ಹಿಜಾಬ್ ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಗೃಹ ಸಚಿವರಿಗೆ ಪತ್ರ ಬರೆದ ಶಾಸಕ ರಘುಪತಿ ಭಟ್

ರಘುಪತಿ ಭಟ್
ಉಡುಪಿ, ಫೆ.15: ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆ ಸೇರಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮತೀಯ ಇಸ್ಲಾಮಿಕ್ ಸಂಘಟನೆಗಳು ಜನರಲ್ಲಿ ಕೋಮುವಾದ ಸೃಷ್ಟಿಸಿ ಅಶಾಂತಿ ಹಾಗೂ ಸಾಮಾಜಿಕ ಸ್ವಾಸ್ಥವನ್ನು ಹಾಳುಗೆಡಿಸುವಲ್ಲಿ ಷಡ್ಯಂತ್ರ ರೂಪಿಸುತಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರಗಿಸುವಂತೆ ಉಡುಪಿ ಶಾಸಕ ಕೆ. ರಘುಪತಿ ಭಟ್ ಇಂದು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಉಡುಪಿ ಜಿಲ್ಲೆಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ 12 ಮಂದಿ ವಿದ್ಯಾರ್ಥಿಗಳಿಗೆ ಮತೀಯವಾದಿ ಇಸ್ಲಾಮಿಕ್ ಸಂಘಟನೆಗಳು 3 ದಿನಗಳ ಕಾಲ ಅಜ್ಞಾನ ಸ್ಥಳದಲ್ಲಿ ಮತಾಂಧತೆಯ ಕುರಿತು ತರಬೇತಿ ನೀಡಿರುವುದು ತಿಳಿದುಬಂದಿದೆ. ಹಿಜಾಬ್ ವಿಚಾರ ಬಂದಾಗ ಕಾಲೇಜಿನ ಶಿಕ್ಷಣ ಸೇವಾ ಸಮಿತಿ ಈ 12 ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ-ಸೂಚನೆ ನೀಡಿದ್ದರೂ ಸಹ ಆರು ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ತರಗತಿಯೊಳಗೆ ಪ್ರವೇಶ ನೀಡುವಂತೆ ಹಕ್ಕೋತ್ತಾಯ ಮಂಡಿಸಿರುವುದು ಈ ಅಂಶಗಳನ್ನು ಸ್ಪಷ್ಟಪಡಿಸುತ್ತದೆ. ಇದು ಕೋಮು ಹಾಗೂ ಮತೀಯವಾದ ಸೃಷ್ಟಿಸಿ ಅಶಾಂತಿ ಹಾಗೂ ಸಾಮಾಜಿಕ ಸ್ವಾಸ್ಥವನ್ನು ಹಾಳುಗೆಡಿಸುವಲ್ಲಿ ಇಸ್ಲಾಮಿಕ್ ಮತೀಯ ಸಂಘಟನೆಗಳಾದ ಎಸ್ಡಿಪಿಐ ಹಾಗೂ ಸಿಎಫ್ಐ ಇವರ ಹುನ್ನಾರವಾಗಿದೆ ಎಂಬುದನ್ನು ತೋರಿಸುತ್ತದೆ. ಹಿಜಾಬ್ ವಿಚಾರದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ವಿದ್ಯಾಮಾನಗಳನ್ನು ಅವಲೋಕಿಸಿದಾಗ ಭಾರತದ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಂದಿಸುವುದು, ಭಾರತ ಮುಸ್ಲಿಮರ ಬಗ್ಗೆ ನೇತ್ಯಾತ್ಮಕ ಭಾವನೆ ಹುಟ್ಟುಹಾಕುವುದು ಮತಾಂಧ ಇಸ್ಲಾಂ ಸಂಘಟನೆಗಳ ಮುಖ್ಯ ಉದ್ದೇಶ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂದ ಈ ವ್ಯವಸ್ಥಿತ ಮತಾಂಧ ಇಸ್ಲಾಮಿಕ್ ಸಂಘಟನೆಗಳ ಹುನ್ನಾರದಿಂದ ಸಮಾಜದ ಸ್ವಾಸ್ಥ ಹಾಳಾಗುತ್ತಿರುವ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರುವುದಾಗಿ ರಘುಪತಿ ಭಟ್ ಪತ್ರದಲ್ಲಿ ಮನವಿ ಮಾಡಿದ್ದಾರೆ.