ಉಕ್ರೇನ್ ಗಡಿಯಿಂದ ಕೆಲವು ತುಕಡಿ ಮೂಲನೆಲೆಗೆ ವಾಪಾಸು: ರಶ್ಯಾ ಘೋಷಣೆ

ಸಾಂದರ್ಭಿಕ ಚಿತ್ರ
ಮಾಸ್ಕೋ, ಫೆ.15: ಉಕ್ರೇನ್ ನ ಗಡಿಭಾಗದಲ್ಲಿ ಸೇನಾ ಕವಾಯತಿನಲ್ಲಿ ಪಾಲ್ಗೊಂಡಿದ್ದ ಕೆಲವು ತುಕಡಿಗಳು ತಮ್ಮ ನೆಲೆಗಳಿಗೆ ಹಿಂತಿರುಗಲಿವೆ ಎಂದು ರಶ್ಯಾ ಘೋಷಿಸಿದ್ದು, ಇದು ಉಕ್ರೇನ್ ನ ಮೇಲೆ ತಕ್ಷಣ ಆಕ್ರಮಣ ನಡೆಸಲು ರಶ್ಯಾ ಯೋಚಿಸಿಲ್ಲ ಎಂಬುದರ ಸೂಚನೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಉಕ್ರೇನ್ ಬಿಕ್ಕಟ್ಟಿಗೆ ಮೂಲಕಾರಣವಾದ ಭದ್ರತೆಗೆ ಎದುರಾಗಿರುವ ಆತಂಕದ ಬಗ್ಗೆ ಸಮಾಲೋಚನೆ, ಚರ್ಚೆಗೆ ಸಿದ್ಧ ಎಂದು ಸೋಮವಾರ ರಶ್ಯಾದ ವಿದೇಶ ವ್ಯವಹಾರ ಸಚಿವರು ಹೇಳಿಕೆ ನೀಡಿದ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿರುವುದು ಗಮನಾರ್ಹವಾಗಿದ್ದು ಇದರಿಂದ ಜಾಗತಿಕ ಶೇರು ಮಾರುಕಟ್ಟೆ ಮಂಗಳವಾರ ತುಸು ಚೇತರಿಸಿಕೊಂಡಿದೆ. ಆದರೂ ರಶ್ಯಾದ ಆಕ್ರಮಣ ಯಾವುದೇ ದಿನ ಸಂಭವಿಸಬಹುದು.
ಉಕ್ರೇನ್ ಗಡಿಪ್ರದೇಶಕ್ಕೆ ಶಸ್ತ್ರಾಸ್ತ್ರ ರವಾನೆಯನ್ನು ಮುಂದುವರಿಸಿರುವುದು ಇದಕ್ಕೆ ನಿದರ್ಶನವಾಗಿದೆ ಎಂದು ಪಾಶ್ಚಿಮಾತ್ಯ ದೇಶಗಳು ಎಚ್ಚರಿಕೆ ನೀಡಿವೆ. ರಶ್ಯಾದ ಆಕ್ರಮಣದ ಅಪಾಯ ದೂರವಾಗಿಲ್ಲ. ಆದರೆ ಅಪಾಯದಿಂದ ದೂರ ಉಳಿಯುವ ಅವಕಾಶ ಮತ್ತು ಸಮಯ ರಶ್ಯಾಕ್ಕೆ ಇನ್ನೂ ಇದೆ ಎಂದು ಬ್ರಿಟನ್ನ ವಿದೇಶಾಂಗ ಕಾರ್ಯದರ್ಶಿ ಲಿರ್ ಟ್ರುಸ್ ಹೇಳಿದ್ದಾರೆ. ನಾರ್ವೆ ಕೂಡಾ ಇದೇ ರೀತಿಯ ಎಚ್ಚರಿಕೆಯ ಸಂದೇಶ ರವಾನಿಸಿದೆ.
ರಶ್ಯಾದ ಘೋಷಣೆಯ ಬಗ್ಗೆ ಉಕ್ರೇನ್ ನ ಮುಖಂಡರು ಸಂದೇಹ ವ್ಯಕ್ತಪಡಿಸಿದ್ದಾರೆ. ರಶ್ಯಾ ನಿರಂತರವಾಗಿ ವಿಭಿನ್ನ ಹೇಳಿಕೆ ನೀಡುತ್ತಿದೆ. ನಮ್ಮಲ್ಲಿ ಒಂದು ಮಾತಿದೆ ‘ ಕೇಳಿದ್ದನ್ನು ನಂಬಬಾರದು, ಕಣ್ಣಾರೆ ಕಂಡರೆ ಮಾತ್ರ ನಂಬಬಹುದು’ ಎಂದು. ಅದರ ಪ್ರಕಾರ ರಶ್ಯಾದ ಪಡೆ ವಾಪಸಾಗುವುದನ್ನು ಕಂಡರೆ ಮಾತ್ರ ನಾವು ಈ ಹೇಳಿಕೆಯನ್ನು ನಂಬಬಹುದು ಎಂದು ಉಕ್ರೇನ್ ನ ವಿದೇಶ ವ್ಯವಹಾರ ಸಚಿವ ಡಿಮಿಟ್ರೊ ಕುಲೆಬಾ ಹೇಳಿದ್ದಾರೆ. ಈ ಮಧ್ಯೆ, ಸೇನಾ ತುಕಡಿಯ ವಾಪಸಾತಿ ಬಗ್ಗೆ ರಶ್ಯಾದ ಘೋಷಣೆ ಬಿರುಸಿನ ರಾಜತಾಂತ್ರಿಕ ಚಟುವಟಿಕೆಗೆ ನಾಂದಿ ಹಾಡಿದೆ.
ರಶ್ಯಾಕ್ಕೆ ಭೇಟಿ ನೀಡಿ ಅಧ್ಯಕ್ಷ ಪುಟಿನ್ ಜತೆ ಸಮಾಲೋಚಿಸುವುದಾಗಿ ಜರ್ಮನ್ ಛಾನ್ಸಲರ್ ಒಲಾಫ್ ಶಾಲ್ಝ್ ಹೇಳಿದ್ದಾರೆ. ಪೋಲಂಡ್ನ ವಿದೇಶ ಸಚಿವ ಝಿಗ್ನಿಯೆವ್ ರೊವ್ ಮಂಗಳವಾರ ಮಾಸ್ಕೋ ತಲುಪಿದ್ದು ರಶ್ಯಾದ ವಿದೇಶ ವ್ಯವಹಾರ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇಟಲಿಯ ವಿದೇಶ ಸಚಿವರು ಉಕ್ರೇನ್ಗೆ ಭೇಟಿ ನೀಡಿ ಅಲ್ಲಿನ ವಿದೇಶ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.







