ದ.ಕ ಜಿಲ್ಲೆಯ ಮೂಲ್ಕಿಯಲ್ಲಿ ಪ್ರತ್ಯೇಕ ಸಂಚಾರ ಠಾಣೆ ಅವಶ್ಯಕತೆ ಇಲ್ಲ: ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು, ಫೆ. 15: ‘ಮೂಡಬಿದರೆಯಲ್ಲಿ ಸಂಚಾರ ಪೊಲೀಸ್ ಠಾಣೆಯನ್ನು ತೆರೆಯುವ ಪ್ರಸ್ತಾವನೆಗೆ ರಾಷ್ಟ್ರೀಯ ಪೊಲೀಸ್ ಆಯೋಗದ ಮಾರ್ಗಸೂಚಿಯನ್ವಯ ಮಾನದಂಡಗಳನ್ನು ಪೂರೈಸಿದಲ್ಲಿ ಸಂಚಾರ ಪೊಲೀಸ್ ಠಾಣೆ ಸೃಜಿಸುವ ಕುರಿತು ಪರಿಶೀಲಿಸಲಾಗುವುದು. ಆದರೆ, ಮೂಲ್ಕಿಯಲ್ಲಿ ಪ್ರತ್ಯೇಕ ಸಂಚಾರ ಪೊಲೀಸ್ ಠಾಣೆ ಅವಶ್ಯಕತೆ ಇರುವುದಿಲ್ಲ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಉಮಾನಾಥ ಎ.ಕೋಟ್ಯಾನ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಹೊಸ ಸಂಚಾರ ಪೊಲೀಸ್ ಠಾಣೆ ಮಂಜೂರಿಗೆ ಕನಿಷ್ಠ 150ರಿಂದ 200ರಷ್ಟು ರಸ್ತೆ ಅಪಘಾತ, ಸಂಚಾರ ನಿಯಮ ಉಲ್ಲಂಘನೆ ಘಟನೆಗಳು ನಡೆಯಬೇಕು. ಆದರೆ, ಪಟ್ಟಣದಲ್ಲಿ ಸಂಚಾರ ನಿಯಮ ಉಲ್ಲಂಘನೆಗಳ ಸಂಖ್ಯೆ ಮತ್ತು ಅಪಘಾತಗಳ ಸಂಖ್ಯೆ ಕಡಿಮೆ ಇದೆ ಎಂದರು.
‘ಮೂಡಬಿದರೆ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಠಾಣೆಯಿಂದ ಸಿಬ್ಬಂದಿಗಳನ್ನು ನೇಮಿಸಿ ಸುಗಮ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಸಂಚಾರ ನಿರ್ವಹಣೆಗೆ 2 ಪಿಎಸ್ಸೈ, 2 ಎಎಸ್‍ಐ, ಪೊಲೀಸ್ ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ನಿರ್ವಹಣೆ ಮಂಗಳೂರು ಉತ್ತರ ಠಾಣೆಯವರು ನಿರ್ವಹಿಸುತ್ತಿದ್ದಾರೆ' ಎಂದು ತಿಳಿಸಿದರು.
ಆರಂಭದಲ್ಲಿ ಮಾತನಾಡಿದ ಸದಸ್ಯ ಉಮಾನಾಥ ಕೋಟ್ಯಾನ್, ‘ಮೂಡಬಿದರೆ ಮತ್ತು ಮೂಲ್ಕಿಯಲ್ಲಿ ಸಂಚಾರ ಪೊಲೀಸ್ ಠಾಣೆ ಅಗತ್ಯವಿದೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ಗಣನೀಯ ಪ್ರಮಾಣದಲ್ಲಿ ಹೆಚ್ಚಿದ್ದು, ದಟ್ಟಣೆ ನಿಯಂತ್ರಿಸಿ ಸಾರ್ವಜನಿಕರ ಸಂಚಾರ ಸುರಕ್ಷತೆಗೆ ಕ್ರಮ ವಹಿಸಬೇಕು' ಎಂದು ಆಗ್ರಹಿಸಿದರು.







