸಿದ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ರಜೆ ನೀಡಿದ್ದೀರಿ, ಪರೀಕ್ಷೆ ನಡೆಸುವಂತೆ ಡಿಡಿಪಿಐ ಬಿ.ವಿ.ಮಲ್ಲೇಶಪ್ಪ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಶಾಲಾ ಕೊಠಡಿಯೊಳಗೆ ನುಗ್ಗಿ ಶಿಕ್ಷಕರನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾದರು. ಪೊಲೀಸರು ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳ ಪೋಷಕರನ್ನು ಶಾಲಾ ಆವರಣಂದ ಹೊರ ಕಳಿಸಿದರು. ಈ ಘಟನೆಯಿಂದ ಶಾಲಾ ಆವರಣದಲ್ಲಿ ಕೆಲಕಾಲ ಬೀಗುವಿನ ವಾತವರಣ ನಿರ್ಮಾಣವಾಗಿತ್ತು. ರಜೆ ಹಿನ್ನೆಲೆಯಲ್ಲಿ ಕೆಲ ಹೊತ್ತಿನ ಬಳಿಕ ವಿದ್ಯಾರ್ಥಿಗಳು ಮತ್ತು ಪೋಷಕರು ಮನೆಯ ದಾರಿ ಹಿಡಿದರು.
ಕೇಸರಿ ಶಾಲು ತೆಗೆದ ವಿದ್ಯಾರ್ಥಿ: ಶಾಲಾ ಆವರಣದಲ್ಲಿ ಸ್ಕಾರ್ಫ್ ಸಂಬಂಧ ವಾಗ್ವಾದ ನಡೆಯುತ್ತಿದ್ದ ಸಂದರ್ಭದಲ್ಲಿ ಅಲ್ಲಿದ್ದ ವಿದ್ಯಾರ್ಥಿಯೊಬ್ಬ ತನ್ನ ಬ್ಯಾಗ್‍ನಿಂದ ಕೇಸರಿ ಶಾಲು ತಗೆದ ಘಟನೆ ನಡೆಯಿತು. ಪೋಷಕರು, ಶಾಲಾ ಆಡಳಿತ ಮಂಡಳಿ ಮಧ್ಯೆ ಸ್ಕಾರ್ಫ್ ಜಟಾಪಟಿ ನಡೆಯುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಕೇಸರಿ ಶಾಲು ಬ್ಯಾಗ್‍ನಿಂದ ಹೊರತಗೆದು ಕೈಯಲ್ಲಿ ಹಿಡಿದುಕೊಂಡಿದ್ದ. ಇದನ್ನು ಗಮನಿಸಿದ ಪೊಲೀಸರು ಶಾಲನ್ನು ಬ್ಯಾಗ್‍ನಲ್ಲಿ ಇರಿಸುವಂತೆ ಗದರಿಸಿದ್ದರಿಂದ ವಿದ್ಯಾರ್ಥಿ ಶಾಲಿನೊಂದಿಗೆ ಸ್ಥಳದಿಂದ ಕಾಲ್ಕಿತ್ತ.
ಕೆಲಹೊತ್ತು ಶಾಲಾ ಆವರಣದಿಂದ ಕದಲದ ವಿದ್ಯಾರ್ಥಿಗಳು ಮತ್ತು ಪೋಷಕರು: ಸ್ಕಾರ್ಫ್ ವಿಚಾರ ತಾರಕಕ್ಕೇರುತ್ತಿದ್ದಂತೆ ಶಾಲೆಗೆ ಮಂಗಳವಾರ ರಜೆ ಘೋಷಿಸಲಾಯಿತು. ಇದ ರಿಂದ ಶಾಲಾ ಆವರಣದಲ್ಲಿ ಗೊಂದಲದ ವಾತವರಣ ನಿರ್ಮಾಣವಾಗಿತ್ತು. ಶಾಲೆಗೆ ರಜೆ ನೀಡಲಾಗಿದೆ, ಮನೆಗೆ ತೆರಳುವಂತೆ ತಿಳಿಸಿದರೂ ವಿದ್ಯಾರ್ಥಿಗಳು ಮತ್ತು ಪೋಷಕರು ಕೆಲಹೊತ್ತು ಶಾಲಾ ಆವರಣದಲ್ಲೇ ಜಮಾಯಿಸಿದ್ದರು. ಸೋಮವಾರದಿಂದ ಜಿಲ್ಲೆಯಲ್ಲಿ ಪ್ರೌಢಶಾಲೆಗಳು ಆರಂಭವಾಗಿದ್ದು, ಸೋಮವಾರ ಸ್ಕಾರ್ಫ್ ಸಂಬಂಧ ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ, ಮಂಗಳವಾರ ಸ್ಕಾರ್ಫ್ ವಿವಾದ ಭುಗಿಲೆದ್ದಿದೆ.
ಶಿಕ್ಷಕರು, ಪೊಲೀಸರು, ಶಿಕ್ಷಣ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳ ಮನವೊಲಿಸಲು ಎಷ್ಟು ಪ್ರಯತ್ನಿಸಿದರೂ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಸ್ಕಾರ್ಫ್ ತೆಗೆದು ತರಗತಿಗೆ ಹಾಜರಾಗಲು ಒಪ್ಪಲಿಲ್ಲ. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿರಲಿಲ್ಲ. ಸಮವಸ್ತ್ರದ ವೇಲನ್ನೇ ಹಿಜಾಬ್ ಮಾದರಿಯಲ್ಲಿ ಧರಿಸಿ ಬಂದಿದ್ದರು. ಆ ರೀತಿ ವೇಲ್ ಧರಿಸಲು ಅವಕಾಶವಿಲ್ಲ. ಅದನ್ನು ತೆಗೆದು ತರಗತಿಗಳಿಗೆ ಹಾಜರಾಗಲು, ಪರೀಕ್ಷೆ ಬರೆಯಲು ಅವರು ಒಪ್ಪುತ್ತಿಲ್ಲ, ಅನಿವಾರ್ಯವಾಗಿ ಮಂಗಳವಾರ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಪರೀಕ್ಷೆಯನ್ನು ಮುಂದಿನ ದಿನಗಳಲ್ಲಿ ನಡೆಸಲು ಅವಕಾಶ ಇದೆ. ಮಂಗಳವಾರ ಶಾಲೆಗೆ ರಜೆ ನೀಡಿದ್ದರೂ ಆನ್‍ಲೈನ್ ಕ್ಲಾಸ್ ನಡೆಯುತ್ತದೆ, ಆಫ್‍ಲೈನ್ ಕ್ಲಾಸ್‍ಗೆ ರಜೆ ನೀಡಲಾಗಿದೆ.
-ಬಿ.ವಿ.ಮಲ್ಲೇಶಪ್ಪ, ಡಿಡಿಪಿಐ.







