ರೈತರನ್ನು ಕಾರು ಹರಿಸಿ ಕೊಂದ ಆಶಿಶ್ ಮಿಶ್ರಾ ಜಾಮೀನು ವಿರುದ್ಧ ಸುಪ್ರೀಂ ಮೆಟ್ಟಿಲೇರಲಿದ್ದೇವೆ: ರಾಕೇಶ್ ಟಿಕಾಯತ್

ಲಕ್ನೊ, ಫೆ. 15: ಲಖಿಂಪುರಖೇರಿಯಲ್ಲಿ ಕಾರು ಚಲಾಯಿಸಿ ಹತ್ಯೆ ಪ್ರಕರಣದ ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು ನೀಡಿರುವ ಕುರಿತಂತೆ ನಾವು ಶೀಘ್ರದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ. ರೈತರ ಒಕ್ಕೂಟಗಳ ಮಾತೃಸಂಸ್ಥೆ ಸಂಯುಕ್ತ ಕಿಸಾನ್ ಮೋರ್ಚಾ ಮನವಿ ಸಲ್ಲಿಸಲಿದೆ. ನಾವು ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ರೈತ ನಾಯಕರಾದ ರಾಕೇಶ್ ಟಿಕಾಯತ್ ಹಾಗೂ ಶಿವ ಕುಮಾರ್ ಕಕ್ಕಾ ಅವರ ಅಧ್ಯಕ್ಷತೆಯಲ್ಲಿ ಲಖಿಂಪುರಖೇರಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದ ರೈತರ ಒಕ್ಕೂಟಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ನಾಲ್ವರು ರೈತರು ಹಾಗೂ ಪತ್ರಕರ್ತನನ್ನು ಹತ್ಯೆಗೈದ ಪ್ರಕರಣದಲ್ಲಿ ಆಶಿಶ್ ಮಿಶ್ರಾ ಅವರಿಗೆ ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠ ಕಳೆದ ವಾರ ಜಾಮೀನು ಮಂಜೂರು ಮಾಡಿತ್ತು.
ಆಶಿಶ್ ಮಿಶ್ರಾಗೆ ಜಾಮೀನು ದೊರಕಿರುವುದನ್ನು ನೀವು ಹೇಗೆ ನೋಡುತ್ತೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಟಿಕಾಯತ್, ‘‘ಜನರು ಎಲ್ಲವನ್ನೂ ನೋಡಬಹುದು. ಇಂತಹ ಪ್ರಕರಣಗಳಲ್ಲಿ ಅವರಿಗೆ ಮೂರೇ ತಿಂಗಳಲ್ಲಿ ಜಾಮೀನು ದೊರಕಿದೆ ಎಂದಾದರೆ, ಇತರ ಪ್ರಕರಣಗಳಲ್ಲಿ ಏನಾಗಬಹುದು?’’ ಎಂದು ಪ್ರಶ್ನಿಸಿದರು. ‘‘ರೈತರ ಸರದಿ ಬಂದಾಗ (ಆನ್ಲೈನ್ ವಿಚಾರಣೆ ಸಂದರ್ಭ) ಇಂಟರ್ನೆಟ್ ಸಂಪರ್ಕದಲ್ಲಿ ಸಮಸ್ಯೆ ಇತ್ತು. ತಮ್ಮ ಮುಂದೆ ಏನು ದಾಖಲೆಗಳನ್ನು ಇರಿಸುತ್ತಾರೆ ಎಂಬುದನ್ನು ನ್ಯಾಯಾಧೀಶರು ಪರಿಗಣಿಸುತ್ತಾರೆ. ಕಾನೂನು ಏನು ಹೇಳುತ್ತದೆಯೋ ಅದನ್ನು ನ್ಯಾಯಾಲಯ ಮಾಡುತ್ತದೆ. ನಾವು ನಮ್ಮ ಪ್ರಕರಣವನ್ನು ಸಮರ್ಪಕವಾಗಿ ನ್ಯಾಯಾಲಯದ ಮುಂದೆ ಇರಿಸಲು ಸಾಧ್ಯವಾಗಿಲ್ಲದೇ ಇರಬಹುದು’’ ಎಂದು ಟಿಕಾಯತ್ ಹೇಳಿದರು.
‘‘ಜಾಮೀನು ನೀಡಿರುವುದರಲ್ಲಿ ಸರಕಾರದ ಪಾತ್ರವಿದೆ’’ ಎಂದು ಶಿವ ಕುಮಾರ್ ಕಕ್ಕಾ ಹೇಳಿದ್ದಾರೆ. ‘‘ಸರಕಾರಿ ವಕೀಲರಿದ್ದಾರೆ, ಪ್ರಾಸಿಕ್ಯೂಷನ್ ಇದ್ದಾರೆ ಹಾಗೂ ಪೊಲೀಸರು ಇದ್ದಾರೆ. ಆದರೆ, ಅವರು ತಮ್ಮ ಕೆಲಸವನ್ನು ಸರಿಯಾಗಿ ಮಾಡಲಿಲ್ಲ. ಅವರು ಸರಕಾರಕ್ಕೆ ನೆರವು ನೀಡುತ್ತಿದ್ದಾರೆ’’ ಎಂದು ಅವರು ಆರೋಪಿಸಿದರು.







