ಪ್ರಧಾನಿ ಮಾತು ನೀಡಿದ್ದರೂ ಕೇಂದ್ರವು ರೈತರಿಗೆ ಭರವಸೆಗಳನ್ನು ಈಡೇರಿಸಿಲ್ಲ: ಎಸ್ಕೆಎಂ

ಪ್ರಧಾನಿ ನರೇಂದ್ರ ಮೋದಿ
ಲಖಿಂಪುರ ಖೇರಿ (ಉ.ಪ್ರ),ಫೆ.15: ಪ್ರಧಾನಿ ನರೇಂದ್ರ ಮೋದಿಯವರು ಪ್ರಕಟಿಸಿದ್ದರೂ ಕೇಂದ್ರವು ರೈತರಿಗೆ ತನ್ನ ಭರವಸೆಗಳನ್ನು ಈಡೇರಿಸಲು ಶ್ರಮಿಸಿಲ್ಲ ಎಂದು ಮಂಗಳವಾರ ಇಲ್ಲಿ ಆರೋಪಿಸಿದ ಸಂಯುಕ್ತ ಕಿಸಾನ ಮೋರ್ಚಾ (ಎಸ್ಕೆಎಂ),‘ಬಿಜೆಪಿಯನ್ನು ಶಿಕ್ಷಿಸುವಂತೆ ’ ಉ.ಪ್ರದೇಶದ ಜನತೆಯನ್ನು ಕೋರಿಕೊಂಡಿತು.
ಎಸ್ಕೆಎಂ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ನಾಯಕ ಶಿವಕುಮಾರ್ ಶರ್ಮಾ ‘ಕಾಕಾಜಿ’ ಅವರು,ರೈತರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಎಂಎಸ್ಪಿ ವಿಷಯ ಸೇರಿದಂತೆ ಹಲವಾರು ಭರವಸೆಗಳನ್ನು ಸರಕಾರವು ನೀಡಿತ್ತು,ಆದರೆ ಅವುಗಳನ್ನು ಈಡೇರಿಸಲು ಅದು ವಿಫಲಗೊಂಡಿದೆ. ಪ್ರತಿಭಟನಾಕಾರರ ವಿರುದ್ಧದ ಎಲ್ಲ ಪ್ರಕರಣಗಳನ್ನು ಹಿಂದೆಗೆದುಕೊಳ್ಳಲಾಗುವುದು,ಪ್ರತಿಭಟನೆ ಸಂದರ್ಭ ಮೃತ ರೈತರ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಮತ್ತು ರೈತರನ್ನು ವಿದ್ಯುತ್ ಬಿಲ್ಗಳ ವ್ಯಾಪ್ತಿಯಿಂದ ಹೊರಗಿಡಲಾಗುವುದು ಸೇರಿದಂತೆ ಹಲವು ಭರವಸೆಗಳನ್ನು ನೀಡಲಾಗಿತ್ತು ಎಂದು ಹೇಳಿದರು.
ಕೃಷಿ ತ್ಯಾಜ್ಯ ಸುಡುವಿಕೆಗೆ ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಇರುವ ಅವಕಾಶವನ್ನು ತೆಗೆಯಲಾಗುವುದು ಮತ್ತು ಎಂಎಸ್ಪಿ ಖಾತರಿಗೆ ಕಾನೂನು ತರಲಾಗುವುದೆಂದು ಅತ್ಯಂತ ಮಹತ್ವದ ಭರವಸೆಯನ್ನೂ ನೀಡಲಾಗಿತ್ತು. ಆದರೆ ಅದಕ್ಕಾಗಿ ಈವರೆಗೆ ಯಾವುದೇ ಸಮಿತಿಯನ್ನು ಸಹ ರಚಿಸಲಾಗಿಲ್ಲ.ಮೋದಿ 2021,ನ.19ರಂದು ಸಮಿತಿ ರಚನೆಯ ಭರವಸೆಯನ್ನು ನೀಡಿದ್ದರು ಎಂದರು.
ಸಮಿತಿ ರಚನೆಗಾಗಿ ಸರಕಾರವು ಚುನಾವಣಾ ಆಯೋಗದ ಅನುಮತಿಯನ್ನು ಕೋರಲಿದೆ ಎಂದು ಕೃಷಿ ಸಚಿವ ನರೇಂದ್ರ ತೋಮರ್ ಅವರು ಹಿಂದಿನ ಸಂಸತ್ ಅಧಿವೇಶನದಲ್ಲಿ ಹೇಳಿದ್ದರಾದರೂ ಪ್ರಧಾನಿಯವರ ಪ್ರಕಟಣೆಯ ಆಧಾರದಲ್ಲಿ ಸಮಿತಿಯನ್ನು ರಚಿಸಬಹುದಿತ್ತು ಮತ್ತು ಅದು ಚುನಾವಣಾ ಆಯೋಗದ ಮೇಲೆ ಯಾವುದೇ ಪರಿಣಾಮವನ್ನು ಬೀರುತ್ತಿರಲಿಲ್ಲ ಎಂದು ಶರ್ಮಾ ಹೇಳಿದರು.
‘ಯಾರಿಗೆ ಮತ ನೀಡಬೇಕು ಎಂದು ನಾವು ಯಾರಿಗೂ ಸೂಚಿಸುವುದಿಲ್ಲ,ಆದರೆ ಬಿಜೆಪಿಯನ್ನು ಶಿಕ್ಷಿಸಿ. ಯಾರಿಗೆ ಮತ ಹಾಕಬೇಕು ಎನ್ನುವುದು ರೈತರಿಗೆ ಗೊತ್ತು. ಸರಕಾರವನ್ನು ಯಾರು ರಚಿಸುತ್ತಾರೆ ಎನ್ನುವುದನ್ನು ನಿರ್ಧರಿಸುವುದು ನಮ್ಮ ಕೆಲಸವಲ್ಲ. ಸರಕಾರವು ನಮ್ಮನ್ನು ಬೆಂಬಲಿಸುವ ಪ್ರಮಾಣದಲ್ಲೇ ನಾವು ಅದನ್ನು ಬೆಂಬಲಿಸುತ್ತೇವೆ ’ ಎಂದು ಅವರು ತಿಳಿಸಿದರು.







